‘ಇಂದಿನ ಸಿನಿಮಾಗಳಲ್ಲಿ ದ್ವಂದ್ವಾರ್ಥದ ಹಾಡುಗಳೇ ಹೆಚ್ಚು’

7
‘ಸ್ವರ ಸಾಮ್ರಾಟ್‌ ರಾಜನ್‌ ನಾಗೇಂದ್ರ’ ಪುಸ್ತಕ ಬಿಡುಗಡೆ

‘ಇಂದಿನ ಸಿನಿಮಾಗಳಲ್ಲಿ ದ್ವಂದ್ವಾರ್ಥದ ಹಾಡುಗಳೇ ಹೆಚ್ಚು’

Published:
Updated:
‘ಇಂದಿನ ಸಿನಿಮಾಗಳಲ್ಲಿ ದ್ವಂದ್ವಾರ್ಥದ ಹಾಡುಗಳೇ ಹೆಚ್ಚು’

ಬೆಂಗಳೂರು: ‘ಸಂಗೀತ ನಿರ್ದೇಶಕ ರಾಜನ್‌ ನಾಗೇಂದ್ರ ಹಾಗೂ ನನ್ನ ಜೋಡಿಯಲ್ಲಿ 29 ಸಿನಿಮಾಗಳು ತೆರೆ ಕಂಡಿವೆ. ಎಲ್ಲಾ ಸಿನಿಮಾದ ಹಾಡುಗಳು ಜನಪ್ರಿಯವಾಗಿವೆ. ಆದರೆ, ಇಂದಿನ ಚಿತ್ರಗಳಲ್ಲಿ ದ್ವಂದ್ವಾರ್ಥದ ಹಾಡುಗಳೇ ಹೆಚ್ಚು’ ಎಂದು ನಿರ್ದೇಶಕ ಎಸ್‌.ಕೆ.ಭಗವಾನ್‌ ಅಭಿಪ್ರಾಯಪಟ್ಟರು.

‘ಸ್ವರ ಸಾಮ್ರಾಟ್‌ ರಾಜನ್‌ ನಾಗೇಂದ್ರ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘1964ರಲ್ಲಿ ಮಂತ್ರಾಲಯ ಮಹಾತ್ಮೆ ಸಿನಿಮಾದ ಮೂಲಕ ಮೊದಲ ಬಾರಿಗೆ ನನಗೆ ರಾಜನ್‌ ಅವರ ಪರಿಚಯ ಆಯಿತು. ಅಲ್ಲಿಂದ ಮುಂದೆ ನಮ್ಮ ಸಿನಿಮಾಗಳಲ್ಲಿ ಹೊಸ ಪ್ರಯೋಗಗಳನ್ನು ಮಾಡಿದೆವು. ಕನ್ನಡದ ಜನಪ್ರಿಯ ಹಾಡುಗಳನ್ನು ಮತ್ತೊಮ್ಮೆ ಸಿನಿಮಾಗಳಲ್ಲಿ ಬಳಸಿಕೊಳ್ಳುವ ಪರಂಪರೆ ಆರಂಭ ಮಾಡಿದ್ದು ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟಿತು. ಆಕಾಶವೆ ಬೀಳಲಿ ಮೇಲೆ.., ಇಂದು ಎನಗೇ ಗೋವಿಂದ ಹಾಡುಗಳು ಹೆಚ್ಚು ಜನಪ್ರಿಯವಾದವು’ ಎಂದು ತಮ್ಮ ಕಾಲದ ಸಿನಿಮಾಗಳ ಕುರಿತು ಹೇಳಿದರು.

‘ರಾಜನ್‌ ಅವರ ಗೀತೆಗಳನ್ನು ಮತ್ತೊಮ್ಮೆ ಬಳಸಿಕೊಳ್ಳುವುದು ಎಂದರೆ ಖುಷಿಯಾಗುತ್ತದೆ. ಅವರ ಹಾಡುಗಳಲ್ಲೂ ದ್ವಂದ್ವಾರ್ಥಗಳಿವೆ. ಆದರೆ, ಅವು ಈಗಿನ ಕಾಲದ ಹಾಡುಗಳಂತೆ ಅಲ್ಲ. ತೆರೆಯೋ ಬಾಗಿಲನೂ ರಾಮ.. ಹಾಡಿನಲ್ಲಿ ದೇವರ ನಾಮವೂ ಇದೆ. ಜೊತೆಗೆ ನಾಯಕ ನಟನ ಹೆಸರಿನಲ್ಲಿ ನಾಯಕಿ ಹಾಡಿದಂತೆಯೂ ಇದೆ. ಈ ರೀತಿ ಎರಡು ವಿಭಿನ್ನ ಅರ್ಥಗಳು ನಮ್ಮ ಸಿನಿಮಾದ ಹಾಡುಗಳಲ್ಲಿ ಇರುತ್ತಿದ್ದವು’ ಎಂದು ಹೇಳಿದರು.

‘ಎರಡು ಕನಸು ಸಿನಿಮಾದ ಹಾಡು–ಪೂಜಿಸಲೆಂದೇ ಹೂಗಳ ತಂದೆ! ಹೆಚ್ಚು ಯಶಸ್ಸು ತಂದುಕೊಟ್ಟಿತು. ಬಿಸಿಲಾದರೇನು, ಮಳೆಯಾದರೇನು ಕೂಡ ಆಗಿನ ಹಿಟ್‌ ಗೀತೆ. ನಮ್ಮ ಕಾಲದಲ್ಲಿ ಹಿಂದಿ ಹಾಡುಗಳನ್ನು ಕನ್ನಡಕ್ಕೆ ತರುವ ಪರಂಪರೆ ಇತ್ತು.  ನಾವು ಮಾತ್ರ ಕನ್ನಡದ ಹಾಡುಗಳಿಗೆ ಪ್ರಾಮುಖ್ಯತೆ ನೀಡಿದ್ದೆವು’ ಎಂದು ನೆನೆದರು.

‘ಉತ್ತಮ ಹಾಡುಗಳು ಸಂಯೋಜನೆಗೊಳ್ಳುವುದಕ್ಕೆ ನಿರ್ದೇಶಕರು ಕೂಡ ಕಾರಣ. ನಮಗೆ ಅವರು ಕೊಟ್ಟ ಅವಕಾಶಗಳಿಂದ ಇದೆಲ್ಲಾ ಸಾಧ್ಯವಾಗಿದೆ’ ಎಂದು ರಾಜನ್‌ ನಾಗೇಂದ್ರ ಅವರು ಭಗವಾನ್‌ ಅವರನ್ನು ಹೊಗಳಿದರು.

ಸಾಹಿತಿ ದೊಡ್ಡರಂಗೇಗೌಡರು; ‘ನನ್ನ ಕೆಲವು ಹಾಡುಗಳು ಹಿಟ್‌ ಆಗಲು ಪ್ರೇಮ ವೈಫಲ್ಯವೇ ಕಾರಣ. ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಪ್ರೀತಿಯಲ್ಲಿ ಬಿದ್ದೆ. ಆದರೆ ಅದು ಯಶಸ್ವಿಯಾಗಲಿಲ್ಲ. ಆಗ ನೋವಿನಲ್ಲಿ ನಾನು ಗೀತೆಗಳನ್ನು ಬರೆದೆ. ರಾಜನ್‌ ಅವರ ಹಾಡುಗಳಲ್ಲಿ ಜನಪದದ ಬೇರುಗಳು ಇವೆ. ಇದರಿಂದ ಅವರ ಗೀತೆಗಳಲ್ಲಿ ಜೀವಂತಿಕೆ ಎದ್ದುಕಾಣುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry