ಸೋಮವಾರ, ನವೆಂಬರ್ 18, 2019
20 °C
₹25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಬಂಧಿತರು

ಹನಿಟ್ರ್ಯಾಪ್: ಇಬ್ಬರ ಬಂಧನ

Published:
Updated:
Prajavani

ರಾಮನಗರ: ಯುವತಿಯನ್ನು ಬಳಸಿಕೊಂಡು ಹಿರಿಯ ಪತ್ರಕರ್ತ ರೊಬ್ಬರನ್ನು ಹನಿಟ್ರ್ಯಾಪ್‌ಗೆ ಸಿಲುಕಿಸಿ ₹ 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಕಗ್ಗಲೀಪುರ ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ‌ ರಾಜ್ಯ ಕಾರ್ಮಿಕ ಸೇವಾ ಸಂಘದ ಅಧ್ಯಕ್ಷ ಸುರೇಶ್ ಹಾಗೂ‌ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಬಂಧಿತರು. ತಲೆಮರೆಸಿಕೊಂಡಿರುವ ಯುವತಿ, ಹಾಗೂ ಮತ್ತಿತರ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ.

ಹಿನ್ನೆಲೆ: ಹುಬ್ಬಳ್ಳಿಯ ಹವ್ಯಾಸಿ‌ ಪತ್ರಕರ್ತ ಶಿವಕುಮಾರ್ ಭೋಜಶೆಟ್ಟಿ (68) ಎಂಬುವರಿಗೆ ಟಿ.ವಿ. ವಾಹಿನಿಯೊಂದರಲ್ಲಿ ವರದಿಗಾರ್ತಿ ಆಗಿದ್ದ ಯುವತಿ ಸಾಮಾಜಿಕ‌ ಜಾಲತಾಣದಲ್ಲಿ ಪರಿಚಯ ಆಗಿದ್ದರು.

ನಂತರದಲ್ಲಿ ಫೇಸ್ ಬುಕ್ ಮತ್ತು ವಾಟ್ಸ್‌ ಆ್ಯಪ್‌ ಮೂಲಕ ಇಬ್ಬರ ನಡುವೆ ಸಲುಗೆ ಬೆಳೆದಿತ್ತು.ಕಳೆದ ಆಗಸ್ಟ್ 25ರಂದು ಯುವತಿ, ಶಿವಕುಮಾರ್‌ಗೆ ಮೊಬೈಲ್ ಕರೆ ಮಾಡಿ ಬೆಂಗಳೂರು ಹೊರವಲಯದ ಸಿಯಾನ್ ರೆಸ್ಟೊ ಕೆಫೆ ಎಂಬಲ್ಲಿಗೆ ಕರೆಸಿಕೊಂಡಿದ್ದರು. ಇಬ್ಬರು ಹೋಟೆಲ್‌ನ ಕೊಠಡಿಯಲ್ಲಿ ಇದ್ದಾಗಲೇ ಒಳನುಗ್ಗಿದ್ದ ಸುರೇಶ್ ನೇತೃತ್ವದ ಐದಾರು ಜನರ ಗುಂಪು ಶಿವಕುಮಾರ್ ಮೇಲೆ ಹಲ್ಲೆ ಮಾಡಿತ್ತು. ಶೆಟ್ಟಿ ಅವರ ಜೊತೆಗೆ ಯುವತಿಯನ್ನು ನಿಲ್ಲಿಸಿ ಮೊಬೈಲಿನಲ್ಲಿ ಚಿತ್ರೀಕರಿಸಿಕೊಂಡಿತ್ತು. ಅವರ ಬಳಿ ಇದ್ದ ₹9 ಸಾವಿರವನ್ನೂ‌ ಕಸಿದುಕೊಂಡಿತ್ತು.

ನಂತರ, ಶಿವಕುಮಾರ್ ಅವರನ್ನು ಗೋವಿಂದನಗರದಲ್ಲಿರುವ ತಮ್ಮ ಕಚೇರಿಗೆ ಕರೆದುಕೊಂಡು ಹೋಗಿದ್ದ ಆರೋಪಿಗಳು ₹25 ಲಕ್ಷಕ್ಕೆ‌ ಬೇಡಿಕೆ ಇಟ್ಟಿದ್ದರು. ಕನಿಷ್ಠ ₹3 ಲಕ್ಷ‌ ಕೊಡದಿದ್ದರೆ ಮಾಧ್ಯಮಗಳಿಗೆ ವಿಡಿಯೊ ಬಿಡುಗಡೆ ಮಾಡುವುದಾಗಿ ಹೆದರಿಸಿದ್ದರು.‌ 

ಶಿವಕುಮಾರ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು.

ಪ್ರತಿಕ್ರಿಯಿಸಿ (+)