ಮಂಗಳವಾರ, ಸೆಪ್ಟೆಂಬರ್ 22, 2020
22 °C
ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನ * ಸುಲಿಗೆ ಮಾಡಿ ಪರಾರಿ

ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನ: ಆರೋಪಿಗೆ ಶೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೊಮ್ಮನಹಳ್ಳಿ ಠಾಣೆ ವ್ಯಾಪ್ತಿಯ ಮನೆಯೊಂದಕ್ಕೆ ನಡುರಾತ್ರಿಯಲ್ಲಿ ನುಗ್ಗಿದ್ದ ಅಪರಿಚಿತನೊಬ್ಬ, ಒಂಟಿಯಾಗಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಆಗಸ್ಟ್ 1ರ ತಡರಾತ್ರಿ ನಡೆದಿರುವ ಘಟನೆ ಸಂಬಂಧ ಸಂತ್ರಸ್ತೆಯೇ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಾಗಿ ಶೋಧ ನಡೆದಿದೆ.

‘ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಮಹಿಳೆ, ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದಾರೆ. ಆಗಸ್ಟ್ 1ರಂದು ಸಂಬಂಧಿಯೊಬ್ಬರ ಮನೆಗೆ ಹೋಗಿ ರಾತ್ರಿ 11ರ ಸುಮಾರಿಗೆ ವಾಪಸ್ ತಮ್ಮ ಮನೆಗೆ ಬಂದು ಮಲಗಿದ್ದರು. ಅದೇ ವೇಳೆ ಈ ಘಟನೆ ನಡೆದಿದೆ’ ಎಂದು ಪೊಲೀಸರು ಹೇಳಿದರು. 

ಕತ್ತಿನ ಬಳಿ ಚಾಕು ಹಿಡಿದಿದ್ದ: ‘ಮಹಿಳೆ ಮಲಗಿದ್ದ ಮಂಚದ ಬಳಿ ತಡರಾತ್ರಿ ಬಂದು ಕುಳಿತಿದ್ದ ಅಪರಿಚಿತ, ಕತ್ತಿನ ಸಮೀಪದಲ್ಲೇ ಚಾಕು ಹಿಡಿದಿದ್ದ. ಎಚ್ಚರಗೊಂಡಿದ್ದ ಮಹಿಳೆ, ‘ಯಾರು ನೀನು’ ಎಂದು ಕೇಳಿದ್ದರು. ತಮಿಳಿನಲ್ಲಿ ಮಾತನಾಡಿದ ಆರೋಪಿ, ‘ನೀನು ಕಿರುಚಾಡಿದರೆ ಕೊಂದು ಬಿಡುತ್ತೇನೆ’ ಎಂದು ಬೆದರಿಸಿದ್ದ. ಆ ಬಗ್ಗೆ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

‘ಚಾಕು ತೋರಿಸಿ ಮಹಿಳೆಯನ್ನು ವಿವಸ್ತ್ರಗೊಳಿಸಿದ್ದ ಆರೋಪಿ, ತನ್ನ ಬಟ್ಟೆಗಳನ್ನೂ ಕಳಚಿದ್ದ. ಮಹಿಳೆಯ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ. ಆ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲೂ ಸೆರೆ ಹಿಡಿದಿದ್ದ’

‘ಮಹಿಳೆಯಿಂದ ಚಿನ್ನದ ಸರ ಹಾಗೂ ಉಂಗುರ ಕಿತ್ತುಕೊಂಡಿದ್ದ ಆರೋಪಿ, ಅತ್ಯಾಚಾರಕ್ಕೂ ಯತ್ನಿಸಿದ್ದ. ಭಯಗೊಂಡ ಮಹಿಳೆ ಕಿರುಚಾಡಿದ್ದರು. ಅಕ್ಕ–ಪಕ್ಕದ ಮನೆಯವರೂ ರಕ್ಷಣೆಗೆ ಬರುವಷ್ಟರಲ್ಲೇ ಆರೋಪಿ ಸ್ಥಳದಿಂದ ಓಡಿ ಹೋಗಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಅಪರಿಚಿತನೆಂದು ದೂರು: ‘ಮಹಿಳೆ ಒಂಟಿಯಾಗಿರುವುದನ್ನು ನೋಡಿಕೊಂಡೇ ಆರೋಪಿ, ಮನೆಗೆ ನುಗ್ಗಿ ಕೃತ್ಯ ಎಸಗಿದ್ದಾನೆ. ಆತನನ್ನು ಮೊದಲ ಬಾರಿಗೆ ನೋಡಿರುವುದಾಗಿ ಮಹಿಳೆ ಹೇಳಿಕೆ ನೀಡಿದ್ದಾರೆ. ಆರೋಪಿ ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.

‘ಗಡ್ಡ ಬಿಟ್ಟಿದ್ದ ಆರೋಪಿ, ಕಪ್ಪು ಬಣ್ಣದ ಶರ್ಟ್ ಹಾಗೂ ಪ್ಯಾಂಟ್ ಧರಿಸಿದ್ದ. ಅದರ ಮೇಲೆಲ್ಲ ಸಿಮೆಂಟ್ ಅಂಟಿಕೊಂಡಿತ್ತು ಎಂಬುದಾಗಿ ಮಹಿಳೆ ಹೇಳಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು