ಇಂದಿರಾ ಕ್ಯಾಂಟೀನ್‌ ಅತ್ಯುತ್ತಮ ಯೋಜನೆ

7

ಇಂದಿರಾ ಕ್ಯಾಂಟೀನ್‌ ಅತ್ಯುತ್ತಮ ಯೋಜನೆ

Published:
Updated:
ಇಂದಿರಾ ಕ್ಯಾಂಟೀನ್‌ ಅತ್ಯುತ್ತಮ ಯೋಜನೆ

ಬೆಂಗಳೂರು: ‘ಇಂದಿರಾ ಕ್ಯಾಂಟಿನ್ ಒಂದು ಅತ್ಯುತ್ತಮವಾದ ಜನಪರ ಯೋಜನೆ. ಆದರೆ, ಇದಕ್ಕಾಗಿ ಸಾರ್ವಜನಿಕರಿಗೆ ಮೀಸಲಾದ ಸ್ಥಳಗಳಲ್ಲಿ ಕಾನೂನು ಉಲ್ಲಂಘಿಸಿ ಕ್ಯಾಂಟೀನ್‌ ಕಟ್ಟುವುದು ಸಲ್ಲ’ ಎಂದು ಹೈಕೋರ್ಟ್‌ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

ಯಲಹಂಕದ ಟಾಟಾ ನಗರದಲ್ಲಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನ್‌ ಸ್ಥಳದ ತಕರಾರಿಗೆ ಸಂಬಂಧಿಸಿದ ಸಿವಿಲ್ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ನ್ಯಾಯಮೂರ್ತಿ ಆರ್.ಎಸ್.ಚೌಹಾಣ್ ಹಾಗೂ ಎಚ್‌.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ನ್ಯಾಯಮೂರ್ತಿ ಚೌಹಾಣ್, ‘ಹೈಕೋರ್ಟ್‌ ಆದೇಶವಿದ್ದರೂ ನೀವು ಯಾಕೆ ಸಾರ್ವಜನಿಕರಿಗೆ ಮೀಸಲಾದ ಪಾರ್ಕ್‌ ಜಾಗದಲ್ಲಿ ಕ್ಯಾಂಟೀನ್‌ ಕಟ್ಟಿದ್ದೀರಿ’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪರ ವಕೀಲ ಕೆ.ಎನ್.ಪುಟ್ಟೇಗೌಡ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಪುಟ್ಟೇಗೌಡ, ‘ಸ್ವಾಮಿ, ನಾವು ಪಾರ್ಕ್ ಜಾಗ ಅತಿಕ್ರಮಿಸಿಲ್ಲ. ಅದರ ಪಕ್ಕದಲ್ಲಿರುವ ಜಾಗದಲ್ಲಿ ಕ್ಯಾಂಟೀನ್ ಕಟ್ಟಿದ್ದೇವೆ. ಅಷ್ಟಕ್ಕೂ ಈ ಕಟ್ಟಡವು ಕೋರ್ಟ್‌ ಆದೇಶ ನೀಡುವ ಮುನ್ನವೇ ಪೂರ್ಣಗೊಂಡಿತ್ತು. ಇದರ ನಿರ್ಮಾಣಕ್ಕೆ ₹ 35 ಲಕ್ಷ ಖರ್ಚು ಮಾಡಲಾಗಿದೆ. ಈಗ ಇದು ನ್ಯಾಯಾಂಗ ನಿಂದನೆ, ಒಡೆದು ಹಾಕಿ ಎಂದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಬಿಬಿಎಂಪಿ ಇಚ್ಛಾಪೂರ್ವಕವಾಗಿ ನ್ಯಾಯಾಂಗ ನಿಂದನೆ ಮಾಡಿಲ್ಲ. ನ್ಯಾಯಪೀಠ ಇದನ್ನು ಸೂಕ್ಷ್ಮವಾಗಿ ಗಮನಿಸಬೇಕು’ ಎಂದು ಮನವಿ ಮಾಡಿದರು.

ಈ ಮಾತಿಗೆ ಪ್ರತಿಕ್ರಿಯಿಸಿದ ಚೌಹಾಣ್‌, ‘ಬೆಂಗಳೂರು ಉದ್ಯಾನ ನಗರಿ ಎಂದು ಹೆಸರು ಪಡೆದಿತ್ತು. ಆದರೆ, ಈಗ ಎಲ್ಲೆಡೆ ಖಾಲಿ ಜಾಗಗಳಲ್ಲಿ ಕಸದ ರಾಶಿಯ ಗುಡ್ಡೆ ಕಾಣುತ್ತಿದೆ. ನಗರ ದಿನೇ ದಿನೇ ತನ್ನ ಅಂದವನ್ನು ಕಳೆದುಕೊಳ್ಳುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಖುದ್ದು ಹಾಜರಿಗೆ ಆದೇಶ: ‘ಪ್ರಕರಣದಲ್ಲಿ ಪ್ರತಿವಾದಿಗಳು ನ್ಯಾಯಾಂಗ ನಿಂದನೆ ಮಾಡಿರುವುದು ಮೇಲ್ನೋಟಕ್ಕೆ ವ್ಯಕ್ತವಾಗುತ್ತಿದೆ ಎಂದ ನ್ಯಾಯಮೂರ್ತಿ ಚೌಹಾಣ್‌ ಮುಂದಿನ ವಿಚಾರಣೆ ವೇಳೆ, ಬ್ಯಾಟರಾಯನಪುರ ವ್ಯಾಪ್ತಿಯ ಬಿಬಿಎಂಪಿ ಸಹಾಯಕ ಎಂಜಿನಿಯರ್ ಮೊಹಮದ್ ಅಲಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಂಗನಾಥ್, ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಮತ್ತು ಜಂಟಿ ಕಮಿಷನರ್ ಎಸ್. ನಾಗರಾಜ್ ಮುಂದಿನ ವಿಚಾರಣೆ ವೇಳೆ ಕೋರ್ಟ್‌ಗೆ ಖುದ್ದು ಹಾಜರಾಗಬೇಕು’ ಎಂದು ಆದೇಶಿಸಿದರು.

ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಲಾಗಿದೆ.

ಭಾರತರತ್ನ ಜೆಆರ್‌ಡಿ ಟಾಟಾ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷರಾದ ರೇಣುಕಾ ಎನ್‌.ಗೋಪಿನಾಥ್ ಹಾಗೂ ಬೃಂದಾ ಕೆ.ವರ್ಮಾ ಈ ಅರ್ಜಿ ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry