‘ಜನರು ಅಭಿವೃದ್ಧಿ ಆಯ್ಕೆ ಮಾಡಿದರು’

7

‘ಜನರು ಅಭಿವೃದ್ಧಿ ಆಯ್ಕೆ ಮಾಡಿದರು’

Published:
Updated:
‘ಜನರು ಅಭಿವೃದ್ಧಿ ಆಯ್ಕೆ ಮಾಡಿದರು’

ಬೆಂಗಳೂರು: ಡಾನ್‌ ಬೇಕೋ ಡೆವಲಪ್‌ಮೆಂಟ್‌ (ಅಭಿವೃದ್ಧಿ) ಬೇಕೋ ಕೇಳಿದೆ. ಜನ ಅಭಿವೃದ್ಧಿಯನ್ನು ಆಯ್ಕೆ ಮಾಡಿದರು. ಈಗ ನನ್ನ ಕಲ್ಪನೆಗಳನ್ನು ಅನುಷ್ಠಾನಕ್ಕೆ ತರಬೇಕು. ಉದ್ಯಮಿಗಳು, ಜನಸಾಮಾನ್ಯರು ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗಬೇಕು. ಚುನಾವಣೆ ವೇಳೆ ಮಾತ್ರ ಪಕ್ಷ, ಸ್ಪರ್ಧೆ. ಆಮೇಲೆ ಎಲ್ಲ ಪ್ರಜೆಗಳೂ ನಮ್ಮವರೇ ಎಂದುಕೊಂಡು ಮುಂದುವರಿಯಬೇಕು.

ಹೀಗೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಆಯ್ಕೆಯಾದ ಶಾಸಕ ಡಾ.ಉದಯ್‌ ಬಿ. ಗರುಡಾ

ಚಾರ್‌ ಪಕ್ಕಾ ಉದ್ಯಮಿಯ ಶೈಲಿಯಲ್ಲೇ ಮಾತಿಗಿಳಿದರು. ಅಲ್ಲಲ್ಲಿ ಕ್ಷೇತ್ರದ ಮಾಜಿ ಶಾಸಕ, ವೈಯಕ್ತಿಕ ಗೆಳೆಯ ಆರ್‌.ವಿ.ದೇವರಾಜ ಅವರನ್ನು ಮಾತಿನಲ್ಲೇ ತಿವಿದರು. ರಾಜ್ಯ ರಾಜಕಾರಣಕ್ಕೆ ಸೀಮಿತವಾಗಿ ಇತಿಮಿತಿಯ ಒಳಗಿರುತ್ತೇನೆ ಎಂಬ ಆಶಯವನ್ನೂ ವ್ಯಕ್ತಪಡಿಸಿದರು.

* ಉದ್ಯಮಿಗಳು ಬೇರೆ ಬೇರೆ ಉದ್ದೇಶವಿಟ್ಟುಕೊಂಡು ರಾಜಕಾರಣಕ್ಕೆ ಬರುತ್ತಿದ್ದಾರೆ ಎಂಬ ಮಾತಿದೆಯಲ್ಲಾ?

ನನಗೆ ಯಾವ ಉದ್ದೇಶವಿದೆ ಹೇಳಿ? ನನಗೆ ಉದ್ಯೋಗವಿದೆ, ಉದ್ಯಮವಿದೆ. ರಾಜಕಾರಣದಿಂದ ಏನೂ ಆಗಬೇಕಾಗಿಲ್ಲ. ಯಾವ ರಕ್ಷಣೆಯೂ ಬೇಕಾಗಿಲ್ಲ. ಬೇರೆ ಉದ್ದೇಶಕ್ಕೆ ಬರುತ್ತಾರೆ ಎಂಬ ಮಾತು ಇರಬಹುದು. ಅದು ನನಗೆ ಅನ್ವಯಿಸುವುದಿಲ್ಲ. ನಾನು ರಾಜಕೀಯದಲ್ಲಿ ಶಾಶ್ವತವಾಗಿ ಇರುವುದೂ ಇಲ್ಲ.

* ಪ್ರತಿಸ್ಪರ್ಧಿಯ ಪ್ರಭಾವ ಇನ್ನೂ ಇದೆಯೇ?

ಕ್ಷೇತ್ರದ ಮಾಜಿ ಶಾಸಕರು ತಾವು ಇನ್ನೂ ಶಾಸಕ ಎಂಬ ಭ್ರಮೆಯಲ್ಲಿದ್ದಾರೆ. ಅಧಿಕಾರಿಗಳನ್ನು ಬೆದರಿಸುವುದು, ಕೆಲಸ ಮಾಡಿಕೊಡುವಂತೆ ಒತ್ತಡ ಹೇರುವುದು, ಇತ್ಯಾದಿ ಮಾಡುತ್ತಲೇ ಇದ್ದಾರೆ. ಸರ್ಕಾರ ಅವರದ್ದಿರಬಹುದು. ಕ್ಷೇತ್ರದ ಅಭಿವೃದ್ಧಿಯಲ್ಲಿ ತರಲೆ ರಾಜಕಾರಣ ಮಾಡಬಾರದು.

* ರಾಜಕೀಯ ಕ್ಷೇತ್ರಕ್ಕಿಳಿದ ಉದ್ದೇಶವೇನು?

ಚಿಕ್ಕಪೇಟೆಯನ್ನು ಚೆನ್ನಾಗಿ ಬಲ್ಲೆ. ಇಲ್ಲಿ ಉದ್ಯಮಿಗಳು, ವ್ಯಾಪಾರಿಗಳಿಗೆ ಸಾಕಷ್ಟು ಸಮಸ್ಯೆಗಳಿವೆ. ಕ್ಷೇತ್ರಕ್ಕೆ ಮೂಲಸೌಲಭ್ಯ ಒದಗಿಸಬೇಕು. ವ್ಯಾಪಾರಿಗಳನ್ನು ಸಂಘಟಿಸಿ ಅವರ ಮೂಲಕವೇ ಸಮಸ್ಯೆಗಳನ್ನು ಕೇಳಿ ಬಗೆಹರಿಸುವ ಪ್ರಯತ್ನ ಆಗಬೇಕು. ಈಗಾಗಲೇ ವಾರ್ಡ್‌ಗಳಿಗೆ ಭೇಟಿಯಾಗಿ ಪರಿಶೀಲಿಸಿದ್ದೇನೆ. ಒಂದೊಂದು ವಾರ್ಡ್‌ಗಳ ಅಗತ್ಯಗಳೇ ಬೇರೆ ಇದೆ. ಇಲ್ಲೆಲ್ಲಾ ನಿವಾಸಿಗಳ ಕಲ್ಯಾಣ ಸಂಘಗಳನ್ನು ರಚಿಸಬೇಕು. ಅವರ ಆಶೋತ್ತರಗಳಿಗೆ ಸ್ಪಂದಿಸಬೇಕು. ಕೊಳೆಗೇರಿ ನಿವಾಸಿಗಳಿಗೆ ಮನೆ ಕಟ್ಟಿ ಕೊಡಬೇಕು.

* ಕ್ಷೇತ್ರದ ಅಭಿವೃದ್ಧಿ ಕುರಿತು ಹೇಳಿ

ಗಿಜಿಗುಟ್ಟುವ ಮಾರುಕಟ್ಟೆ ಪ್ರದೇಶವನ್ನು ಶಿಸ್ತಿನ ಚೌಕಟ್ಟಿಗೆ ತರಬೇಕು. ಅದಕ್ಕೆ ನನ್ನದೇ ಆದ ಯೋಜನೆಗಳಿವೆ. ಚಿಕ್ಕಪೇಟೆಯಲ್ಲಿ ಸುಮಾರು 80ಕ್ಕೂ ಹೆಚ್ಚು ಅನಧಿಕೃತ ಅಂಗಡಿಗಳಿವೆ. ಅವುಗಳನ್ನು ತೆರವು ಮಾಡಬೇಕು. ಉದ್ಯಮ, ರಾಜಕಾರಣ ಇವೆಲ್ಲವೂ ಒಂದೊಂದು ಅನುಭವಗಳು. ನಮ್ಮ ಗರುಡಾ ಮಾಲ್‌ ಇದ್ದ ಜಾಗದಲ್ಲಿ ಮೊದಲು ಶವ ಸಾಗಿಸುವ ಲಾರಿಗಳನ್ನು ನಿಲ್ಲಿಸುತ್ತಿದ್ದರು. ಈಗ ಆ ಪ್ರದೇಶ ಹೇಗಾಗಿದೆ ನೋಡಿ. ಇದರಿಂದ ಬಿಬಿಎಂಪಿ, ನಾವು, ಜನರು ಎಲ್ಲರಿಗೂ ಲಾಭ ಆಗಿದೆ.

* ಆಡಳಿತದಲ್ಲಿ ಬೇರೆಯವರಿದ್ದಾರಲ್ಲಾ?

ನೋಡಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನಮ್ಮ ನಾಡಿನ ದೊರೆಗಳು. ಇಬ್ಬರೂ ಒಳ್ಳೆಯವರು ಮತ್ತು ಸಾಕಷ್ಟು ಅನುಭವಿಗಳು. ಅವರ ಮುಂದೆ ನಿಂತು ನಮ್ಮ ಕ್ಷೇತ್ರಕ್ಕೇನಾದರೂ ಕೊಡಿ ಎಂದು ಕೇಳಬೇಕು. ಖಂಡಿತವಾಗಿ ಸ್ಪಂದಿಸುವ ಭರವಸೆ ಇದೆ. ಪಕ್ಷ ಬೇರೆ ಇರಬಹುದು. ಕ್ಷೇತ್ರ ಅಭಿವೃದ್ಧಿಯಾದರೆ ಅವರಿಗೂ ಹೆಸರು ಬರುತ್ತದೆ ಅಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry