ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಡಿಜಿಟಲ್‌ ದಾಖಲೆ ನಿರಾಕರಣೆಗೆ ಆಕ್ರೋಶ

‘ಡಿಜಿ ಲಾಕರ್‌’ ವ್ಯವಸ್ಥೆ ಪರಿಗಣಿಸದ ಪೊಲೀಸರು
Last Updated 22 ಜನವರಿ 2018, 19:43 IST
ಅಕ್ಷರ ಗಾತ್ರ

ಬೆಂಗಳೂರು: ವಾಹನ ಹಾಗೂ ಚಾಲಕರಿಗೆ ಸಂಬಂಧಪಟ್ಟ ದಾಖಲೆಗಳು ಡಿಜಿಟಲ್‌ ರೂಪದಲ್ಲಿದ್ದರೆ ಪರಿಗಣಿಸಬಹುದೇ ಎಂಬ ಬಗ್ಗೆ ಪೊಲೀಸ್‌ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಲ್ಲಿ ಸ್ಪಷ್ಟತೆ ಇಲ್ಲ. ಡಿಜಿಟಲ್‌ ರೂಪದಲ್ಲಿರುವ ಕೆಲವು ದಾಖಲೆಗಳನ್ನು ಪೊಲೀಸರು ಅಧಿಕೃತ ಎಂದು ಪರಿಗಣಿಸಲು ನಿರಾಕರಿಸುತ್ತಿದ್ದಾರೆ.

‘ದಾಖಲೆಯ ಹಾರ್ಡ್‌ ಕಾಪಿಯನ್ನಷ್ಟೇ ಪರಿಗಣಿಸುತ್ತೇವೆ. ಸಾಫ್ಟ್‌ ಕಾಪಿ ಪರಿಗಣನೆ ಸಾಧ್ಯವಿಲ್ಲ’ ಎಂದು ಪೊಲೀಸರು ಹೇಳುತ್ತಿದ್ದಾರೆ. ಅತ್ತ ಸಾರಿಗೆ ಅಧಿಕಾರಿಗಳು, ‘ಹಾರ್ಡ್‌ ಕಾಪಿಗೆ ಯಾವಾಗಲೂ ಮಾನ್ಯತೆ ಇದೆ. ಡಿಜಿ ಲಾಕರ್‌ ವ್ಯವಸ್ಥೆ ಮೂಲಕ ಸಾಫ್ಟ್‌ ಕಾಪಿಗೂ ಮಾನ್ಯತೆ ನೀಡಲಾಗಿದೆ’ ಎಂದು ಹೇಳುತ್ತಿದ್ದಾರೆ.

ಚಾಲನಾ ಪರವಾನಗಿ, ವಾಹನ ವಿಮೆ ದಾಖಲೆಯ ಸಾಫ್ಟ್‌ ಕಾಪಿಯನ್ನು ಅಧಿಕೃತ ಎಂದು ಪರಿಗಣಿಸಲು ಒಪ್ಪದೆ ವೈಟ್‌ಫೀಲ್ಡ್‌ ಸಂಚಾರ ಠಾಣೆಯ ಪೊಲೀಸರು ಇತ್ತೀಚೆಗೆ ಬೈಕ್‌ ಸವಾರರೊಬ್ಬರಿಗೆ ₹500 ದಂಡ ವಿಧಿಸಿದ ವಿಷಯ ಟ್ವಿಟರ್‌ನಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ನಡೆದಿದ್ದೇನು?: ಖಾಸಗಿ ಕಂಪನಿಯ ಉದ್ಯೋಗಿ ಹರ್ಷ ಜ.17ರಂದು ವೈಟ್‌ಫೀಲ್ಡ್‌ ಮಾರ್ಗವಾಗಿ ಕಚೇರಿಗೆ ಹೋಗುತ್ತಿದ್ದರು. ಅವರ ಬೈಕ್‌ ತಡೆದಿದ್ದ ಪೊಲೀಸರು, ದಾಖಲೆ ತೋರಿಸುವಂತೆ ಹೇಳಿದ್ದರು. ಆಗ ಹರ್ಷ, ಮೊಬೈಲ್‌ನಲ್ಲಿದ್ದ ದಾಖಲೆ ತೋರಿಸಿದ್ದರು. ಅದನ್ನು ತಿರುಗಿಯೂ ನೋಡದ ಪೊಲೀಸರು, ‘ಹಾರ್ಡ್‌ ಕಾಪಿ ಇದ್ದರಷ್ಟೇ ತೋರಿಸಿ’ ಎಂದು ಪಟ್ಟು ಹಿಡಿದಿದ್ದರು.

ಹಾರ್ಡ್ ಕಾಪಿಗಷ್ಟೇ ಬೆಲೆ ಇದೆ, ಸಾಫ್ಟ್‌ ಕಾಪಿಗಲ್ಲವೆಂದು ವಾದಿಸಿದ್ದ ಪೊಲೀಸರು ₹500 ದಂಡ ಪಾವತಿಸುವಂತೆ ರಸೀದಿ ನೀಡಿದರು. ಆನ್‌ಲೈನ್‌ನಲ್ಲಿ ಹಣ ಕಟ್ಟುವುದಾಗಿ ಹರ್ಷ ಹೇಳಿದಾಗವಾದಕ್ಕಿಳಿದ ಪೊಲೀಸರು, ‘ನಗದು ನೀಡಿ’ ಎಂದು ಹೇಳಿದ್ದರು.  ಪೊಲೀಸರ ಈ ವರ್ತನೆಯನ್ನು ಅವರು ಟ್ವೀಟ್‌ ಮೂಲಕ ಪ್ರಶ್ನಿಸಿದ್ದರು.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಹಲವರು ‘ಡಿಜಿ ಲಾಕರ್‌’ ವ್ಯವಸ್ಥೆಗೆ ಕೇಂದ್ರ ಸರ್ಕಾರದ ಮಾನ್ಯತೆ ಇದೆ. ಅಷ್ಟಾದರೂ ಸಾಫ್ಟ್‌ ಕಾಪಿಗಳಿಗೆ ಪೊಲೀಸರು ಬೆಲೆ ನೀಡದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಹೆಸರಿಗಷ್ಟೇ ಸಿಲಿಕಾನ್‌ ಸಿಟಿ: ಖಾಸಗಿ ಕಂಪನಿಯ ಉದ್ಯೋಗಿ ಸೂರ್ಯ ದೇಸರಾಜ್, ‘ಬೆಂಗಳೂರಿಗೆ ಸಿಲಿಕಾನ್‌ ಸಿಟಿ ಎಂಬ ಹೆಸರಿದೆ. ಇಲ್ಲಿಯ ಸಾಫ್ಟ್‌ವೇರ್‌ ಕಂಪನಿಗಳಲ್ಲಿ ಲಕ್ಷಾಂತರ ಮಂದಿ ಕೆಲಸ ಮಾಡುತ್ತಾರೆ. ಅವರೆಲ್ಲ ಆಧುನಿಕ ತಂತ್ರಜ್ಞಾನ ಬಳಸುತ್ತಾರೆ. ಹೀಗಿರುವಾಗ ಪೊಲೀಸರು ಸಾಫ್ಟ್‌ ಕಾಪಿ ನಿರಾಕರಿಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದ್ದಾರೆ.

‘ಮೋಟಾರು ವಾಹನಗಳ ಕಾಯ್ದೆ 1988ರ ಸೆಕ್ಷನ್‌ 130ರ ಪ್ರಕಾರ, ವಾಹನದ ದಾಖಲೆಗಳನ್ನು ಹಾಜರುಪಡಿಸಲು 15 ದಿನಗಳ ಕಾಲಾವಕಾಶವಿರುತ್ತದೆ. ಅದಕ್ಕೂ ಇಲ್ಲಿಯ ಪೊಲೀಸರು ಅವಕಾಶ ನೀಡುತ್ತಿಲ್ಲ. ದಂಡ ವಿಧಿಸುತ್ತಲೇ ಇದ್ದಾರೆ’ ಎಂದು ದೂರಿದ್ದಾರೆ.

‘ನಗರದ ಕೆಲವು ಪೊಲೀಸರು ಡಿಜಿಟಲ್‌ ಕಾಪಿಯನ್ನು ಪರಿಗಣಿಸುತ್ತಾರೆ. ಇನ್ನು ಹಲವರು ನಿರಾಕರಿಸುತ್ತಾರೆ. ನಿಯಮಗಳ ಬಗ್ಗೆ ಅವರಲ್ಲಿ ತಿಳಿವಳಿಕೆ ಕೊರತೆ ಇದೆ’ ಎಂದು ಹೇಳಿದ್ದಾರೆ.

ಪ್ರಮಾಣೀಕೃತ ದಾಖಲೆ ಮುಖ್ಯ: ‘ವಾಹನ ಪರಿಶೀಲನೆ ವೇಳೆ ಹಾರ್ಡ್‌ ಕಾಪಿ ಪರಿಗಣಿಸುತ್ತೀರಾ ಅಥವಾ ಸಾಫ್ಟ್ ಕಾಪಿಯೇ’ ಎಂಬ ಪ್ರಶ್ನೆಗೆ ನಿಖರ ಉತ್ತರ ನೀಡದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಸಂಚಾರ) ಆರ್‌.ಹಿತೇಂದ್ರ, ‘ಹಾರ್ಡ್‌ ಮತ್ತು ಸಾಫ್ಟ್‌ ಕಾಪಿ ಬಗ್ಗೆ ಗೊಂದಲವಿಲ್ಲ. ನಮಗೆ ಪ್ರಮಾಣೀಕೃತ ದಾಖಲೆಗಳು ಮುಖ್ಯ. ಅದನ್ನಷ್ಟೇ ನಾವು ಪಾಲಿಸುತ್ತೇವೆ’ ಎಂದರು.

‘ಚಾಲನಾ ಪರವಾನಗಿ, ವಾಹನದ ನೋಂದಣಿ ಪುಸ್ತಕ, ವಿಮೆ ಪ್ರಮಾಣ ಪತ್ರದ ಅಸಲಿ ದಾಖಲೆ ಅಥವಾ ಸ್ಮಾರ್ಟ್‌ ಕಾರ್ಡನ್ನು ಪ್ರಯಾಣದ ವೇಳೆ ಜತೆಗಿಟ್ಟುಕೊಂಡಿರಬೇಕು. ಬಸ್‌, ಟ್ಯಾಕ್ಸಿ, ಆಟೊಗಳಿದ್ದರೆ ಪರವಾನಗಿ ಹಾಗೂ ಸಾಮರ್ಥ್ಯ ಪತ್ರಗಳಿರಬೇಕು. ಪೊಲೀಸ್‌ ಅಧಿಕಾರಿ ಕೇಳಿದಾಗ ಅವುಗಳನ್ನು ತೋರಿಸಬೇಕು ಎಂಬ ಬಗ್ಗೆ ಅಧಿಸೂಚನೆ ಇದೆ’ ಎಂದರು.

‘ಕರ್ನಾಟಕ ಮೋಟರ್ ವಾಹನಗಳ ಕಾಯ್ದೆಯ ಸೆಕ್ಷನ್ 87(5) ಪ್ರಕಾರ, ವಾಹನಗಳ ಎಲ್ಲ ದಾಖಲೆಗಳಿಗೆ ಒಂದೇ ಮಾಸ್ಟರ್‌ ಪಾಸ್‌ ಹೊಂದುವ ಅವಕಾಶವಿದೆ. ಆ ಪಾಸ್‌ ಇದ್ದರೆ, ಉಳಿದ ದಾಖಲೆಗಳ ಅವಶ್ಯಕತೆ ಇರುವುದಿಲ್ಲ’ ಎಂದರು.

ಸಾಫ್ಟ್‌ ಕಾಪಿ ತೋರಿಸಿದ್ದಕ್ಕೆ ವೈಟ್‌ಫೀಲ್ಡ್‌ ಪೊಲೀಸರು ದಂಡ ವಿಧಿಸಿದ್ದ ಬಗ್ಗೆ ಅವರು, ‘ಅದು ವೈಯಕ್ತಿಕ ಪ್ರಕರಣ. ದಿನವೂ ಸಾವಿರಾರು ಕಡೆ ಅಂಥ ಪ್ರಕರಣಗಳು ನಡೆಯುತ್ತಿರುತ್ತವೆ. ಎಲ್ಲವೂ ನನ್ನ ಗಮನಕ್ಕೆ ಬರುವುದಿಲ್ಲ’ ಎಂದರು.

ಹೆಡ್‌ ಕಾನ್‌ಸ್ಟೆಬಲ್‌, ಕಾನ್‌ಸ್ಟೆಬಲ್‌ ದಂಡ ವಿಧಿಸುವಂತಿಲ್ಲ
‘ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ (ಭುಜದ ಮೇಲಿನ ಬ್ಯಾಡ್ಜ್‌ನಲ್ಲಿ ಒಂದು ನಕ್ಷತ್ರ), ಪಿಎಸ್‌ಐ (ಎರಡು ನಕ್ಷತ್ರ), ಇನ್‌ಸ್ಪೆಕ್ಟರ್‌ (ಮೂರು ನಕ್ಷತ್ರ) ಅವರಿಗೆ ಮಾತ್ರ ದಂಡ ವಿಧಿಸುವ ಅಧಿಕಾರವಿದೆ. ಹೆಡ್‌ ಕಾನ್‌ಸ್ಟೆಬಲ್‌ ಅಥವಾ ಕಾನ್‌ಸ್ಟೆಬಲ್‌ ದಂಡ ವಿಧಿಸಿದರೆ ದೂರು ಕೊಡಿ’ ಎಂದು ಆರ್‌.ಹಿತೇಂದ್ರ ಹೇಳಿದರು.

‘ದಾಖಲೆ ಕ್ರಮಬದ್ಧ’
‘ದೇಶದಲ್ಲಿ ಡಿಜಿ ಲಾಕರ್‌ ವ್ಯವಸ್ಥೆ ಜಾರಿಯಲ್ಲಿದೆ. ಅದರಲ್ಲಿರುವ ದಾಖಲೆಗಳು ಕ್ರಮಬದ್ಧ. ಕೇಂದ್ರ ಸರ್ಕಾರದ ಎಲ್ಲ ಸೇವೆಗಳಿಗೆ ಹಾಗೂ ನಮ್ಮ ಇಲಾಖೆಯ ಸೇವೆಗೂ ಈ ವ್ಯವಸ್ಥೆಯಲ್ಲಿರುವ ದಾಖಲೆಗಳನ್ನು ಪರಿಗಣಿಸುತ್ತಿದ್ದೇವೆ’ ಎಂದು ಸಾರಿಗೆ ಇಲಾಖೆಯ ಆಯುಕ್ತ ಬಿ.ದಯಾನಂದ್ ಹೇಳಿದರು.

‘ಡಿಜಿ ಲಾಕರ್‌ ವ್ಯವಸ್ಥೆ ಪರಿಣಾಮಕಾರಿಯಾಗಿ ಜಾರಿಗೆ ಬರಬೇಕಿದೆ. ಆ ನಿಟ್ಟಿನಲ್ಲಿ ಸದ್ಯದಲ್ಲೇ ಆದೇಶ ಹೊರಡಿಸಲಿದ್ದೇವೆ. ಆ ಬಳಿಕ ಸಾಫ್ಟ್‌ ಹಾಗೂ ಹಾರ್ಡ್‌ ಕಾಪಿ ಕುರಿತ ಗೊಂದಲ ಪರಿಹಾರ ಆಗಬಹುದು’ ಎಂದರು.

‘ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ ಹಾಗೂ ಇ–ಮೇಲ್‌ನಲ್ಲಿರುವ ದಾಖಲೆಗಳನ್ನು ಅಧಿಕೃತ ಎಂದು ಪರಿಗಣಿಸಲು ಸಾಧ್ಯವಿಲ್ಲ. ಅವುಗಳಿಗೆ ಖಚಿತತೆ ಇರುವುದಿಲ್ಲ. ಆದರೆ, ಡಿಜಿ ಲಾಕರ್‌ ವ್ಯವಸ್ಥೆಯ ದಾಖಲೆಗಳನ್ನು ತೋರಿಸಿದಾಗ ಪರಿಗಣಿಸಬೇಕು’ ಎಂದರು.

ಏನಿದು ‘ಡಿಜಿ ಲಾಕರ್‌’ ವ್ಯವಸ್ಥೆ?
ದಾಖಲೆಗಳು ಹಾಗೂ ಪ್ರಮಾಣಪತ್ರಗಳನ್ನು ವಿದ್ಯುನ್ಮಾನ (ಡಿಜಿಟಲ್) ರೂಪದಲ್ಲಿ ಸಂಗ್ರಹಿಸುವ, ವಿತರಿಸುವ ಮತ್ತು ದೃಢೀಕರಿಸುವ ವ್ಯವಸ್ಥೆಯೇ ‘ಡಿಜಿ ಲಾಕರ್‌’ (https://digilocker.gov.in).

ಕಾಗದರಹಿತ ಆಡಳಿತ ಪರಿಕಲ್ಪನೆಯ ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಈ ವ್ಯವಸ್ಥೆ ರೂಪಿಸಲಾಗಿದೆ. ಜನರು  ದಾಖಲೆಗಳನ್ನು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ನೋಡಬಹುದು ಹಾಗೂ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಬಹುದು. ವಾಹನ ಚಾಲನಾ ಪರವಾನಗಿ (ಡಿಎಲ್) ಮತ್ತು ನೋಂದಣಿ ಪ್ರಮಾಣಪತ್ರಗಳನ್ನು (ಆರ್‌ಸಿ) ಡಿಜಿ ಲಾಕರ್ ವ್ಯವಸ್ಥೆಗೆ ಅಳವಡಿಸಿ, ಅವು ಮೊಬೈಲ್‌ನಲ್ಲಿ ಲಭ್ಯವಾಗುವಂತೆ ಮಾಡಬಹುದಾಗಿದೆ. ಇದು ಸ್ವಯಂ ದೃಢೀಕರಣ ಇದ್ದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT