ಸವಾಲಾದ ಘನತ್ಯಾಜ್ಯ, ಕಟ್ಟಡಗಳ ಅವಶೇಷ

7
ಬಿಬಿಎಂಪಿ– ಪೌರ ಕಾರ್ಮಿಕರು– ಕಸ ಸಾಗಾಟಗಾರರ ನಡುವಿನ ಶೀತಲ ಸಮರ

ಸವಾಲಾದ ಘನತ್ಯಾಜ್ಯ, ಕಟ್ಟಡಗಳ ಅವಶೇಷ

Published:
Updated:
ಸವಾಲಾದ ಘನತ್ಯಾಜ್ಯ, ಕಟ್ಟಡಗಳ ಅವಶೇಷ

ಬೆಂಗಳೂರು: ಪೌರ ಕಾರ್ಮಿಕರ ವೇತನ ಪಾವತಿಸಿದ್ದೇವೆ ಎಂದು ಬಿಬಿಎಂಪಿ ಒಂದೆಡೆ ಹೇಳುತ್ತಿದೆ. ಕೇವಲ ನಾಲ್ಕು ತಿಂಗಳ ವೇತನ ಪಾವತಿಸಿ ಎರಡು ತಿಂಗಳ ಹಣ ಬಾಕಿ ಇರಿಸಿಕೊಂಡಿದ್ದಾರೆ ಎಂದು ಪೌರ ಕಾರ್ಮಿಕರು ದೂರಿದ್ದಾರೆ.

ಬಿಬಿಎಂಪಿ– ಪೌರ ಕಾರ್ಮಿಕರು– ಕಸ ಸಾಗಾಟಗಾರರ ನಡುವಿನ ಶೀತಲ ಸಮರ ಮುಂದುವರಿದಿದೆ. ನಗರದ ಹಿಂದುಳಿದ ಪ್ರದೇಶಗಳು, ಕೊಳೆಗೇರಿಗಳಲ್ಲಿ ಕಸದ ರಾಶಿ ಹಾಗೇ ಬಿದ್ದಿದೆ. ಕಾಟನ್‌ಪೇಟೆ, ಬಿನ್ನಿಪೇಟೆ, ಕೆ.ಆರ್‌.ಮಾರುಕಟ್ಟೆ ಪ್ರದೇಶಗಳಲ್ಲಿ ಬಹಳ ಕಾಲದಿಂದ ಬಿದ್ದ ಕಸದ ರಾಶಿಯನ್ನು ಕೇಳುವವರೇ ಇಲ್ಲವಾಗಿದೆ. ಗಬ್ಬು ನಾತದ ನಡುವೆ ಕಾಲ ಕಳೆಯಬೇಕಾಗಿದೆ ಎಂದು ಕಾಟನ್‌ಪೇಟೆಯ ನಿವಾಸಿಯೊಬ್ಬರು ಅಳಲು ತೋಡಿಕೊಂಡರು.

ನಿತ್ಯದ ಕಸದ ರಾಶಿಯ ಜತೆ ಕಟ್ಟಡ ತ್ಯಾಜ್ಯಗಳೂ ಇದೇ ರೀತಿ ಕೊಳೆಗೇರಿ ಪ್ರದೇಶದ ರಸ್ತೆಗಳಲ್ಲಿ ರಾಶಿ ಬಿದ್ದಿವೆ. ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.

ಪ್ರತಿ ನಿತ್ಯ ಕಸದ ರಾಶಿಯ ಚಿತ್ರ ಪ್ರಕಟಿಸುವ ಕುರಿತು ಪೌರ ಕಾರ್ಮಿಕರ ಬಯೊಮೆಟ್ರಿಕ್‌ ಸಹಿ ಪಡೆಯುವವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಕಸದ ಚಿತ್ರ ತೆಗೆದಿರಲ್ಲಾ ಸಾಕು’ ಎಂದು ಗದರಿದ್ದೂ ನಡೆಯಿತು. ಕಸ ಎಸೆದಿರುವ ಪ್ರದೇಶಗಳು ರಾತ್ರಿ ವೇಳೆ ಬಯಲು ಶೌಚದ ತಾಣವಾಗಿಬಿಟ್ಟಿವೆ. ಎಲ್ಲ ದುರ್ವಾಸನೆ ಸಹಿಸಿಕೊಳ್ಳಬೇಕಾದ ಅನಿವಾರ್ಯ. ಈ ಬಗ್ಗೆ ಧ್ವನಿಯೆತ್ತಿದರೆ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಾರೆ. ಅವಾಚ್ಯ ನಿಂದನೆಯನ್ನೂ ಕೇಳಬೇಕಾಗುತ್ತದೆ ಎಂದು ಮನೆಗೆಲಸ ಮಾಡುತ್ತಿರುವ ಮಹಿಳೆ ಮಂಗಳಾ ಅಸಹಾಯಕತೆ ವ್ಯಕ್ತಪಡಿಸಿದರು.

ಕಸ ಸಾಗಿಸುವ ವಾಹನಗಳು ಸರಿಯಾದ ವೇಳೆಗೆ ಬರುತ್ತಿಲ್ಲ. ಸಂಗ್ರಹವಾಗುತ್ತಿರುವ ಕಸದ ಪ್ರಮಾಣಕ್ಕೆ ವಾಹನಗಳು ಸಾಲುತ್ತಿಲ್ಲ ಎಂಬ ಮಾತುಗಳೂ ನಗರದಲ್ಲಿ ಕೇಳಿಬಂದಿವೆ.

‘ಪೌರ ಕಾರ್ಮಿಕರ ವೇತನವನ್ನು ಬಿಡುಗಡೆ ಮಾಡಿದ್ದೇವೆ. ವಾಹನ ಮಾಲೀಕರ ಸಮಸ್ಯೆಯನ್ನು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಅವರ ನೇತೃತ್ವದಲ್ಲಿ ಬಗೆಹರಿಸಿದ್ದೇವೆ’ ಎಂದು ಮೇಯರ್‌ ಆರ್‌.ಸಂಪತ್‌ರಾಜ್‌ ಇತ್ತೀಚೆಗೆ ಹೇಳಿದ್ದರು. ಆದರೆ, ನಗರದ ವಾಸ್ತವ ಬೇರೆಯೇ ಇದೆ ಎಂದು ನಾಗರಿಕರು ಹೇಳಿದರು.

ಕಟ್ಟಡ ತ್ಯಾಜ್ಯವನ್ನು ರಸ್ತೆಬದಿಯಲ್ಲಿ ಸುರಿಯುವವರಿಗೆ ದಂಡ ವಿಧಿಸಬೇಕು. ಅಥವಾ ಆ ತ್ಯಾಜ್ಯವನ್ನು ಪಾಳು ಜಾಗದಲ್ಲಿ ತುಂಬಿ ಸಮತಟ್ಟು ಮಾಡಲು ಬಳಸಬಹುದು. ಕಸದ ಸಮಸ್ಯೆ ನಿಭಾಯಿಸುವುದೇ ಸವಾಲು. ಅದರ ನಡುವೆ, ಕಟ್ಟಡ ನಿರ್ಮಾಣಕಾರರು ಕೂಡ ತ್ಯಾಜ್ಯ ಸಂಗ್ರಹಕ್ಕೆ ‘ಕೊಡುಗೆ’ ನೀಡುವುದು ಅಕ್ಷಮ್ಯ ಎಂದು ಶಂಕರಪುರ ನಿವಾಸಿ ಗೋವಿಂದ ರಾವ್‌ ಬೇಸರ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry