ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಣ್ಣಿನ ರಾಜ’ನ ಆಧಿಪತ್ಯ ಶುರು!

ಕಾರವಾರದ ಮಾರುಕಟ್ಟೆಗೆ ಹೇರಳವಾಗಿ ಆವಕ; ಮಳೆಯಿಂದಾಗಿ ತುಸು ಕುಸಿದ ದರ
Last Updated 14 ಮೇ 2018, 10:57 IST
ಅಕ್ಷರ ಗಾತ್ರ

ಕಾರವಾರ: ‘ಹಣ್ಣುಗಳ ರಾಜ’ ಎಂದೇ ಪ್ರಸಿದ್ಧವಾಗಿರುವ ಮಾವಿನ ಹಣ್ಣಿನ ಋತು ಆರಂಭವಾಗಿದ್ದು, ನಗರದ ಮಾರುಕಟ್ಟೆಗೆ ಹೇರಳವಾಗಿ ಆವಕವಾಗಿದೆ. ವ್ಯಾಪಾರಿಗಳ ಜೇಬು ಸಹ ತುಂಬುತ್ತಿದೆ.

ಭಾನುವಾರ ಸಂತೆಯ ದಿನವೂ ಆಗಿರುವ ಕಾರಣ ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಮಾವಿನಹಣ್ಣಿನ ರಾಶಿಯೇ ಕಂಡುಬಂತು. ತರಕಾರಿ ವ್ಯಾಪಾರಿಗಳಷ್ಟೇ  ಸಂಖ್ಯೆಯಲ್ಲಿ ಹಣ್ಣಿನ ವ್ಯಾಪಾರಿಗಳೂ ಈ ವಾರ ಸಂತೆಯ ಲ್ಲಿದ್ದರು. ಅವರ ಪೈಕಿ ಮಾವಿನಹಣ್ಣಿನ ವ್ಯಾಪಾರಿಗಳೇ ಅಧಿಕವಾಗಿದ್ದರು.

ಈ ಜಿಲ್ಲೆಯಲ್ಲಿ ವಿಶೇಷವಾಗಿ ಬೆಳೆಯಲಾಗುವ ‘ಕರಿ ಇಶಾಡ್’ ತಳಿಯ ಮಾವಿನಹಣ್ಣಿಗೆ ಅತ್ಯಂತ ಹೆಚ್ಚಿನ ಬೇಡಿಕೆಯಿದೆ. ಅಂಕೋಲಾ ತಾಲ್ಲೂಕಿನ ಬೆಳಂಬರ, ಮುಂಡಗೋಡದ ಮಳಗಿ, ಶಿರಸಿಯ ಬನವಾಸಿಯಲ್ಲಿ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ.

ಈ ಹಣ್ಣಿಗೆ ಕಳೆದ ವಾರ ಸಂತೆಯಲ್ಲಿ ಪ್ರತಿ ಡಜನ್‌ಗೆ ₹450ವರೆಗೂ ದರವಿತ್ತು. ಈಗ ಹಣ್ಣಿನ ಆವಕ ಹೆಚ್ಚಿರುವ ಕಾರಣ ಹಾಗೂ ಮಳೆಯಾಗಿರುವ ಕಾರಣ ₹250ರ ಆಸುಪಾಸಿನಲ್ಲಿದೆ.

‘ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಖರೀದಿ ಮಾಡಿದರೆ ಮತ್ತಷ್ಟು ಕಡಿಮೆ ದರಕ್ಕೆ ಕೊಡುತ್ತೇವೆ. ಕಾಯಿಗಳನ್ನು ಹಣ್ಣು ಮಾಡಲು ಯಾವುದೇ ರಾಸಾ ಯನಿಕವನ್ನು ಬಳಸಿಲ್ಲ. ಬಲಿತ ಕಾಯಿಗಳನ್ನು ಮರದಿಂದ ತಂದು ಒಣಹುಲ್ಲಿನಲ್ಲಿ ಇಟ್ಟಿದ್ದೇವೆ. ಅವು ನೈಸರ್ಗಿಕವಾಗಿ ಹಣ್ಣಾದರೇ ರುಚಿ ಜಾಸ್ತಿ. ಆರೋಗ್ಯಕ್ಕೂ ಉತ್ತಮ’ ಎನ್ನುತ್ತಾರೆ ಅವರ್ಸಾದ ವ್ಯಾಪಾರಿ ಗಣೇಶ. ಹಣ್ಣಿನ ದರ ಕಳೆದ ವರ್ಷ ₹100ರ ಆಸುಪಾಸಿನಲ್ಲಿತ್ತು. ಈ ವರ್ಷ ಬೆಳೆ ಕಡಿಮೆಯಾಗಿದ್ದಕ್ಕೆ ದರ ಜಾಸ್ತಿ ಎನ್ನುತ್ತಾರೆ ಅವರು.

ಗೋವಾ, ಮಹಾರಾಷ್ಟ್ರದಿಂದಲೂ ಮಾವಿನಹಣ್ಣುಗಳು ನಗರಕ್ಕೆ ಆವಕವಾಗಿವೆ. ಗಾಂಧಿ ಬಜಾರ್, ಸವಿತಾ ವೃತ್ತ, ಶಿವಾಜಿ ವೃತ್ತದಲ್ಲಿ ಆಪೂಸ್, ಬಾದಾಮ್, ಪಯರಿ, ಆಲ್ಫಾನ್ಸೋ, ಮಲ್‍ಗೋವಾ, ರಸಪುರಿ, ಬಂಗಾನಪಲ್ಲಿ, ಮಲ್ಲಿಕಾ, ತೋತಾಪುರಿ ಹೀಗೆ ವಿವಿಧ ತಳಿಗಳ ಹಣ್ಣುಗಳೂ ಇಲ್ಲಿ ಸಿಗುತ್ತಿವೆ.

‘ಜಿಲ್ಲೆಯಲ್ಲಿ ಮಾರುಕಟ್ಟೆಗಳಿಗೆ ಮಾವಿನಹಣ್ಣಿನ ಪ್ರವೇಶವಾದರೆ ಸಾಕು, ಮನೆಯಲ್ಲೂ ಅದರದ್ದೇ ಪರಿಮಳ ಬೀರುತ್ತಿರುತ್ತದೆ. ರಸಾಯನ, ಪಾಯಸ, ಮಿಲ್ಕ್‌ಶೇಕ್, ಐಸ್‍ಕ್ರೀಂ ಹೀಗೆ ನಾನಾ ವಿಧಗಳ ತಿನಿಸು ಹಾಗೂ ಪೇಯಗಳನ್ನು ತಯಾರಿಸಿ ಸಂಭ್ರಮಿಸುತ್ತೇವೆ. ಉಳಿದ ಹಣ್ಣುಗಳಿಗಿಂತ ಮಾವು ಬಹಳ ಇಷ್ಟವಾಗುತ್ತದೆ’ ಎನ್ನುತ್ತಾರೆ ಗೃಹಿಣಿ ಸಿಂಧೂರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT