ನಗರದ ನಕ್ಸಲರಿಂದಲೇ ದೇಶಕ್ಕೆ ಆತಂಕ

5
‘ಅರ್ಬನ್‌ ನಕ್ಸಲ್ಸ್‌’ ಕೃತಿ ಕುರಿತ ಸಂವಾದದಲ್ಲಿ ಲೇಖಕ ವಿವೇಕ್‌ ಅಗ್ನಿಹೋತ್ರಿ ಕಳವಳ

ನಗರದ ನಕ್ಸಲರಿಂದಲೇ ದೇಶಕ್ಕೆ ಆತಂಕ

Published:
Updated:
ನಗರದ ನಕ್ಸಲರಿಂದಲೇ ದೇಶಕ್ಕೆ ಆತಂಕ

ಬೆಂಗಳೂರು: 2030ರ ವೇಳೆಗೆ ದೇಶಕ್ಕೆ ನಗರದ ನಕ್ಸಲರಿಂದಲೇ (ಅರ್ಬನ್‌ ನಕ್ಸಲ್ಸ್‌) ಆತಂಕವಿದೆ ಎಂದು ಚಿತ್ರ ನಿರ್ದೇಶಕ, ಲೇಖಕ ವಿವೇಕ್‌ ಅಗ್ನಿಹೋತ್ರಿ ಕಳವಳ ವ್ಯಕ್ತಪಡಿಸಿದರು.

ಇಂಡಿಕ್‌ ಅಕಾಡೆಮಿ ಮತ್ತು ಕೆಂಚಾಂಬಾ ಚಾರಿಟೇಬಲ್‌ ಟ್ರಸ್ಟ್ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಅಗ್ನಿಹೋತ್ರಿ ಅವರ ‘ಅರ್ಬನ್‌ ನಕ್ಸಲ್ಸ್‌’ ಕೃತಿ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಬೌದ್ಧಿಕ ವರ್ಗದವರೆನಿಸಿಕೊಂಡವರೇ ಮನಸ್ಸುಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಜಾತ್ಯತೀತ ಎಂಬ ಶಬ್ದವು ಸಾಮಾಜಿಕ ಸುಧಾರಣೆಯ ಶಬ್ದವಾಗದೆ, ರಾಜಕೀಯ ಬಳಕೆಯ ಸಾಧನವಾಗುತ್ತಿದೆ. ಇಂಥ ಕೃತ್ಯಗಳಿಗೆ ಬಡ ಮತ್ತು ಮಧ್ಯಮ ವರ್ಗದವರಿಂದ ಸಂಗ್ರಹಿಸಲಾದ ಹಣವನ್ನು ಪೂರೈಸಲಾಗುತ್ತಿದೆ’ ಎಂದು ಅವರು ಆರೋಪಿಸಿದರು.

‘ಕಮ್ಯುನಿಸ್ಟ್‌ ಸಿದ್ಧಾಂತ ಎಂದರೆ ಅದು ಯಶಸ್ಸಿನ ವಿರೋಧಿ. ಶ್ರೀಮಂತರು ಕೆಟ್ಟವರು, ದುಡಿಯುವವರು ಒಳ್ಳೆಯವರು ಎಂಬ ಭಾವನೆಯನ್ನು ಮೂಡಿಸಿ ಎರಡು ವರ್ಗಗಳ ನಡುವೆ ಸಂಘರ್ಷ ಹುಟ್ಟುಹಾಕುತ್ತಿದೆ. ವಾಸ್ತವವಾಗಿ ದೇಶದ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಹಲವು ಹೋರಾಟಗಳವರೆಗೆ ನಾಯಕರ ಹಿಂದೆ ಬೆನ್ನೆಲುಬಾಗಿ ಶ್ರೀಮಂತರು, ಉದ್ಯಮಿಗಳೇ ನಿಂತಿದ್ದರು. ದೇಶ ಒಂದೆಡೆ ಕಮ್ಯುನಿಸ್ಟ್‌ ಸಿದ್ಧಾಂತಗಳ ದಾಳಿ, ಮತ್ತೊಂದೆಡೆ ಇಸ್ಲಾಮಿಕ್‌ ದಾಳಿ ಎದುರಿಸುತ್ತಿದೆ. ಈ ದಾಳಿಗಳೇನೇ ಆದರೂ ದೇಶದ ಏಕತೆಯನ್ನು ಛಿದ್ರಗೊಳಿಸಲು ಆಗಲಿಲ್ಲ’ ಎಂದರು.

‘ಸಮಾಜವಾದಿ ಎಂಬ ಶಬ್ದವನ್ನು ಸಂವಿಧಾನದ ಪ್ರಸ್ತಾವನೆಯಲ್ಲಿ ಬಳಸಿರುವುದು ಸರಿಯಲ್ಲ. ಹಾಗೆಂದರೆ ಅದೊಂದು ರಾಜಕೀಯ ಸಿದ್ಧಾಂತಕ್ಕೆ ಅಂಟಿಕೊಂಡಿದೆ ಎಂದು ಅರ್ಥ. ಆ ಶಬ್ದ ಇರುವುದರಿಂದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಕೊಲೆ ಮಾಡಿದಂತೆ’ ಎಂದು ಅವರು ವಿವರಿಸಿದರು.

‘ಹಿಂದೂ ಎಂದು ಹೇಳಿಕೊಳ್ಳಲು ಹಿಂಜರಿಯುವಂಥ ಮನಸ್ಥಿತಿಯನ್ನು ನಗರದ ನಕ್ಸಲರು ಮಾಡುತ್ತಿದ್ದಾರೆ. ಮಾವೋವಾದಿಗಳನ್ನು ವಿರೋಧಿಸುವ ಇವರು ಸ್ಟಾಲಿನ್‌, ಲೆನಿನ್‌ ಅಂಥ ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದಾರೆ. ಇಂಥವರು ರಾಜಕೀಯದಲ್ಲಿದ್ದು ಮಾಡುತ್ತಿರುವುದೇನು? ಅದೇ ಮಾವೋ ಚಟುವಟಿಕೆಗಳೇ ಅಲ್ಲವೇ’ ಎಂದು ಪ್ರಶ್ನಿಸಿದರು.

‘ದೇಶದಲ್ಲಿ ಕೆಲವೇ ಜನ ತಿನ್ನಬಹುದಾದ ಗೋಮಾಂಸವನ್ನು ಆಹಾರ ಸಂಸ್ಕೃತಿ ಎಂದು ಬಣ್ಣಿಸಲಾಗುತ್ತಿದೆ. ವಾಸ್ತವವಾಗಿ ಮುಸ್ಲಿಮರೇ ತಮ್ಮ ಮನೆಗಳಲ್ಲಿ ಗೋಮಾಂಸ ಬೇಯಿಸುವುದಿಲ್ಲ. ಯಾರೂ ಕೂಡಾ ಹಸಿವಾದಾಗ ಗೋಮಾಂಸವೇ ಬೇಕುಎನ್ನುವುದಿಲ್ಲ. ಗೋಮಾಂಸವನ್ನು ಮುಸ್ಲಿಮರು ತಿನ್ನುತ್ತಿದ್ದಾರೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ’ ಎಂದರು.

‘ದೇಶದಲ್ಲಿ ಕೆಲವು ಸರ್ಕಾರೇತರ ಸಂಘಟನೆಗಳು ಕೇವಲ ಲೋಪಗಳನ್ನಷ್ಟೇ ಹುಡುಕಲು ಹೋಗುತ್ತಿವೆ. ನಾವೂ ಅವುಗಳ ಲೋಪ ಎತ್ತಿ ಹಿಡಿಯಬೇಕು ಎಂದ ಅವರು, ಲಕ್ಷ್ಮಿ, ದುರ್ಗೆಯನ್ನು ಕೆಲಕಾಲ ಬದಿಗಿರಿಸಿ ಸರಸ್ವತಿಯನ್ನು ಮುಂದಿಡೋಣ’ ಎಂದರು.

ಕೆಂಚಾಂಬ ಟ್ರಸ್ಟ್‌ನ ಟ್ರಸ್ಟಿ ಸಂತೋಷ್‌ ಕೆಂಚಾಂಬ, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರಭುಲಿಂಗ ನಾವದಗಿ, ಇಂಡಿಕ್‌ ಅಕಾಡೆಮಿಯ ವಿಪುಲ್‌ ಕೊಚಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry