ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾರ್ನಾಡರ ಬದುಕು ಬರಹ ನಮ್ಮ ನೈತಿಕ ಬಲ’

ಅಯೋಧ್ಯೆ ತೀರ್ಪು ಬಂದ ಹೊತ್ತಲ್ಲಿ ಕಾರ್ನಾಡರ ಕುರಿತ ಚರ್ಚೆ ಕಾಕತಾಳೀಯ: ಕೆ. ಮರುಳಸಿದ್ಧಪ್ಪ
Last Updated 9 ನವೆಂಬರ್ 2019, 18:51 IST
ಅಕ್ಷರ ಗಾತ್ರ

ಬೆಂಗಳೂರು: ‘ಗಿರೀಶ ಕಾರ್ನಾಡರ ಬದುಕು, ಬರಹ ಮತ್ತು ಹೋರಾಟ ಎಲ್ಲವನ್ನೂ ಒಟ್ಟೊಟ್ಟಿಗೇ ನೋಡಬೇಕು. ಅವರ ಬದುಕು ಬರಹದಲ್ಲಿ ಮತ್ತು ಅವರ ಬರಹ ಅವರ ಹೋರಾಟದಲ್ಲಿ ಪ್ರತಿಫಲನಗೊಳ್ಳುತ್ತಿದ್ದವು’ ಎಂದು ಸಾಹಿತಿ ಕೆ. ಮರುಳಸಿದ್ಧಪ್ಪ ಅಭಿಪ್ರಾಯಪಟ್ಟರು.

‘ಬರಹಗಾರ, ನಾಟಕಕಾರ, ಮಾನವತಾವಾದಿ: ಗಿರೀಶ ಕಾರ್ನಾಡರ ಬದುಕು ಮತ್ತು ಬರಹ’ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಅಯೋಧ್ಯೆ ತೀರ್ಪು ಬಂದ ಈ ಹೊತ್ತಿನಲ್ಲಿ ಅವರ ಬಗ್ಗೆ ಮಾತನಾಡುತ್ತಿರುವುದು ಕಾಕತಾಳೀಯವೇ ಸರಿ. ಮಸೀದಿ ಧ್ವಂಸವಾಗಿ ಒಂದು ತಿಂಗಳ ಒಳಗೆ ಅಯೋಧ್ಯೆಯಲ್ಲಿ ಸೌಹಾರ್ದ ಸಮಾವೇಶ ನಡೆಯಿತು. ಕರ್ನಾಟಕದಿಂದ ನಾವು ಕೆಲವರು ಕಾರ್ನಾಡರ ನೇತೃತ್ವದಲ್ಲಿ ಸಮಾವೇಶದಲ್ಲಿ ಭಾಗವಹಿಸಿದ್ದೆವು. ಮನುಕುಲದ ಬಗೆಗೆ ಅವರಿಗಿದ್ದ ಬದ್ಧತೆಗೆ ಇದು ನಿದರ್ಶನ’ ಎಂದರು.

‘ಜಾತಿ, ಧರ್ಮ ಯಾವುದೇ ಇರಬಹುದು. ಮನುಷ್ಯನನ್ನು ಸಂಕುಚಿತಗೊಳಿಸುತ್ತಿದ್ದ ಯಾವುದನ್ನೂ ಅವರು ಸಹಿಸುತ್ತಿರಲಿಲ್ಲ. ಅನಂತಮೂರ್ತಿ ಹಾಗೂ ಕಾರ್ನಾಡರು ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಮತ್ತು ಬೆನ್ನೆಲುಬಾಗಿ ನಿಂತಿದ್ದು, ನಮಗೆಲ್ಲಾ ನೈತಿಕ ಬಲ ತರುತ್ತಿತ್ತು’ ಎಂದರು.

ಕಥೆಗಾರ ಜಯಂತ ಕಾಯ್ಕಿಣಿ,‘ಕಾರ್ನಾಡರನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ, ಅವರ ‘ಆಗೊಮ್ಮೆ–ಈಗೊಮ್ಮೆ’, ‘ಮೆಲುಕು’ ಮತ್ತು ‘ಆಡಾಡ್ತಾ ಆಯುಷ್ಯ’ ‍ಪುಸ್ತಕಗಳನ್ನು ಓದಬೇಕು. ಇವು ಅವರನ್ನು ಇಡಿಯಾಗಿ ದಕ್ಕಿಸಿಕೊಳ್ಳಲು ನೆರವಾಗುತ್ತವೆ’ ಎಂದರು. ರಂಗಕರ್ಮಿ ಬಿ.ಜಯಶ್ರೀ ಇದ್ದರು. ಗೋಷ್ಠಿಯನ್ನು ಬರಹಗಾರ್ತಿ ಪ್ರೀತಿ ನಾಗರಾಜ್‌ ನಿರ್ವಹಿಸಿದರು.

ಹಾಡುಗಾರಿಕೆ ದೇಹಭಾಷೆ ಮಾತ್ರವೇ?
ತಮ್ಮ ‘ಲುಕ್ಕಿಂಗ್‌ ಫಾರ್‌ ಮಿಸ್‌ ಸರ್ಗಮ್‌, ಸ್ಟೋರೀಸ್‌ ಆಫ್‌ ಮ್ಯೂಸಿಕ್‌ ಆ್ಯಂಡ್‌ ಮಿಸ್‌ಅಡ್ವೆಂಚರ್‌’ ಕೃತಿಯ ಕುರಿತು ಹಿಂದೂಸ್ತಾನಿ ಗಾಯಕಿ ಶುಭಾ ಮುದ್ಗಲ್‌ ಮಾತನಾಡಿದರು.

ಸಂಗೀತದ ಕುರಿತು ಹಲವು ಆಯಾಮಗಳಿಗೂ ಚರ್ಚೆ ಹೊರಳಿತು. ‘ಹಾಡುಗಾರಿಕೆ ಮತ್ತು ಪ್ರದರ್ಶನ ಈ ಎರಡರ ಬಗ್ಗೆ ನಮ್ಮಲ್ಲಿ ತಪ್ಪು ಗ್ರಹಿಕೆಗಳಿವೆ. ಈಗಿನ ನಮ್ಮ ರಿಯಾಲಿಟಿ ಶೋಗಳಲ್ಲಿ, ‘ನಿಮ್ಮಲ್ಲಿ ಒಳ್ಳೆಯ ಕಲಾವಿದ ಇದ್ದಾನೆ, ಆದರೆ, ನಿಮ್ಮ ಪ್ರದರ್ಶನ ಅಷ್ಟು ಒಪ್ಪಿತವಾಗಿರಲಿಲ್ಲ’ ಎಂದು ತೀರ್ಪುಗಾರರು ಹೇಳಿರುವುದನ್ನು ನೀವು ಕೇಳಿರುತ್ತೀರಿ. ಹಾಗಾದರೆ, ಹಾಡುಗಾರಿಕೆ ಮತ್ತು ಪ್ರದರ್ಶನದ ನಡುವೆ ಇರುವ ವ್ಯತ್ಯಾಸ ಏನು?’ ‘ತಲೆಕೂದಲು ಬಿಟ್ಟು, ಕೈಯಾಡಿಸಿ, ಮೈಕಿನ ಮುಂದೆ ದೊಡ್ಡಗಾಗಿ ಬಾಯಿ ತೆರೆದು ಹಾಡುವುದೇ ಪ್ರದರ್ಶನವೇ. ದೇಹಭಾಷೆ ಮಾತ್ರವೇ ಸಂಗೀತವೇ ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗಿವೆ. ಹಲವು ಗಾಯಕರು ಹಾಡುವಾಗ ಅಂತರ್‌ಧ್ಯಾನಿಗಳಾಗುತ್ತಾರೆ. ಹಾಗಾದರೆ, ಅವರು ಒಳ್ಳೆಯ ಗಾಯಕರಲ್ಲ ಎಂದು ತೀರ್ಪು ಕೊಡಲು ಬರುತ್ತದೆಯೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT