ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11 ವರ್ಷಗಳಿಂದ ತೆರಿಗೆಯನ್ನೇ ಕಟ್ಟಿಲ್ಲ 6,188 ಆಸ್ತಿ ಮಾಲೀಕರು

ಆರ್‌.ಆರ್‌.ನಗರ: ಹಳೆ ಬಾಕಿ ಮೊತ್ತವೇ ₹ 107 ಕೋಟಿ
Last Updated 21 ಜನವರಿ 2020, 16:44 IST
ಅಕ್ಷರ ಗಾತ್ರ

ಬೆಂಗಳೂರು: ಆರ್‌.ಆರ್‌.ನಗರ ವಲಯವು ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಬಳಿಕ ಇಲ್ಲಿನ 6,188 ಆಸ್ತಿ ಮಾಲೀಕರು ಒಮ್ಮೆಯೂ ಆಸ್ತಿ ತೆರಿಗೆ ಪಾವತಿಸಿಲ್ಲ. ಅವರು ಬಾಕಿ ಉಳಿಸಿಕೊಂಡ ತೆರಿಗೆ ಮೊತ್ತ ₹ 7.91 ಕೋಟಿ. ಒಟ್ಟು 34,599 ಮಂದಿ ಐದಕ್ಕೂ ಹೆಚ್ಚು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಈ ಬಾಕಿ ಮೊತ್ತ ₹ 50.83 ಕೋಟಿ.

‘ಆರ್‌.ಆರ್‌.ನಗರ ಈ ಹಿಂದೆ ನಗರ ಸಭೆಯಾಗಿತ್ತು. ಅದು ಪಾಲಿಕೆ ವ್ಯಾಪ್ತಿಗೆ ಸೇರಿದ ನಂತರದ ಆಸ್ತಿ ತೆರಿಗೆ ವಿವರಗಳು ಮಾತ್ರ ನಮ್ಮಲ್ಲಿ ಲಭ್ಯ. ಬಾಕಿ ತೆರಿಗೆ ವಸೂಲಿಗೆ ಅಭಿಯಾನದ ಪ್ರಯುಕ್ತ ಇತ್ತೀಚೆಗೆ ಪರೀಶೀಲನೆ ನಡೆಸಿದಾಗ 6 ಸಾವಿರಕ್ಕೂ ಮಂದಿ ಪಾಲಿಕೆ ಒಮ್ಮೆಯೂ ಆಸ್ತಿ ತೆರಿಗೆ ಕಟ್ಟದೇ ಇರುವುದು ಕಂಡು ಬಂದಿದೆ’ ಎಂದು ಆರ್‌.ಆರ್‌.ನಗರ ವಲಯದ ಉಪಾಯುಕ್ತ ಕೆ.ಶಿವೇಗೌಡ ತಿಳಿಸಿದರು.

‘ತೆರಿಗೆಯಲ್ಲಿ ಯಾವುದೇ ರಿಯಾಯಿತಿ ನೀಡಲು ಅವಕಾಶ ಇಲ್ಲ. ಬಾಕಿ ತೆರಿಗೆಗೆ ತಿಂಗಳಿಗೆ ಶೇ 2ರಷ್ಟು ಹಾಗೂ ವಾರ್ಷಿಕ ಶೇ 24ರಷ್ಟು ಬಡ್ಡಿ ಸೇರಿಸಿ ವಸೂಲಿ ಮಾಡಬೇಕಾಗುತ್ತದೆ. 11 ವರ್ಷಗಳ ಹಿಂದಿನ ತೆರಿಗೆ ಬಾಕಿಗೆ ಬಡ್ಡಿ ಸೇರಿಸಿದರೆ ಆ ಮೊತ್ತ ಮೂರು ಪಟ್ಟು ಹೆಚ್ಚಾಗುತ್ತದೆ’ ಎಂದರು.

‘ನಮ್ಮ ವಲಯದ ಆರೂ ಉಪವಿಭಾಗಗಳಲ್ಲಿ ಕಂದಾಯ ಅಧಿಕಾರಿಗಳು ಹಾಗೂ ಸಹಾಯಕ ಕಂದಾಯ ಅಧಿಕಾರಿಗಳು ನಿತ್ಯ ಇಂತಿಷ್ಟು ಬಾಕಿ ತೆರಿಗೆ ವಸೂಲಿ ಮಾಡಬೇಕು ಎಂದು ಗುರಿ ನಿಗದಿ ಮಾಡಿದ್ದೇವೆ. ಇನ್ನು ಮೂರು ತಿಂಗಳಲ್ಲಿ ಕನಿಷ್ಠ ಪಕ್ಷ ₹ 93.48 ಕೋಟಿ ಬಾಕಿ ತೆರಿಗೆ ವಸೂಲಿ ಮಾಡುವಂತೆ ಸೂಚಿಸಿದ್ದೇವೆ’ ಎಂದರು.

‘ಎರಡು ವರ್ಷಕ್ಕಿಂತ ಹೆಚ್ಚು ಕಾಲ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿಗಳಿಗೆ ನೋಟಿಸ್‌ ನೀಡಿದ್ದೇವೆ. ಮೊದಲ ಹಂತದಲ್ಲಿ ಕಟ್ಟಡಕ್ಕೆ ಸುಸ್ತಿ ತೆರಿಗೆ ಕುರಿತ ಚಲನ್‌ ಅಂಟಿಸುತ್ತೇವೆ. ₹ 50ಸಾವಿರ ಮಲ್ಪಟ್ಟು ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿಗಳ ಮೇಲೆ ಸುಸ್ತಿದಾರರ ಆಸ್ತಿಯನ್ನು ಬಿಬಿಎಂಪಿ ಸ್ವಾಧೀನಕ್ಕೆ ಪಡೆಯಲಾಗಿದೆ ಎಂದು ಫಲಕ ಹಾಕುತ್ತೇವೆ. ₹ 5 ಲಕ್ಷಕ್ಕೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡ 186 ಆಸ್ತಿಗಳಿಗೆ ಬೀಗ ಹಾಕಿದ್ದೇವೆ’ ಎಂದರು.

‘ಅನೇಕ ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡ 250ಕ್ಕೂ ಹೆಚ್ಚು ಆಸ್ತಿಗಳನ್ನು ಸ್ವಾಧೀನಕ್ಕೆ ಪಡೆದ ಬಗ್ಗೆ ಫಲಕ ಹಾಕಿದ್ದೆವು. ಬಳಿಕ 100ಕ್ಕೂ ಹೆಚ್ಚು ಆಸ್ತಿ ಮಾಲೀಕರು ಬಾಕಿ ತೆರಿಗೆ ಕಟ್ಟಿದ್ದಾರೆ’ ಎಂದರು.

ಆರ್‌.ಆರ್‌.ನಗರ: ತೆರಿಗೆ ಬಾಕಿ ವಿವರ

ಎಷ್ಟು ವರ್ಷಗಳಿಂದ ಬಾಕಿ ಆಸ್ತಿಗಳ ಸಂಖ್ಯೆ ಮೊತ್ತ (₹ ಕೋಟಿಗಳಲ್ಲಿ)
11 6188 7.91
10 3064 4.34
9 5378 5.75
8 5051 5.90
7 5702 17.10
6 4440 4.30
5 4776 5.53

ಅಂಕಿ ಅಂಶ

2,52,644 - ರಾಜರಾಜೇಶ್ವರಿನಗರ ವ್ಯಾಪ್ತಿಯಲ್ಲಿರುವ ಒಟ್ಟು ಆಸ್ತಿಗಳು

₹ 274.72 ಕೋಟಿ - ವಲಯದಲ್ಲಿ 2019–20ನೇ ಸಾಲಿನಲ್ಲಿ ಸಂಗ್ರಹಿಸಬೇಕಾದ ಆಸ್ತಿ ತೆರಿಗೆಯ ಗುರಿ

₹ 117.00 ಕೋಟಿ - ವಸೂಲಿ ಮಾಡಬೇಕಾಗಿರುವ ಒಟ್ಟು ಆಸ್ತಿ ತೆರಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT