ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರೀಪಾರ್ಕ್‌ ಒತ್ತುವರಿ ಆರೋಪ: ಅರ್ಜಿ ವಿಲೇವಾರಿ

Last Updated 6 ಸೆಪ್ಟೆಂಬರ್ 2019, 19:27 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜಾಜಿನಗರ 3ನೇ ಬ್ಲಾಕ್‌ನಲ್ಲಿರುವ ಟ್ರೀ ಪಾರ್ಕ್‌ನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಾಗ ಒತ್ತುವರಿ ಮಾಡಿದೆ ಎಂದು ಆರೋಪಕ್ಕೆ ಸಂಬಂಧಿಸಿದ ಪ್ರಕರಣವನ್ನು ಮುಖ್ಯ ಕಾರ್ಯದರ್ಶಿ ಇತ್ಯರ್ಥಪಡಿಸಲಿದ್ದಾರೆ’ ಎಂದು ಕೆಪಿಟಿಸಿಎಲ್‌ ಹೈಕೋರ್ಟ್‌ಗೆ ತಿಳಿಸಿದೆ.

ರಾಜಾಜಿನಗರ ನಿವಾಸಿಗಳಾದ ಗೀತಾ ಮಿಶ್ರಾ ಸೇರಿದಂತೆ ನಾಲ್ವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಲೇವಾರಿ ಮಾಡಿದೆ.

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ (ಕೆಪಿಟಿಸಿಎಲ್‌) ಪರವಾಗಿ ಹಾಜರಿದ್ದ ವಕೀಲ ಶ್ರೀರಂಗ ಸುಬ್ಬಣ್ಣ, ಈ ಕುರಿತಂತೆ ನ್ಯಾಯಪೀಠಕ್ಕೆ ವಿವರಿಸಿದರು. ‘ವಿವಾದಿತ ಪ್ರದೇಶದ ಕಂದಾಯ ಖಾತೆ ಮತ್ತು ಸಂಬಂಧಿಸಿದ ಮೂಲ ದಾಖಲೆಗಳು ಕೆಪಿಟಿಸಿಎಲ್‌ ಸುಪರ್ದಿಯಲ್ಲಿವೆ. ಆದಾಗ್ಯೂ ಅರ್ಜಿದಾರರ ಆಕ್ಷೇಪಣೆ ಮತ್ತು ಅಹವಾಲುಗಳನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಆಲಿಸಿ ಇತ್ಯರ್ಥಪಡಿಸಲಿದ್ದಾರೆ’ ಎಂದು ತಿಳಿಸಿದರು.

ಇದನ್ನು ಮಾನ್ಯ ಮಾಡಿದ ನ್ಯಾಯ ಪೀಠ ಮೂರು ತಿಂಗಳಲ್ಲಿ ಅರ್ಜಿದಾರರ ಅಹವಾಲು ಆಲಿಸಿ ಪ್ರಕರಣ ಇತ್ಯರ್ಥಪಡಿಸುವಂತೆ ನಿರ್ದೇಶಿಸಿತು. ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್‌ ವಾದ ಮಂಡಿಸಿದರು.

ಆಕ್ಷೇಪಣೆ ಏನು?: ‘ಬಿಡಿಎಗೆ ಸೇರಿದ್ದ 23.14 ಎಕರೆ ಜಮೀನನ್ನು 1949ರಲ್ಲಿ ಅಂದಿನ ನಗರಾಭಿವೃದ್ಧಿ ಪ್ರಾಧಿಕಾರವು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಗೆ (ಕೆಇಬಿ) ಮಂಜೂರು ಮಾಡಿತ್ತು. ಈ ಪೈಕಿ 6.1 ಎಕರೆಯನ್ನು ಹೆಚ್ಚುವರಿ ಜಮೀನು ಎಂದು ಗುರುತಿಸಲಾಗಿತ್ತು. ಈ ಹೆಚ್ಚುವರಿ ಭೂಮಿಯನ್ನು ಬಿಡಿಎ ಈತನಕ ಕೆಪಿಟಿಸಿಎಲ್‌ನಿಂದ ಹಿಂಪ ಡೆದಿಲ್ಲ. ಆದ್ದರಿಂದ ಈ ಜಮೀನನ್ನು ಹಿಂಪಡೆಯುವಂತೆ ಬಿಡಿಎಗೆ ನಿರ್ದೇ ಶಿಸಬೇಕು ಮತ್ತು ಈ ಪ್ರದೇಶದಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಬಿಬಿಎಂಪಿಗೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.

‘ಸರ್ಕಾರ ಈ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಮುಂದಾಗಿದೆ. ತಡೆ ಗೋಡೆಯನ್ನು ಬಿಬಿಎಂಪಿ ಜೆಸಿಬಿ ಯಿಂದ ತೆರವುಗೊಳಿಸಿದೆ. ಬಹಳಷ್ಟು ಮರ ಗಳನ್ನೂ ಕಡಿದು ಹಾಕಲಾಗಿದೆ’ ಎಂದು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT