ಬೆಂಗಳೂರು: ಮಹಿಳೆಯರ ಸುರಕ್ಷತೆಗಾಗಿ ಬಿಎಂಟಿಸಿ ಅನುಷ್ಠಾನಗೊಳಿಸಿರುವ ‘ನಮ್ಮ ಬಿಎಂಟಿಸಿ’ ಮೊಬೈಲ್ ಆ್ಯಪ್‌ಗೆ ಉತ್ತಮ ಸ್ಪಂದನೆ ದೊರಕಿದ್ದು, 8.31 ಲಕ್ಷ ಪ್ರಯಾಣಿಕರು ಈವರೆಗೆ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆ, ಬಸ್ ನಿಲ್ದಾಣ, ತಂಗುದಾಣಗಳ, ಪ್ರಯಾಣಿಕರ ಮಾಹಿತಿಗಳನ್ನು ನೀಡುವ ‘ನಮ್ಮ ಬಿಎಂಟಿಸಿ’ ಮೊಬೈಲ್ ಅಪ್ಲಿಕೇಶನ್ ಅನ್ನು ಕೇಂದ್ರ ಸರ್ಕಾರದ ನಿರ್ಭಯ ಯೋಜನೆಯ ನೆರವಿನೊಂದಿಗೆ 2023ರ ಸೆಪ್ಟೆಂಬರ್‌ನಲ್ಲಿ ಪರಿಚಯಿಸಲಾಗಿತ್ತು. ಈ ಆ್ಯಪ್ ಮೂಲಕವೇ ಬಸ್ ಟ್ಯ್ರ್ಯಾಕಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.
ತುರ್ತು ಸಂದರ್ಭದಲ್ಲಿ ನೆರವು ಪಡೆಯಲು, ಈ ಆ್ಯಪ್ ಮೂಲಕ ಪ್ಯಾನಿಕ್/ಎಸ್‌ಒಎಸ್ ಬಟನ್ ಒತ್ತಿದರೆ ಮಹಿಳಾ ಪ್ರಯಾಣಿಕರು ಸಂಚರಿಸುವ ಮಾರ್ಗದುದ್ದಕ್ಕೂ ಚಲನವಲನದ ಮೇಲೆ ನಿಗಾ (ಟ್ರ್ಯಾಕಿಂಗ್) ಇಡಲಾಗುತ್ತದೆ. ಬಸ್ ಒಳಗಿನ ಚಟುವಟಿಕೆಯನ್ನು ಗಮನಿಸಲು ಆನ್-ಬೋರ್ಡ್ ಕ್ಯಾಮೆರಾಗಳನ್ನು ಒಳಗೊಂಡಿದೆ.
‘ಬಿಎಂಟಿಸಿ ಸಂಸ್ಥೆಯು 6,500 ಬಸ್‌ಗಳನ್ನು ಹೊಂದಿದ್ದು, ಅದರಲ್ಲಿ 5,000 ಬಸ್‌ಗಳಲ್ಲಿ ವಾಹನ ಟ್ರ್ಯಾಕಿಂಗ್ ಸಾಧನ, ಪ್ಯಾನಿಕ್ ಬಟನ್, 10 ಸಾವಿರ ಸಿಸಿಟಿವಿ ಕ್ಯಾಮೆರಾ, 5 ಸಾವಿರ ಎಂಎನ್‌ವಿಆರ್ ಕಣ್ಗಾವಲು ಕ್ಯಾಮೆರಾ, 500 ಸಾರ್ವಜನಿಕ ಮಾಹಿತಿ ಸಿಸ್ಟಂ ಅಳವಡಿಸಲಾಗಿದೆ. ಅವುಗಳ ಜತೆ ‘ನಮ್ಮ ಬಿಎಂಟಿಸಿ’ ಆ್ಯಪ್ ಅನ್ನು ಜೋಡಿಸಲಾಗಿದೆ’ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.
ಬಾಕಿ ಉಳಿದಿರುವ 1,500 ಬಸ್‌ಗಳಲ್ಲಿ ಶೀಘ್ರದಲ್ಲಿಯೇ ಈ ಸುರಕ್ಷತಾ ವ್ಯವಸ್ಥೆ ಅಳವಡಿಸಲಾಗುವುದು ಎಂದು ತಿಳಿಸಿದರು.
ಆ್ಯಂಡ್ರಾಯ್ಡ್ ಪ್ಲ್ಯಾಟ್‌ಫಾರ್ಮ್ ಮತ್ತು ಐಒಎಸ್ ಪ್ಲ್ಯಾಟ್‌ಫಾರ್ಮ್ ಮೂಲಕ ಈ ಮೊಬೈಲ್ ಅಪ್ಲಿಕೇಶನ್ ಅನ್ನು ಎಂಸಿಟಿ ಕಾರ್ಡ್ಸ್ ಮತ್ತು ಟೆಕ್ನಾಲಜೀಸ್ ಸಂಸ್ಥೆ ಅಭಿವೃದ್ಧಿ ಪಡಿಸಿದೆ ಎಂದು ವಿವರ ನೀಡಿದರು.
ಉಪಯೋಗ: ‘ನಮ್ಮ ಬಿಎಂಟಿಸಿ’ ಆ್ಯಪ್ ಅಳವಡಿಸಿಕೊಂಡರೆ ಜಿಯೊ ಲೊಕೇಶನ್ ಹಾಗೂ ಟೆಕ್ಸ್ಟ್ ಸರ್ಚ್ ಮೂಲಕ ಹತ್ತಿರದ ಬಸ್ ನಿಲ್ದಾಣಗಳನ್ನು ಹುಡುಕಬಹುದು. ಬಸ್ ಆಗಮನದ ಅಂದಾಜು ಸಮಯ, ತಲುಪಬೇಕಿರುವ ಸ್ಥಳದವರೆಗಿನ ಬಸ್ ಪ್ರಯಾಣದ ಅವಧಿಯ ವಿವರ, ಆಗಮನ, ನಿರ್ಗಮನದ ವೇಳಾಪಟ್ಟಿ, ಮಹಿಳೆಯರ ಸುರಕ್ಷತೆಗಾಗಿ ಎಸ್‌ಒಎಸ್ ಬಟನ್, ಸಂಚರಿಸುತ್ತಿರುವ ಸ್ಥಳದ ಮಾಹಿತಿಯನ್ನು ಹಂಚಿಕೊಳ್ಳುವ ಅವಕಾಶ, ಬಸ್ ನಿಲ್ದಾಣದ ಸುತ್ತಮುತ್ತ ಇರುವ ಎಟಿಎಂ, ರೆಸ್ಟೋರೆಂಟ್, ಆಸ್ಪತ್ರೆ, ಪೊಲೀಸ್ ಠಾಣೆ, ಪಾರ್ಕಿಂಗ್ ಸ್ಥಳಗಳ ವಿವರಗಳು ಪ್ರಯಾಣಿಕರಿಗೆ ಸುಲಭದಲ್ಲಿ ದೊರಕಲಿವೆ. ಜೊತೆಗೆ ಪ್ರಯಾಣಿಕರು ಪ್ರತಿಕ್ರಿಯೆಯನ್ನು ದಾಖಲಿಸಲು ಅವಕಾಶ ನೀಡಲಾಗಿದೆ.
ಯಾರೂ ದೂರು ನೀಡಿಲ್ಲ: ‘ನಮ್ಮ ಬಿಎಂಟಿಸಿ’ ಮೊಬೈಲ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ ಅದನ್ನು ಬಹಳಷ್ಟು ಮಹಿಳೆಯರು ಪರೀಕ್ಷಿಸಿ ನೋಡಿದ್ದಾರೆ. ಪ್ರತಿದಿನ ಇಂಥ ನೂರಾರು ಮಾಹಿತಿಗಳು ಕಂಟ್ರೋಲ್ ರೂಂಗೆ ಬರುತ್ತಿದೆ. ಆದರೆ, ಸುರಕ್ಷತೆಗೆ ತೊಂದರೆ ಆಗಿರುವ ಬಗ್ಗೆ ಇಲ್ಲಿಯವರೆಗೆ ಯಾವುದೇ ದೂರು ದಾಖಲಾಗಿಲ್ಲ’ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
‘ಜನಸ್ನೇಹಿ ಆ್ಯಪ್’ ‘ನಮ್ಮ ಬಿಎಂಟಿಸಿ’ ಮೊಬೈಲ್ ಆ್ಯಪ್ ಜನಸ್ನೇಹಿ ಆಗಿರುವುದರಿಂದ ಮಹಿಳೆಯರು ಸ್ಪಂದಿಸಿದ್ದಾರೆ. ಸುರಕ್ಷತೆಯು ಆ್ಯಪ್‌ನ ಪ್ರಮುಖ ಉದ್ದೇಶವಾಗಿದ್ದರೂ ಬಸ್ ನಿಲ್ದಾಣ ಕ್ರಮಿಸಬೇಕಿರುವ ದೂರ ಸಮಯ ಸಹಿತ ವಿವಿಧ ಮಾಹಿತಿಗಳು ಈ ಆ್ಯಪ್ ಮೂಲಕ ಬೆರಳ ತುದಿಯಲ್ಲೇ ಸಿಗುವುದರಿಂದ ‘ನಮ್ಮ ಬಿಎಂಟಿಸಿ’ ಆ್ಯಪ್ ಅನ್ನು ಎಲ್ಲರೂ ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್. ತಿಳಿಸಿದರು.
ಅಂಕಿ ಅಂಶ 55.5 ಲಕ್ಷ ‘ನಮ್ಮ ಬಿಎಂಟಿಸಿ’ ಸರ್ಚ್ ಮಾಡಿದವರು 7.56 ಲಕ್ಷ ಆ್ಯಂಡ್ರಾಯ್ಡ್ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡವರು 75 ಸಾವಿರ ಐಫೋನ್ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡವರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.