ಫಲಪುಷ್ಪ ಪ್ರದರ್ಶನದಲ್ಲಿ ಸೇನಾ ಸ್ಮರಣೆ

7
72ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಸಸ್ಯಕಾಶಿಯಲ್ಲಿ ಪ್ರದರ್ಶನ

ಫಲಪುಷ್ಪ ಪ್ರದರ್ಶನದಲ್ಲಿ ಸೇನಾ ಸ್ಮರಣೆ

Published:
Updated:
ಲಾಲ್‌ಬಾಗ್‌ನ  ಗಾಜಿನಮನೆ

ಬೆಂಗಳೂರು: ಭಾರತೀಯ ಸೇನೆಯ ಬಂಕರ್‌, ಬಂದೂಕು, ಸಬ್‌ಮರೀನ್‌ಗಳು ಸೇರಿದಂತೆ ಯುದ್ಧೋಪಕರಣಗಳನ್ನು ಪುಷ್ಪಾಲಂಕಾರದಲ್ಲಿ ಕಣ್ತುಂಬಿಕೊಳ್ಳುವ ಸದಾವಕಾಶ ನಗರದ ಜನರಿಗೆ ಸಿಗಲಿದೆ. 

ಈ ಬಾರಿ 72ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಸಸ್ಯಕಾಶಿಯಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಭಾರತೀಯ ಸೇನೆಯ ಸಾಮರ್ಥ್ಯ, ಸಾಧನೆ, ಹಾಗೂ ಶೌರ್ಯವನ್ನು ಪರಿಚಯಿಸಲು ತೋಟಗಾರಿಕಾ ಇಲಾಖೆ ಯೋಜಿಸಿದೆ. 

‘ರಕ್ಷಣಾ ಇಲಾಖೆಯ ವಾಯು, ಭೂ ಮತ್ತು ನೌಕಾಸೇನೆಯ ಮೈಲಿಗಲ್ಲುಗಳನ್ನು ಸ್ಮರಿಸುವ ಮತ್ತು ವೀರಯೋಧರಿಗೆ ಗೌರವದ ದ್ಯೋತಕವಾಗಿ ಈ ಯೋಜನೆಯನ್ನು ಆಯ್ದುಕೊಳ್ಳಲಾಗಿದೆ. ಇಂದಿನ ಪೀಳಿಗೆಗೆ ಸೇನೆಯ ಪರಿಚಯ ಮತ್ತು ಮಹತ್ವದ ಕುರಿತು ತಿಳಿಯಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ’ ಎಂದು ಲಾಲ್‌ಬಾಗ್‌ನ ಜಂಟಿ ನಿರ್ದೇಶಕ ಎಂ.ಜಗದೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಉದ್ಯಾನದ ಕಲಾ ಸಂಘ, ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಶನಿವಾರ ನಡೆದ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಗಿದೆ. ರಾಜ್ಯದ ವಿವಿಧ ಉದ್ಯಾನಗಳು ಸೇರಿದಂತೆ ಹೊರರಾಜ್ಯದ ಉದ್ಯಾನಗಳಿಂದಲೂ ಪುಷ್ಪಗಳನ್ನು ತರಿಸಲಾಗುವುದು’ ಎಂದು ಅವರು ಹೇಳಿದರು.  

‘ದೇಶಕ್ಕಾಗಿ ಯುದ್ಧದಲ್ಲಿ ದೇಹತ್ಯಾಗ ಮಾಡಿದ ಹುತಾತ್ಮರ ಜೀವನ, ಸಾಧನೆ, ರಕ್ಷಣಾ ಇಲಾಖೆ ಬೆಳೆದು ಬಂದ ಹಾದಿಯ ಸಂಪೂರ್ಣ ವಿವರಗಳ ಪ್ರದರ್ಶನ ಮತ್ತು ಮರದ ಕಲಾಕೃತಿಗಳ ಪ್ರದರ್ಶನ ಗಾಜಿನ ಅರಮನೆಯಲ್ಲಿ ನಡೆಯಲಿದೆ’ ಎಂದರು.

 ಅಸಲಿ ಪ್ರದರ್ಶನ
‘ಸೇನೆಯಲ್ಲಿ ಬಳಸುವ ಯಂತ್ರೋಪಕರಣ, ಶಸ್ತ್ರಾಸ್ತ್ರ, ಯುದ್ಧಸ್ಮಾರಕಗಳನ್ನು ಪ್ರದರ್ಶನ ಮಾಡುವ ಉದ್ದೇಶವೂ ಇದೆ. ಈ ಕುರಿತು ಎಚ್‌ಎಎಲ್‌ (ಹಿಂದೂಸ್ಥಾನ ಏರೊನಾಟಿಕ್ಸ್ ಲಿಮಿಟೆಡ್‌)ನೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಜಗದೀಶ್‌ ತಿಳಿಸಿದರು.

ಕನ್ನಡ ಚಿತ್ರರಂಗಕ್ಕೆ 85ರ ಸಂಭ್ರಮ
'ಕನ್ನಡ ಚಿತ್ರರಂಗಕ್ಕೆ 85 ವರ್ಷ ತುಂಬುತ್ತಿರುವ ಸಂಭ್ರಮದ ಪ್ರಯುಕ್ತ ಸಸ್ಯಕಾಶಿಯ ಗಾಜಿನ ಅರಮನೆಯ ಹಿಂಭಾಗದಲ್ಲಿ ಚಿತ್ರರಂಗ ಬೆಳೆದು ಬಂದ ಹಾದಿಯ ಪ್ರದರ್ಶನ ನಡೆಸಲು ಇಲಾಖೆ ನಿರ್ಧರಿಸಿದೆ. ಅಂದಿನ ಸಿನಿಮಾ ರೀಲ್‌ ಮತ್ತು ಕ್ಲಾಪ್‌ಗಳ ಪ್ರಕೃತಿ ಪ್ರದರ್ಶಿಸಲಾಗುವುದು’.

ಚಿತ್ರ‌ರಂಗಕ್ಕೆ ಸಂದ ಪ್ರಶಸ್ತಿಗಳು, ದಾದಾಸಾಹೇಬ್‌ ಪಾಲ್ಕೆ ಪ್ರಶಸ್ತಿ, ಹಾಗೂ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂದಿರುವ ಪ್ರಶಸ್ತಿ, ಪಾರಿತೋಷಕಗಳ ಸಂಪೂರ್ಣ ವಿವರಗಳನ್ನು ಪ್ರದರ್ಶನದಲ್ಲಿ ಇಡಲಾಗುವುದು. ಈ ಕುರಿತು ಚಿತ್ರರಂಗದ ಹಿರಿಯರೊಂದಿಗೆ ಚರ್ಚೆ ನಡೆಸಿ ನಿರ್ಧರಿಸಲಾಗುವುದು’ ಎಂದು ಅವರು ತಿಳಿಸಿದರು. 

***

ಯೋಜನಾ ವಿನ್ಯಾಸ, ಬೇಕಾಗುವ ಪುಷ್ಟಗಳು, ಅಂದಾಜು ವೆಚ್ಚವನ್ನು ಇನ್ನೂ ಅಂತಿಮಗೊಳಿಸಿಲ್ಲ. ಮುಂದಿನ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗುವುದು
– ಎಂ.ಜಗದೀಶ್‌, ಜಂಟಿ ನಿರ್ದೇಶಕ, ತೋಟಗಾರಿಕಾ ಇಲಾಖೆ

Tags: 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !