ಮೆಟ್ರೊ ರೈಲು ಮಾರ್ಗಕ್ಕೆ 872 ಮರ ನಾಶ; ತಜ್ಞರ ಸಲಹೆ ಪಡೆಯಲು ಹೈಕೋರ್ಟ್ ಸಲಹೆ

ಬೆಂಗಳೂರು: ಮೆಟ್ರೊ ರೈಲು ಮಾರ್ಗಕ್ಕೆ 872 ಮರಗಳು ನಾಶಪಡಿಸುವ ಮುನ್ನ ತಜ್ಞರ ಅಭಿಪ್ರಾಯ ಪಡೆದುಕೊಳ್ಳಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ಮತ್ತು ರಾಜ್ಯ ಸರ್ಕಾರ ಸಿದ್ಧವಿದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ಹೈಕೋರ್ಟ್ ಬುಧವಾರ ಪ್ರಶ್ನಿಸಿದೆ.
ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಮತ್ತು ಪರಿಸರವಾದಿ ದತ್ತಾತ್ರೇಯ ಟಿ. ದೇವರೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
‘ಮರಗಳನ್ನು ಕಡಿಯಬಹುದೇ ಅಥವಾ ಸ್ಥಳಾಂತರ ಮಾಡಬಹುದೇ ಎಂಬುದನ್ನು ತಜ್ಞರ ಸಮಿತಿಯಿಂದ ವರದಿ ಪಡೆಯಬಹುದಾಗಿದೆ. ಹೊಸದಾಗಿ ತಜ್ಞರ ಸಮಿತಿ ನೇಮಕ ಆಗಬೇಕಿಲ್ಲ. ಈಗಾಗಲೇ ನೇಮಿಸಿರುವ ತಜ್ಞರ ಸಮಿತಿ ಇದೆ’ ಎಂದು ಪೀಠ ತಿಳಿಸಿತು.
‘ಮೆಟ್ರೊ ರೈಲು ಮಾರ್ಗಕ್ಕೆ ಕಡಿಯಲು ಉದ್ದೇಶಿಸಿರುವ ಮರಗಳು ಕರ್ನಾಟಕ ಮರಗಳ ಸಂರಕ್ಷಣೆ ಕಾಯ್ದೆಯ ವ್ಯಾಪ್ತಿಯಲ್ಲಿ ಇಲ್ಲ’ ಎಂದು ಬಿಎಂಆರ್ಸಿಎಲ್ ವಿವರಿಸಿತು.
‘ಕಾನೂನಿನ ಹೊರತಾಗಿಯೂ ಸಾರ್ವಜನಿಕರ ನಂಬಿಕೆಗೆ ಬದ್ಧವಾಗಿ ಬಿಎಂಆರ್ಸಿಎಲ್ ಮತ್ತು ಸರ್ಕಾರ ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದ ಪೀಠ, ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಒಂದು ವಾರ ಸಮಯ ನೀಡಿತು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.