ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದ್ಮಾವತ್ ಚಿತ್ರ ಬಿಡುಗಡೆ ವಿರೋಧಿಸಿ ರಜಪೂತ ಸಂಘಟನೆಗಳಿಂದ ದಾಂದಲೆ

Last Updated 22 ಜನವರಿ 2018, 19:30 IST
ಅಕ್ಷರ ಗಾತ್ರ

ಲಖನೌ: ಪದ್ಮಾವತ್‌ ಚಿತ್ರ ಬಿಡುಗಡೆಗೊಳಿಸುವುದರ ವಿರುದ್ಧ ಉತ್ತರ ಪ್ರದೇಶದ ವಿವಿಧ ಕಡೆಗಳಲ್ಲಿ ರಜಪೂತ ಸಂಘಟನೆಗಳು ಸೋಮವಾರ ಪ್ರತಿಭಟನೆ ನಡೆಸಿದವು.

ಸಂಘಟನೆಗಳ ಸದಸ್ಯರು ಕೆಲವು ಕಡೆ ಚಿತ್ರಮಂದಿರಗಳಲ್ಲಿ ದಾಂದಲೆ ನಡೆಸಿದರಲ್ಲದೇ ಚಿತ್ರ ಬಿಡುಗಡೆಯ ವಿರುದ್ಧ ಎಚ್ಚರಿಕೆಯನ್ನೂ ನೀಡಿದರು. ಚಿತ್ರ ಬಿಡುಗಡೆಗೆ ಸಿದ್ಧತೆ ನಡೆಸಿರುವ ಹಾಪುರದ ಚಿತ್ರಮಂದಿರವೊಂದರ ಕಿಟಕಿ ಗಾಜುಗಳನ್ನು ಸಂಘಟನೆಗಳ ಸದಸ್ಯರು ಪುಡಿ ಮಾಡಿದ್ದಾರೆ.

ಅಲಹಾಬಾದ್‌, ಬಾಘ್‌ಪತ್‌, ಸುಲ್ತಾನಪುರ, ಗೋರಖಪುರ ಮತ್ತು ಇತರ ಕೆಲವು ಕಡೆಗಳಲ್ಲಿ ರಜಪೂತ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಸುಪ್ರೀಂ ಕೋರ್ಟ್‌ ನಿರ್ದೇಶನ ಇರುವುದರಿಂದ ಚಿತ್ರ ಬಿಡುಗಡೆ ತಡೆಯಲು ಸರ್ಕಾರ ಮುಂದಾಗುವುದಿಲ್ಲ ಎಂದು ಮೂಲಗಳು ಹೇಳಿವೆ.

ಚಿತ್ರವನ್ನು ಪ್ರದರ್ಶನ ಮಾಡಿದರೆ, ಚಿತ್ರಮಂದಿರಗಳಿಗೆ ಅಗತ್ಯ ಭದ್ರತೆ ನೀಡುವುದಾಗಿ ಚಿತ್ರಮಂದಿರಗಳ ಮಾಲೀಕರಿಗೆ ಸರ್ಕಾರ ಭರವಸೆ ನೀಡಿದೆ.

ಮಧ್ಯಪ್ರದೇಶದಲ್ಲಿ ರಸ್ತೆ ತಡೆ: ಪದ್ಮಾವತ್‌ ಚಿತ್ರ ಬಿಡುಗಡೆಗೆ ವಿರೋಧಿಸಿ ರಜಪೂತ ಸಮುದಾಯದ ಕರ್ಣಿ ಸೇನಾದ ಕಾರ್ಯಕರ್ತರು ಸೋಮವಾರ ಮಧ್ಯಪ್ರದೇಶದ ವಿವಿಧ ಕಡೆಗಳಲ್ಲಿ ರಸ್ತೆ ತಡೆ ನಡೆಸಿದ್ದಾರೆ.

ಉಜ್ಜೈನಿ– ನಾಗದಾ, ದೆವಾಸ್‌–ಮಕ್ಸಿ ಮತ್ತು ಆಗರ್–ಕೋಟಾ ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಗರ್‌–ಕೋಟಾ ರಸ್ತೆಯಲ್ಲಿ ಪ್ರತಿಭಟನಾಕಾರರು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ. ಆದರೆ ಪೊಲೀಸ್‌ ವರಿಷ್ಠಾ
ಧಿಕಾರಿ ಇದನ್ನು ನಿರಾಕರಿಸಿದ್ದಾರೆ.

ಆದೇಶ ಪಾಲನೆ: ಹರಿಯಾಣ ಸರ್ಕಾರ ಸುಪ್ರೀಂ ಕೋರ್ಟ್‌ ಆದೇಶವನ್ನು ಪಾಲನೆ ಮಾಡಲಿದೆ ಎಂದು ಮುಖ್ಯಮಂತ್ರಿ ಮನೋಹರ್‌ಲಾಲ್‌ ಖಟ್ಟರ್‌ ಹೇಳಿದ್ದಾರೆ.

‘ಚಿತ್ರ ಮಂದಿರ ಮಾಲೀಕರೇ ಚಿತ್ರ ಪ್ರದರ್ಶಿಸದೇ ಇರಲು ಬಯಸಿದರೆ ಒಳ್ಳೆಯದು. ಆದರೆ, ಯಾರು ಪ್ರದರ್ಶಿಸುತ್ತಾರೋ, ಅವರಿಗೆ ಸರ್ಕಾರ ಭದ್ರತೆ ಒದಗಿಸಲಿದೆ’ ಎಂದು ಹೇಳಿದ್ದಾರೆ.

ಜನರೇ ಕರ್ಪ್ಯೂ ಹೇರಲಿದ್ದಾರೆ: ಕರ್ಣಿ ಸೇನಾ

ಕರ್ಣಿ ಸೇನಾ ಅಧ್ಯಕ್ಷ ಲೋಕೇಂದ್ರ ಸಿಂಗ್‌ ಕಾಲವಿ ಅವರು ಸೋಮವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿ ಮಾಡಿ, ಚಿತ್ರದ ಮೇಲೆ ನಿಷೇಧ ಹೇರುವಂತೆ ಮನವಿ ಮಾಡಿದ್ದಾರೆ.

ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪದ್ಮಾವತ್’ ಚಿತ್ರ ಪ್ರದರ್ಶನಗೊಂಡರೆ ಚಿತ್ರಮಂದಿರಗಳಲ್ಲಿ ಜನರೇ ಕರ್ಫ್ಯೂ ಹೇರಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಚಿತ್ರಕ್ಕೆ ಸಂಬಂಧಿಸಿದಂತೆ 40 ಆಕ್ಷೇಪಗಳನ್ನು ಪಟ್ಟಿ ಮಾಡಿರುವ ಅವರು, ಮಹಾರಾಣಾ ಪ್ರತಾಪ್‌, ಶಿವಾಜಿ ಹಾಗೂ ಇತರೆ ಪ್ರಮುಖ ವ್ಯಕ್ತಿಗಳ ಬಗ್ಗೆ ಸಿನಿಮಾಗಳನ್ನು ಮಾಡಬೇಕು ಮತ್ತು ಅವುಗಳು ಬಾಹುಬಲಿಯ ಗಲ್ಲಾಪೆಟ್ಟಿಗೆ ದಾಖಲೆ ಮುರಿಯಬೇಕು ಎಂದು ಹೇಳಿದ್ದಾರೆ.

‘ಚರಿತ್ರೆಯೊಂದಿಗೆ ಆಟವಾಡುವುದು ತಪ್ಪು’

ಜೈಪುರ: ‘ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಇತಿಹಾಸದ ಜೊತೆ ಆಟವಾಡುವುದಲ್ಲ; ಅದರ ನಿರೂಪಣೆ ಜನರ ಭಾವನೆಗಳಿಗೆ ಹೊಂದಿಕೆಯಾಗುವಂತಿರಬೇಕು’ ಎಂದು ರಾಷ್ಟ್ರೀಯ ಸ್ವಯಂ ಸೇವಾಸಂಸ್ಥೆಯ (ಆರ್‌ಎಸ್‌ಎಸ್‌) ರಾಜಸ್ಥಾನ ಘಟಕ ಹೇಳಿದೆ.

‘ಐತಿಹಾಸಿಕ ಘಟನೆಗಳನ್ನು ಆಸಕ್ತಿದಾಯಕ ಸಾಹಿತ್ಯವನ್ನಾಗಿ ಸೃಷ್ಟಿಸಲು ಕಲ್ಪನೆಯ ಸ್ವಾತಂತ್ರ್ಯ ಬಳಸುವುದು ಸಹಜ. ಆದರೆ, ಅದು ಘನತೆ, ಪಾತ್ರದ ಇತಿಹಾಸ ಮತ್ತು ಜನರ ಭಾವನೆಗಳಿಗೆ ಹೊಂದಿಕೊಂಡಿರಬೇಕು’ ಎಂದು ರಾಜ್ಯ ಆರ್‌ಎಸ್‌ಎಸ್‌ ಮುಖ್ಯಸ್ಥ ಭಗವತಿ ಪ್ರಸಾದ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT