ಸಾಕ್ಷ್ಯಾಧಾರಗಳ ಕೊರತೆ ತನಿಖೆ ಕೈಬಿಟ್ಟ ಸಿಬಿಐ

7
ಕೆ.ಸಿ.ವೀರೇಂದ್ರ ಬಚ್ಚಲು ಮನೆಯಲ್ಲಿ ಸಿಕ್ಕಿದ್ದ ಭಾರಿ ಪ್ರಮಾಣದ ನಗದು–ಚಿನ್ನ

ಸಾಕ್ಷ್ಯಾಧಾರಗಳ ಕೊರತೆ ತನಿಖೆ ಕೈಬಿಟ್ಟ ಸಿಬಿಐ

Published:
Updated:
ಸಾಕ್ಷ್ಯಾಧಾರಗಳ ಕೊರತೆ ತನಿಖೆ ಕೈಬಿಟ್ಟ ಸಿಬಿಐ

ಬೆಂಗಳೂರು: ಚಳ್ಳಕೆರೆ ವರ್ತಕ ಕೆ.ಸಿ.ವೀರೇಂದ್ರ ಅಲಿಯಾಸ್‌ ಪಪ್ಪಿ ಅವರ ವಿರುದ್ಧ ದಾಖಲಿಸಿದ್ದ ₹500 ಹಾಗೂ ₹ 2000 ಮುಖಬೆಲೆ ನೋಟುಗಳ ಅಕ್ರಮ ಸಂಗ್ರಹ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕೈಬಿಟ್ಟಿದೆ.

‘ಭ್ರಷ್ಟಾಚಾರ ನಿಗ್ರಹ ಕಾಯ್ದೆ’ಯಡಿ ವೀರೇಂದ್ರ ಅವರ ವಿರುದ್ಧ ದಾಖಲಿಸಿದ್ದ ಪ್ರಕರಣದ ತನಿಖೆ ನಡೆಸಿದ್ದ ಎ.ಅನ್ಬಳಗನ್‌, ಸೂಕ್ತ ಸಾಕ್ಷ್ಯಾಧಾರಗಳ ಕೊರತೆ

ಯಿಂದ ಪ್ರಕರಣವನ್ನು ಮುಕ್ತಾಯಗೊಳಿಸುವುದಾಗಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್‌ ಸಲ್ಲಿಸಿದ್ದರು. ಅದರಂತೆ ನ್ಯಾಯಾಲಯ ಪ್ರಕರಣವನ್ನು ಇತ್ಯರ್ಥಗೊಳಿಸಿತು.

ವೀರೇಂದ್ರ ಅವರಿಂದ ವಶಪಡಿಸಿಕೊಂಡಿರುವ ದಾಖಲೆಗಳನ್ನು ಮರಳಿಸುವಂತೆ ನ್ಯಾಯಾಧೀಶ ಸದಾಶಿವ ಎಸ್. ಸುಲ್ತಾನ್‌ಪುರಿ ಜೂನ್‌ 14ರಂದು ಸಿಬಿಐಗೆ ಆದೇಶಿಸಿದ್ದಾರೆ.

ಪ್ರಕರಣ ಕೈಬಿಡಲು ನೀಡಿರುವ ಕಾರಣ:

*ಚಳ್ಳಕೆರೆಯ ಎಸ್‌ಬಿಎಂ, ನೋಟು ಅಮಾನ್ಯೀಕರಣಗೊಂಡ ಸಂದರ್ಭದಲ್ಲಿ ₹ 2 ಸಾವಿರ ಮುಖಬೆಲೆ ನೋಟುಗಳನ್ನು ಅನುಕ್ರಮವಾಗಿ ಯಾವ್ಯಾವ ಶಾಖೆಗಳಿಗೆ ವಿತರಿಸಿತ್ತು ಎಂಬ ಬಗ್ಗೆ ಮಾಹಿತಿ ದೊರೆತಿಲ್ಲ.

*ನೋಟುಗಳನ್ನು ಏಕಸಂಖ್ಯೆ ಸರಣಿ ಅನುಕ್ರಮದ ಆಧಾರದಲ್ಲಿ ವಿತರಿಸುವ ಬಗ್ಗೆ ಬ್ಯಾಂಕುಗಳ ಬಳಿ ಮಾರ್ಗದರ್ಶಿ ಸೂತ್ರಗಳಿಲ್ಲ.

*ಈ ಪ್ರಕರಣದಲ್ಲಿ ಬ್ಯಾಂಕ್‌ ಅಧಿಕಾರಿಗಳ ಪಾತ್ರವಿದೆ ಎಂಬ ಆರೋಪ ಪುಷ್ಟೀಕರಿಸುವ ಸಾಕ್ಷ್ಯಗಳೂ ದೊರೆತಿಲ್ಲ.

* ಆರೋಪಿಗಳು ದಾಖಲೆ ತಿದ್ದಿದ್ದಾರೆ ಅಥವಾ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂಬುದಕ್ಕೂ ಪುರಾವೆಗಳಿಲ್ಲ.

ಪ್ರಕರಣವೇನು?: ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು 2016 ಡಿಸೆಂಬರ್‌ 10ರಂದು ವೀರೇಂದ್ರ ಅವರ ಚಳ್ಳಕೆರೆಯಲ್ಲಿರುವ ಮನೆ, ಗೋವಾದಲ್ಲಿರುವ ಕ್ಯಾಸಿನೊ, ಹುಬ್ಬಳ್ಳಿಯ ಕಚೇರಿ ಸೇರಿದಂತೆ 15ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದರು.

ಚಳ್ಳಕೆರೆ ನಿವಾಸದ ಬಚ್ಚಲು ಮನೆ ಗೋಡೆಯೊಳಗೆ ಇರಿಸಿದ್ದ ₹ 500 ಮತ್ತು ₹ 2000ರ ಮುಖಬೆಲೆಯ 90 ಲಕ್ಷ ನಗದು, 28 ಕೆ.ಜಿ ಚಿನ್ನದ ಬಿಸ್ಕತ್‌, 4 ಕೆ.ಜಿ ಚಿನ್ನಾಭರಣ ವಶಕ್ಕೆ ಪಡೆಯಲಾಗಿತ್ತು.  ಇದರ ಒಟ್ಟು ಮೌಲ್ಯ ₹ 5.76 ಕೋಟಿ ಎಂದು ಸಿಬಿಐ ದಾಳಿ ಸಂದರ್ಭದಲ್ಲಿ ಹೇಳಿತ್ತು. ಆನಂತರ ವೀರೇಂದ್ರ ಅವರನ್ನು ಬಂಧಿಸಲಾಗಿತ್ತು. 42 ದಿನಗಳ ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು.

ಕಳೆದ ತಿಂಗಳು ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ವೀರೇಂದ್ರ ಸ್ಪರ್ಧಿಸಿ ಸೋತರು.

‘ಬಿ ರಿಪೋರ್ಟ್‌’ ಎಂದರೇನು?

ತನಿಖೆ ಸಮಯದಲ್ಲಿ ಆರೋಪಿಯನ್ನು ವಿಚಾರಣೆಗೆ ಗುರಿಪಡಿಸಲು ಸಾಕಾಗುವಷ್ಟು ಸಾಕ್ಷ್ಯಾಧಾರಗಳು ಸಿಗಲಿಲ್ಲ ಎಂದು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸುವ ಅಂತಿಮ ವರದಿಯೇ ‘ಬಿ ರಿಪೋರ್ಟ್‌’.

* ವೀರೇಂದ್ರ ಅವರನ್ನು ಡಾನ್‌ ತರಹ ಬಿಂಬಿಸಿದ್ದ ತನಿಖಾಧಿಕಾರಿಗಳು ಬರೀ ಆರೋಪದ ಬೋಗಿಗಳನ್ನು ಜೋಡಿಸಿದ್ದರು. ಎಂಜಿನ್ನೇ ಇರಲಿಲ್ಲ. ಕಡೆಗೂ ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಟ್ಟಿದ್ದಾರೆ.

–ಎಚ್‌.ಎಸ್.ಚಂದ್ರಮೌಳಿ, ವೀರೇಂದ್ರ ಪರ ವಕೀಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry