7

ಸಿಇಟಿ: ಮೊದಲ ದಿನದ ದಾಖಲಾತಿ ಪರಿಶೀಲನೆ ಸುಗಮ

Published:
Updated:
ಸಿಇಟಿ: ಮೊದಲ ದಿನದ ದಾಖಲಾತಿ ಪರಿಶೀಲನೆ ಸುಗಮ

ಬೆಂಗಳೂರು: ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಸುಗಮವಾಗಿ ನಡೆಯಿತು.

ಸುಮಾರು 60 ಕೌಂಟರ್‌ಗಳಲ್ಲಿ 1ನೇ ರ‍್ಯಾಂಕ್‌ನಿಂದ 1,000 ರ‍್ಯಾಂಕ್‌ವರೆಗಿನ ಅಭ್ಯರ್ಥಿಗಳ ದಾಖಲಾತಿಗಳ ಪರಿಶೀಲನೆ ನಡೆಯಿತು. ಬೆಳಿಗ್ಗೆ 9.15ರಿಂದ ಪ್ರಾರಂಭವಾದ ಪ್ರಕ್ರಿಯೆ ಸಂಜೆ 6.15ರವರೆಗೂ ಜರುಗಿತು.

‘ಎಲ್ಲಾ ದಾಖಲೆಗಳು ಸರಿಯಾಗಿದ್ದಿದ್ದರಿಂದ ಕೇವಲ 5 ನಿಮಿಷದಲ್ಲಿ ಪ್ರಕ್ರಿಯೆ ಮುಗಿದು ಹೋಯಿತು. ಹೇಗಾಗುತ್ತದೆಯೋ ಎನ್ನುವ ಆತಂಕದಲ್ಲಿಯೇ ಬಂದಿದ್ದೆ. ಆದರೆ, ಇಷ್ಟು ಸುಲಭವಾಗಿ ಮುಗಿದ್ದರಿಂದ ಖುಷಿಯಾಯಿತು’ ಎಂದು ವಿದ್ಯಾರ್ಥಿ ಪ್ರಮೋದ್‌ ತಿಳಿಸಿದರು.

‘ನನ್ನದು 1010 ರ್‍ಯಾಂಕಿಂಗ್‌ ಇದೆ. ಪ್ರಕ್ರಿಯೆ ಹೇಗೆ ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಬಂದಿದ್ದೇನೆ. ದಾಖಲಾತಿ ಮುಗಿಸಿದವರನ್ನು ಕೇಳಿದೆ, ಯಾವುದೇ ತೊಂದರೆಯಿಲ್ಲ ಎಂದಿದ್ದಾರೆ’ ಎಂದು ವಿದ್ಯಾರ್ಥಿನಿ ಸೃಷ್ಟಿ ಹೇಳಿದರು.

‘ಆದಾಯಕ್ಕೆ ಸಂಬಂಧಿಸಿದ ದಾಖಲೆಗಳನ್ನು  ಮಾತ್ರ ಆನ್‌ಲೈನ್‌ನಲ್ಲಿ ಪರಿಶೀಲಿಸಲಾಗುತ್ತದೆ. ಶೈಕ್ಷಣಿಕ ಪ್ರಮಾಣ ಪತ್ರಗಳನ್ನು ನೇರವಾಗಿಯೇ ನೋಡಬೇಕಾಗುತ್ತದೆ’ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು.

ಮೀಸಲಾತಿ, ಕನ್ನಡ ಮಾಧ್ಯಮ, ಗ್ರಾಮೀಣ ವ್ಯಾಸಂಗ ಮುಂತಾದ ವಿಷಯಗಳ ಕುರಿತು ಸಲ್ಲಿಸಲಾದ ಮಾಹಿತಿಯನ್ನು ದಾಖಲಾತಿಗಳ ಪರಿಶೀಲನೆ ಸಂದರ್ಭದಲ್ಲಿ ಕಡ್ಡಾಯವಾಗಿ ಪರಿಶೀಲನೆಗೊಳಪಡಿಸಬೇಕು. ಸಲ್ಲಿಸಿದ ದಾಖಲಾತಿಗಳು ಪರಿಶೀಲನೆ ಸಂದರ್ಭದಲ್ಲಿ ಹಾಜರುಪಡಿಸದಿದ್ದಲ್ಲಿ ಅಂತಹ ಅಭ್ಯರ್ಥಿಗಳನ್ನು ಇತರೆ ವರ್ಗಕ್ಕೆ ವರ್ಗಾಯಿಸಲಾಗುತ್ತದೆ.

16 ಕೇಂದ್ರಗಳಲ್ಲಿ ಪರಿಶೀಲನೆ: ರಾಜ್ಯದ ಆಯ್ದ ಜಿಲ್ಲೆಗಳ 16 ಸಹಾಯಕ ಕೇಂದ್ರಗಳಲ್ಲಿ ಆನ್‌ಲೈನ್‌ ಸೀಟು ಹಂಚಿಕೆಗಾಗಿ ದಾಖಲಾತಿ ಪರಿಶೀಲನೆ ನಡೆಯುತ್ತಿದೆ. ವಿದ್ಯಾರ್ಥಿಗಳು ಪಡೆದಿರುವ ರ್‍ಯಾಂಕ್‌ಗಳ ಆಧಾರದ ಮೇಲೆ ನಿಗದಿಪಡಿಸಲಾದ ದಿನಾಂಕಗಳಂದು ದಾಖಲಾತಿಗಳನ್ನು ಪರಿಶೀಲಿಸಲಾಗುತ್ತದೆ. ಅಭ್ಯರ್ಥಿಗಳು ರ್‍ಯಾಂಕುಗಳ ಆಧಾರದ ಮೇಲೆ ರಾಜ್ಯದ ಯಾವುದೇ ಸಹಾಯಕ ಕೇಂದ್ರಗಳಲ್ಲಿ ದಾಖಲೆಗಳನ್ನು ಪರಿಶೀಲನೆಗೊಳಪಡಿಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಅಭ್ಯರ್ಥಿಗಳು ಅರ್ಹಗೊಳ್ಳುವ ಎಲ್ಲಾ ಕೋರ್ಸುಗಳಿಗೆ ದಾಖಲಾತಿ ಪರಿಶೀಲನೆಯನ್ನು ಒಂದೇ ಬಾರಿಗೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಕೋರ್ಸುಗಳಿಗೆ ರ್‍ಯಾಂಕ್ ಪಡೆದಿದ್ದರೆ ಅಂತಹ ಅಭ್ಯರ್ಥಿಗಳು ಯಾವುದಾದರೂ ಕೋರ್ಸ್‌ನ ಗರಿಷ್ಠ ರ್‍ಯಾಂಕ್‌ನ ಆಧಾರದ ಮೇಲೆ ದಾಖಲಾತಿ ಪರಿಶೀಲನೆಗೆ ಹಾಜರಾಗಬಹುದು. ಅಭ್ಯರ್ಥಿಗಳು ಪರಿಶೀಲನೆ ಸಮಯದಲ್ಲಿ ಮೂಲ ದಾಖಲೆಗಳನ್ನು ಹಾಜರುಪಡಿಸಬೇಕು ಎಂದು ತಿಳಿಸಿದರು.

ವೈದ್ಯಕೀಯ, ಎಂಜಿನಿಯರಿಂಗ್, ಕೃಷಿ ಸೇರಿದಂತೆ ವಿವಿಧ ಸ್ನಾತಕ ಪದವಿ ಸೀಟುಗಳ ಹಂಚಿಕೆಗೆ ಅವಕಾಶ ಕಲ್ಪಿಸಲಾಗಿದೆ. ದಾಖಲೆಗಳ ಪರಿಶೀಲನೆ ನಂತರ ಅರ್ಹ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ತಮಗೆ ನೀಡಿದ ಪ್ರತ್ಯೇಕ ಕೋಡ್ ಸಂಖ್ಯೆ ಬಳಸಿ, ದಾಖಲಾತಿಗಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಯಾರ್ಯಾರಿಗೆ ಯಾವತ್ತು ಪರಿಶೀಲನೆ

ದಿನಾಂಕ;ರ್‍ಯಾಂಕ್‌

13–ಬುಧವಾರ;1001–4000

14–ಗುರುವಾರ;4001–8000

15–ಶುಕ್ರವಾರ;8001–15000

16–ಶನಿವಾರ;15001–22000

18–ಸೋಮವಾರ;22001–30000

19–ಮಂಗಳವಾರ;30001–40000

20–ಬುಧವಾರ;40001–50000

21–ಗುರುವಾರ;50001–62000

22–ಶುಕ್ರವಾರ;62001–74000

23–ಶನಿವಾರ;74001-86000

25-ಸೋಮವಾರ;86000–102000

26–‌ಮಂಗಳವಾರ;102001–ಕೊನೆಯ ರ್‍ಯಾಂಕ್‌ವರೆಗೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry