ಗುರುವಾರ , ಜುಲೈ 29, 2021
27 °C
ಕೋವಿಡ್‌ ಲಸಿಕಾ ಅಭಿಯಾನ ಚುರುಕುಗೊಳಿಸಲು ಬಿಬಿಎಂಪಿ ಸಿದ್ಧತೆ

ಜುಲೈ ಅಂತ್ಯದೊಳಗೆ ಶೇ 70ರಷ್ಟು ಮಂದಿಗೆ ಲಸಿಕೆ: ಬಿಬಿಎಂಪಿ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಲಸಿಕಾ ಅಭಿಯಾನವನ್ನು ಬಿಬಿಎಂಪಿ ಇನ್ನಷ್ಟು ಚುರುಕುಗೊಳಿಸಲು ಮುಂದಾಗಿದೆ. ನಗರದಲ್ಲಿ ಕೋವಿಡ್‌ ಲಸಿಕೆ ಪಡೆಯಲು ಅರ್ಹರಾಗಿರುವ ಶೇ 70ರಷ್ಟು ಮಂದಿಗೆ ಜುಲೈ ತಿಂಗಳ ಅಂತ್ಯದೊಳಗೆ ಲಸಿಕೆ ಹಾಕಲು ಪಾಲಿಕೆ ಸಿದ್ಧತೆ ನಡೆಸಿದೆ. 

‘ನಗರದ ನಿವಾಸಿಗಳಲ್ಲಿ ಕೋವಿಡ್‌ ಲಸಿಕೆ ಪಡೆಯಲು ಅರ್ಹರಾದ ಶೇ 40ರಷ್ಟು ಮಂದಿ ಈಗಾಗಲೇ ಮೊದಲನೇ ಡೋಸ್‌ ಪಡೆದಿದ್ದಾರೆ. ಅವರು ಎರಡನೇ ಡೋಸ್‌ ಪಡೆಯಲು ಇನ್ನಷ್ಟು ಸಮಯಾವಕಾಶ ಇದೆ. ಲಸಿಕೆ ಪಡೆದವರ ಪ್ರಮಾಣವನ್ನು ಈ ತಿಂಗಳ ಅಂತ್ಯದೊಳಗೆ ಶೇ 50ಕ್ಕೆ ಹಾಗೂ ಜುಲೈ ತಿಂಗಳ ಅಂತ್ಯದೊಳಗೆ ಶೇ 70ಕ್ಕೆ ಹೆಚ್ಚಿಸುವುದು ನಮ್ಮ ಗುರಿ. ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು.

ಕೊರೊನಾ ವೈರಾಣುವಿನ ಡೆಲ್ಟಾ ಪ್ಲಸ್‌ ರೂಪಾಂತರ ತಳಿ ಹರಡದಂತೆ ಎಚ್ಚರವಹಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಹಾಗಾಗಿ ನಗರದಲ್ಲಿ ಈ ತಳಿಯ ಹರಡುವಿಕೆ ನಿಯಂತ್ರಿಸುವ ಸಲುವಾಗಿ ಬಿಬಿಎಂಪಿ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. 

‘ಮಹಾರಾಷ್ಟ್ರ, ಕೇರಳ ಹಾಗೂ ಮಧ್ಯಪ್ರದೇಶಗಳಲ್ಲಿ ಕೊರೊನಾ ವೈರಾಣುವಿನ ಡೆಲ್ಟಾ ಪ್ಲಸ್‌ ತಳಿಗಳು  ಪತ್ತೆಯಾಗಿವೆ. ಇದರಿಂದ ಏನೆಲ್ಲ ಹಾನಿ ಉಂಟಾಗುತ್ತದೆ ಎಂಬ ಬಗ್ಗೆ ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ. ಆದರೆ, ಈ ತಳಿಯ ವೈರಾಣು ಹರಡುವಿಕೆ ತಡೆಯುವ ಉದ್ದೇಶದಿಂದ ಬಿಬಿಎಂಪಿ ವತಿಯಿಂದಲೂ ಜೀನೋಮ್‌ ಸೀಕ್ವೆನ್ಸಿಂಗ್‌ (ಡಿಎನ್‌ಎ ಜೋಡಣಾ ಕ್ರಮ) ಪತ್ತೆ ಪರೀಕ್ಷೆ ನಡೆಸಲು ಕ್ರಮ ಕೈಗೊಂಡಿದ್ದೇವೆ. ಸೋಂಕು ಪತ್ತೆಯಾದ ಪ್ರಕರಣಗಳಲ್ಲಿ ಶೇ 5ರಷ್ಟು ಗಂಟಲ ದ್ರವಗಳ ಮಾದರಿಗಳನ್ನು ಜೀನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗೆ ಒಳಪಡಿಸಲಾಗುತ್ತದೆ’ ಎಂದರು.

‘ಕೊರೋನಾ ಸೋಂಕಿತ ವ್ಯಕ್ತಿಯಲ್ಲಿ ಡೆಲ್ಟಾ ಪ್ಲಸ್‌ ವೈರಾಣು ಪತ್ತೆಯಾದರೆ, ಅವರ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚಿ ಈ ವೈರಾಣು ಹರಡದಂತೆ ಕ್ರಮಕೈಗೊಳ್ಳುತ್ತೇವೆ. ಅಗತ್ಯಬಿದ್ದರೆ ಈ ಜೀನೋಮ್‌ ಸೀಕ್ವನ್ಸಿಂಗ್‌ ಪರೀಕ್ಷೆಗೆ ಹೆಚ್ಚಿನ ಸೌಕರ್ಯ ಕಲ್ಪಿಸಲಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

‘ಸದ್ಯಕ್ಕೆ ಡೆಲ್ಟಾ ಪ್ಲಸ್‌ ವೈರಸ್‌ ಹರಡದಂತೆ ತಡೆಯಲು ಜನರು ಮಾಸ್ಕ್‌ ಧರಿಸುವಿಕೆ, ಅಂತರ ಕಾಪಾಡುವುದು ಹಾಗೂ ಇತರ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸಿದರೆ ಸಾಕು. ಈ ರೂಪಾಂತರಿ ತಳಿಯ ಬಗ್ಗೆ ತಜ್ಞರು ಆಳವಾಗಿ ಅಧ್ಯಯನ ನಡೆಸುತ್ತಿದ್ದಾರೆ. ಅವರ ಸಲಹೆ ಆಧರಿಸಿ ಅಗತ್ಯಬಿದ್ದರೆ ಸಾರ್ವಜನಿಕರು ಪಾಲಿಸಬೇಕಾದ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತೇವೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು