ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಧಿಕಾರ ನೀಡಿದರೆ ತಿಂಗಳಲ್ಲಿ ಬೆಳ್ಳಂದೂರು ಕೆರೆ ಸಮಸ್ಯೆಗೆ ಪರಿಹಾರ’

Last Updated 23 ಜನವರಿ 2018, 20:35 IST
ಅಕ್ಷರ ಗಾತ್ರ

ಬೆಂಗಳೂರು: ‘ನನಗೆ ಒಂದು ಸಲ ಅವಕಾಶ ನೀಡಿ. ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲಿ ಬೆಳ್ಳಂದೂರು ಕೆರೆ ಸಮಸ್ಯೆಯನ್ನು ‍ಪರಿಹರಿಸುತ್ತೇನೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಕೋರಿದರು.

ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘ (ಎಫ್‌ಕೆಸಿಸಿಐ) ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘ತಂತ್ರಜ್ಞಾನದಲ್ಲಿ ದೇಶಕ್ಕೆ ಮಾದರಿಯಾಗಿದ್ದೇವೆ. ಅದನ್ನು ಬಳಸಿಕೊಳ್ಳದೇ, ಸಮಸ್ಯೆಗಳನ್ನು ಕಾಪಿಟ್ಟುಕೊಂಡಿದ್ದೇವೆ. ನೊರೆ ಸಮಸ್ಯೆ, ಬೆಂಕಿ ಸಮಸ್ಯೆಗೆ ನಾನು ಪೂರ್ಣವಿರಾಮ ಹಾಕುತ್ತೇನೆ. ಜೊತೆಗೆ ನಗರದ ಎಲ್ಲಾ ಕೆರೆಗಳನ್ನು ಸ್ವಚ್ಛ ಮಾಡುವ ಗುರಿ ಹೊಂದಿದ್ದೇನೆ’ ಎಂದು ತಿಳಿಸಿದರು.

‘ಹಣ ಮಾಡುವ ಉದ್ದೇಶ ನನಗಿಲ್ಲ. ದುಡ್ಡು ಸಂಗ್ರಹಿಸಿ ಹೈಕಮಾಂಡ್‌ಗೆ ನೀಡಲು ನನಗೆ ಯಾವುದೇ ಹೈಕಮಾಂಡ್ ಇಲ್ಲ. ನನ್ನ ಮಗನಿಗೂ ಆಸ್ತಿ ಮಾಡುವ ಅಗತ್ಯವಿಲ್ಲ. ಹಾಗಾಗಿ ಭ್ರಷ್ಟಾಚಾರವನ್ನು ನಾನು ಪೋಷಿಸುವುದಿಲ್ಲ. ಎಲ್ಲರಿಗೂ ತೊಡಕಾಗಿರುವ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಲ್ಲಿಸುತ್ತೇನೆ. ವಿಧಾನಸೌಧದ ಮೂರನೇ ಮಹಡಿ ಸದಾ ಪರಿಶುದ್ಧವಾಗಿರಬೇಕು. ಹಾಗೆ ಮಾಡುವ ಜವಾಬ್ದಾರಿ ನನ್ನದು’ ಎಂದು ಭರವಸೆ ನೀಡಿದರು.

ಪಂಚಾಯಿತಿಗಳಲ್ಲಿ ದರೋಡೆಕೋರರಿದ್ದಾರೆ: ಪಂಚಾಯಿತಿಗಳಲ್ಲಿ ಏಕರೀತಿ ತೆರಿಗೆಗಳಿಲ್ಲ ಎಂದು ಉದ್ಯಮಿಯೊಬ್ಬರು ಹೇಳಿದ ಸಮಸ್ಯೆಗೆ ಪ್ರತಿಕ್ರಿಯಿಸಿದ ಅವರು, ‘ಏಕರೂಪ ತೆರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಉದ್ಯಮಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂಬುದು ನನ್ನ ಗಮನಕ್ಕೂ ಬಂದಿದೆ. ಪಂಚಾಯಿತಿಗಳಲ್ಲಿ ಬಹುತೇಕರು ದರೋಡೆಕೋರರು. ಅದನ್ನು ಸರಿಪಡಿಸುವುದು ನನಗೊಂದು ಸವಾಲಾಗಿದೆ’ ಎಂದು ಹೇಳಿದರು.

* ವ್ಯಾಪಾರ ಮತ್ತು ಕೈಗಾರಿಕೋದ್ಯಮಗಳ ಬೇಡಿಕೆಗಳು

* ಎಪಿಎಂಸಿ ಸೆಸ್‌ ಅನ್ನು 1.5ರಿಂದ 0.5ಗೆ ಇಳಿಸಿ

* ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಪ್ರತ್ಯೇಕ ಆಸ್ತಿ ತೆರಿಗೆ ರೂಪಿಸಿ

* ಮಹಿಳಾ ಉದ್ಯೋಗಿಗಳಿಗೆ ಪ್ರೋತ್ಸಾಹ ನೀಡಿ

* ವ್ಯಾಪಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ರೂಪಿಸಿ

****

* ಇಂದಿರಾ ಕ್ಯಾಂಟೀನ್‌ ಬದಲು, ಬೀದಿ ವ್ಯಾಪಾರಿಗಳಿಗೆ ಫುಡ್‌ಕೋರ್ಟ್‌ ಮಾಡಿದ್ದರೆ ನಮ್ಮ ಹಾಗೂ ಜನರ ಸಮಸ್ಯೆ ಎರಡಕ್ಕೂ ಪರಿಹಾರ ಸಿಗುತ್ತಿತ್ತು

– ಚಂದ್ರಶೇಖರ್ ಹೆಬ್ಬಾರ್, ಹೋಟೆಲ್ ಉದ್ಯಮಿಗಳ ಸಂಘದ ಅಧ್ಯಕ್ಷ

* ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ ತ್ಯಾಜ್ಯ ಸಂಗ್ರಹಿಸಲು ಯಾರೂ ಬರುವುದಿಲ್ಲ. ಅದೊಂದು ಕಸದ ಆಗರವಾಗಿದೆ. ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಬಿಬಿಎಂಪಿ ಸುಮ್ಮನಿದೆ

– ಕೃಷ್ಣಮೂರ್ತಿ, ಪೀಣ್ಯ ಕೈಗಾರಿಕಾ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT