ಬುಧವಾರ, ನವೆಂಬರ್ 13, 2019
17 °C
ಘರ್ಷಣೆ, ಸಂಚಾರ ದಟ್ಟಣೆ ಸಾಧ್ಯತೆ ಇದ್ದರೆ ಅರ್ಜಿ ತಿರಸ್ಕೃತ

ಪ್ರತಿಭಟನೆಗೆ ಅನುಮತಿ ಕಡ್ಡಾಯ

Published:
Updated:

ಬೆಂಗಳೂರು: ನಗರದಲ್ಲಿ ಇನ್ನು ಮುಂದೆ ಪ್ರತಿಭಟನೆ, ಮೆರವಣಿಗೆ ನಡೆಸಬೇಕಾದರೆ, ಏಳು ದಿನ ಮುಂಚಿತವಾಗಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ.

2009ರಲ್ಲಿ ಜಾರಿಗೆ ಬಂದಿರುವ  ‘ಸಭೆ ಹಾಗೂ ಮೆರವಣಿಗೆಗೆ ಅನುಮತಿ ಹಾಗೂ ನಿಯಂತ್ರಣ (ಬೆಂಗಳೂರು ನಗರ) ಆದೇಶವನ್ನು ಸಾರ್ವಜನಿಕರ ಹಿತದೃಷ್ಟಿ ಹಾಗೂ ಸುಗಮ ಸಂಚಾರದ ಉದ್ದೇಶದಿಂದ ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸರು ಮುಂದಾಗಿದ್ದಾರೆ.   

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಪೊಲೀಸ್ ಕಮಿಷನರ್ ಭಾಸ್ಕರರಾವ್, ‘ಕರ್ನಾಟಕ ಪೊಲೀಸ್ ಕಾಯ್ದೆ ಪ್ರಕಾರ ಆದೇಶ ಹೊರಡಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ’ ಎಂದಿದ್ದಾರೆ.

‘ಪ್ರತಿಭಟನೆ, ಮೆರವಣಿಗೆಯಿಂದ ಘರ್ಷಣೆ ಅಥವಾ ಸಂಚಾರದಟ್ಟಣೆ ಸಾಧ್ಯತೆ ಇದ್ದರೆ, ಸಂಬಂಧಿತ ಅಧಿಕಾರಿಗಳಿಂದ ವರದಿ ಪಡೆದು ಅರ್ಜಿ ತಿರಸ್ಕರಿಸಲು ಅವಕಾಶವಿದೆ’ ಎಂದಿದ್ದಾರೆ.

ಪ್ರಮುಖ ಅಂಶಗಳು

*  ಪ್ರತಿಭಟನೆ ಹಾಗೂ ಮೆರವಣಿಗೆಗೆ ಅನುಮತಿಗಾಗಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.

*  ಮೆರವಣಿಗೆ, ಪ್ರತಿಭಟನೆಯು ಒಂದು ನಿರ್ದಿಷ್ಟ ಠಾಣೆ ವ್ಯಾಪ್ತಿಯಲ್ಲಿದ್ದರೆ, ಆ ಠಾಣೆ ಇನ್‌ಸ್ಪೆಕ್ಟರ್‌ಗೆ ಅರ್ಜಿ ಸಲ್ಲಿಸಬೇಕು. ಉಪವಿಭಾಗ ವ್ಯಾಪ್ತಿಯಲ್ಲಿದ್ದರೆ ಎಸಿಪಿಗೆ, ವಿಭಾಗದ ವ್ಯಾಪ್ತಿಯಲ್ಲಿದ್ದರೆ ಡಿಸಿಪಿಗೆ, ಎರಡಕ್ಕಿಂತ ಹೆಚ್ಚು ವಿಭಾಗ ವ್ಯಾಪ್ತಿಯಲ್ಲಿದ್ದರೆ ಹೆಚ್ಚುವರಿ ಪೊಲೀಸ್ ಕಮಿಷನರ್‌ಗೆ ಅರ್ಜಿ ಸಲ್ಲಿಸಬೇಕು.

*  ಅರ್ಜಿ ಜೊತೆಗೆ ನಗದು ಅಥವಾ ಪೊಲೀಸ್ ಕಮಿಷನರ್, ಬೆಂಗಳೂರು ನಗರ ಹೆಸರಿನಲ್ಲಿ ಡಿ.ಡಿ ರೂಪದಲ್ಲಿ ₹ 20 ಶುಲ್ಕ ಪಾವತಿಸಬೇಕು.  

*  ಪ್ರತಿಭಟನೆ ಹಾಗೂ ಮೆರವಣಿಗೆ ಯಾವಾಗ ನಡೆಯುತ್ತದೆಯೋ ಅದಕ್ಕೂ 7 ದಿನ ಮುಂಚಿತವಾಗಿ ಅನುಮತಿ ಕೋರಿ ಅರ್ಜಿ ಸಲ್ಲಿಸಬೇಕು.

*  ಸಂಬಂಧಪಟ್ಟ ಅಧಿಕಾರಿಗಳು, ಅರ್ಜಿಯನ್ನು ತಿರಸ್ಕರಿಸಿದರೆ ಅದಕ್ಕೆ ಕಾರಣ ಸಮೇತ ಲಿಖಿತವಾಗಿ ಅರ್ಜಿದಾರರಿಗೆ ತಿಳಿಸಬೇಕು

*  ಮೊದಲ ಹಂತದಲ್ಲಿ ಅರ್ಜಿ ತಿರಸ್ಕೃತವಾದರೆ, ಮೇಲಧಿಕಾರಿಗಳ ಬಳಿ ಮೇಲ್ಮನವಿ ಸಲ್ಲಿಸಬಹುದು.

ಪ್ರತಿಕ್ರಿಯಿಸಿ (+)