ನಾಗವಾರ–ಗೊಟ್ಟಿಗೆರೆ ಸುರಂಗ ಮಾರ್ಗ ಕಾಮಗಾರಿ ಚುರುಕು

7

ನಾಗವಾರ–ಗೊಟ್ಟಿಗೆರೆ ಸುರಂಗ ಮಾರ್ಗ ಕಾಮಗಾರಿ ಚುರುಕು

Published:
Updated:

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ರದ್ದಾಗಿದ್ದ ಸುರಂಗ ಮಾರ್ಗದ ಕಾಮಗಾರಿ ಮತ್ತೆ ಚುರುಕು ಪಡೆದಿದೆ. ಸಮಸ್ಯೆ ತಂದಿದ್ದ ಸುರಂಗ ಮಾರ್ಗದ ಉದ್ದವನ್ನೇ ಕಡಿಮೆಗೊಳಿಸಿರುವ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಹೊಸ ಟೆಂಡರ್‌ ಕರೆಯಲು ಅನುಮತಿ ನೀಡುವಂತೆ ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್‌ಗೆ ಕೋರಿದೆ.

ಈ ಮೊದಲು 21.45 ಕಿ.ಮೀ ಉದ್ದದ ಗೊಟ್ಟಿಗೆರೆ–ನಾಗವಾರ ಮಾರ್ಗದಲ್ಲಿ 13 ಕಿ.ಮೀ ಸುರಂಗ ಮಾರ್ಗ ನಿರ್ಮಿಸಲು ನಿಗಮ ಟೆಂಡರ್‌ ಕರೆದಿತ್ತು. ಅದು ಅತಿ ಉದ್ದವಾದ ಮಾರ್ಗ ಆಗಿದ್ದರಿಂದ ನಾಲ್ಕು ಪ್ಯಾಕೇಜ್‌ ಗಳಲ್ಲಿ ಟೆಂಡರ್‌ ಕರೆಯಿತು. ಇದಕ್ಕೆ ಕಂಪನಿಗಳು ಅಂದಾಜು ಮೊತ್ತದ ಶೇ 50ಕ್ಕಿಂತ ಅಧಿಕ ಮೊತ್ತವನ್ನು ಬಿಡ್‌ ಮಾಡಿದ್ದವು. ಇದು ಅಧಿಕವಾಗಿದ್ದರಿಂದ ಅನಿವಾರ್ಯವಾಗಿ ಟೆಂಡರ್‌ ರದ್ದುಗೊಳಿಸಲಾಗಿತ್ತು.

ಡೇರಿ ವೃತ್ತ-ನಾಗವಾರ ಮಾರ್ಗದಲ್ಲಿ ಸುರಂಗ ಕೊರೆಯುವ ಬದಲು ವೆಲ್ಲಾರ ಜಂಕ್ಷನ್ ಬಳಿಯ ಫಾತಿಮಾ ಬೇಕರಿಯಿಂದ ಪಾಟರಿ ಟೌನ್‌ವರೆಗೆ (ಟ್ಯಾನರಿ ರಸ್ತೆ) ಮಾತ್ರ 4ರಿಂದ 5 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಿಸಲು ನಿಗಮ ನಿರ್ಧರಿಸಿದೆ.

ಅಂದಾಜು ₹11,014 ಕೋಟಿ ವೆಚ್ಚದಲ್ಲಿ ಗೊಟ್ಟಿಗೆರೆ-ನಾಗವಾರ ಮಾರ್ಗ ನಿರ್ಮಾಣವಾಗುತ್ತಿದೆ. ಈ ಯೋಜನೆಗೆ ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ (ಇಐಬಿ) ₹ 3,500 ಕೋಟಿ ಸಾಲ ನೀಡುತ್ತಿದೆ.

ಒಂದು ಕಿ.ಮೀ. ಸುರಂಗ ಮಾರ್ಗ ಮಾಡಲು ₹500 ಕೋಟಿ ಹಾಗೂ ಎಲಿವೇಟೆಡ್ ಮಾರ್ಗಕ್ಕೆ ₹192 ಕೋಟಿ ವೆಚ್ಚವಾಗುತ್ತಿದೆ. ಸುರಂಗದ ಉದ್ದ ಕಡಿಮೆಯಾಗಿರುವುದರಿಂದ ಖರ್ಚು ಕಡಿಮೆಯಾಗಲಿದೆ. ಇದರಿಂದಾಗಿ ಟೆಂಡರ್‌ಗೆ ಅರ್ಜಿ ಹಾಕುವ ಕಂಪನಿಗಳು ಅಂದಾಜು ಮೊತ್ತದ ಒಳಗೆ ಬಿಡ್‌ ಮಾಡಲಿವೆ ಎಂದು ನಿಗಮ, ಬ್ಯಾಂಕ್‌ಗೆ ಮಾಹಿತಿ ನೀಡಿದೆ.

ಅನುಮತಿ ಸಿಕ್ಕಿದ ಕೂಡಲೇ ಟೆಂಡರ್ ಆಹ್ವಾನಿಸಲು ನಿಗಮ ಸಕಲ ಸಿದ್ಧತೆ ಕೈಗೊಂಡಿದ್ದು, ಈ ಮಾರ್ಗವನ್ನು 2022ರ ಒಳಗೆ ನಿರ್ಮಿಸಲು ಉದ್ದೇಶಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry