ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: 95 ರಸ್ತೆ ಸೀಲ್‌ಡೌನ್‌ಗೆ ನಿರ್ಧಾರ

ರಸ್ತೆಗೆ ಅಡ್ಡಲಾಗಿ ಹಾಕಲು ಸೊಲ್ಲಾಪುರದಿಂದ ಬರಲಿವೆ ಒಂದು ಸಾವಿರ ಪತ್ರಾಸ್‌
Last Updated 22 ಏಪ್ರಿಲ್ 2020, 20:22 IST
ಅಕ್ಷರ ಗಾತ್ರ

ಕಲಬುರ್ಗಿ: ದಿನೇ ದಿನೇ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಅತಿ ಹೆಚ್ಚು ಸೋಂಕಿತರು ಇರುವ ಬಡಾವಣೆಗಳನ್ನು ಸಂಪರ್ಕಿಸುವ 95 ರಸ್ತೆಗಳನ್ನು ಸೀಲ್‌ಡೌನ್‌ ಮಾಡಲು ನಿರ್ಧರಿಸಿದೆ.

ಇದಕ್ಕಾಗಿ ಮಹಾನಗರ ಪಾಲಿಕೆ ಆಯುಕ್ತರು ಸೊಲ್ಲಾಪುರದಿಂದ 1 ಸಾವಿರ ಪತ್ರಾಸ್‌ಗಳನ್ನು ತರಿಸಲು ಮುಂದಾಗಿದ್ದು, ಇದಕ್ಕಾಗಿ ರಸ್ತೆಗಳನ್ನು ಗುರುತಿಸುವ ಕಾರ್ಯವನ್ನು ಪಾಲಿಕೆ ಸಿಬ್ಬಂದಿ ಹಾಗೂ ಪೊಲೀಸರು ಆರಂಭಿಸಿದ್ದಾರೆ.

ತಾಜ ನಗರ, ಹಾಗರಗಾ ಸರ್ಕಲ್, ಬುಲಂದ್ ಪರ್ವೇಜ್ ಕಾಲೊನಿ, ರಫೀಕ್ ಚೌಕ್, ಕೆಸಿಟಿ ಕಾಲೇಜಿನಿಂದ ರಿಂಗ್‍ ರೋಡ್, ರಾಮಜಿ ನಗರದಿಂದ ಟಿನ್ನಿಪರ್ಲ್ ಶಾಲೆ, ಮಿಜಗುರಿ ಮುಖ್ಯರಸ್ತೆ, ಆಜಾದಪುರ, ಎಎಸ್‍ಎಂ ಆಸ್ಪತ್ರೆ ರಸ್ತೆ, ಚುನ್ನಾಭಟ್ಟಿ ರಸ್ತೆ, ನೂರ್‌ಭಾಗ್‌ ರಸ್ತೆ, ಯಾಕೂಬ್ ತಹಾರಿ, ಪ್ರಕಾಶ ಏಷಿಯನ್ ಮಾಲ್‍ದಿಂದ ನಗರೇಶ್ವರ ಶಾಲೆ, ಎಂ.ಬಿ. ನಗರ ಮುಖ್ಯರಸ್ತೆ, ಸಂತ್ರಾಸವಾಡಿ ಮಸೀದಿ ರಸ್ತೆ, ಬಸವೇಶ್ವರ ಕಾಲೊನಿ, ಜಿಡಿಎ ಲೇಔಟ್, ಖರ್ಗೆ ಪೆಟ್ರೋಲ್‌ ಬಂಕ್‍ದಿಂದ ನಗರದ ಹೊರಗೆ ಹೋಗುವ ಒಂದು ರಸ್ತೆ, ಸೇಡಂ ರಸ್ತೆಯ ವೀರೇಂದ್ರ ಪಾಟೀಲ ನಗರ ಪ್ರವೇಶ ದ್ವಾರ, ಹೀರಾಪುರದಿಂದ ಬಸ್ ನಿಲ್ದಾಣ ರಸ್ತೆ ಮಾರ್ಗವಾಗಿ ಮಿರ್ಚಿ ಗೋದಾಮು, ಗಂಗಾನಗರ ಹನುಮಾನ ಟೆಂಪಲ್ ರಸ್ತೆ ಹೀಗೆ 95ಕ್ಕೂ ಹೆಚ್ಚಿನ ರಸ್ತೆಗಳನ್ನು ಸೀಲ್‍ಡೌನ್ ಮಾಡುವ ಮೂಲಕ ಜನರ ಓಡಾಟವನ್ನು
ನಿರ್ಬಂಧಿಸಲಾಗುತ್ತದೆ.

ಇದೇ 23ರಿಂದ ರಾಜ್ಯದ ಕೆಲವೆಡೆ ಲಾಕ್‌ಡೌನ್‌ ಸಡಿಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಆದರೆ, ಕಲಬುರ್ಗಿ ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್‌ ಸೋಂಕಿನಿಂದ ನಾಲ್ವರು ಮೃತಪಟ್ಟಿದ್ದು, 35 ಜನರಲ್ಲಿ ಸೋಂಕಿರುವುದು ದೃಢಪಟ್ಟಿದೆ. ಇನ್ನೂ ಒಂದು ಸಾವಿರಕ್ಕೂ ಅಧಿಕ ಮಾದರಿಗಳ ತಪಾಸಣಾ ವರದಿಗಳು ಬರಬೇಕಿದೆ. ಹೀಗಾಗಿ, ರೆಡ್‌ಝೋನ್‌ ಪಟ್ಟಿಯಲ್ಲಿರುವ ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಡಿಲಿಕೆ ಮಾಡುವ ಸಂಭವ ಕಡಿಮೆ ಇದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಮಾರುಕಟ್ಟೆಗಳಲ್ಲಿ ವ್ಯಾಪಾರಕ್ಕೆ ಅಗತ್ಯ ಸೌಕರ್ಯ

ಕಲಬುರ್ಗಿಯ ಗಂಜ್‌ನಲ್ಲಿರುವ ಎಪಿಎಂಸಿ ಹಾಗೂ ಜೇವರ್ಗಿ ರಸ್ತೆಯಲ್ಲಿರುವ ವಾಜಪೇಯಿ ಬಡಾವಣೆಯಲ್ಲಿರುವ ತರಕಾರಿ ಮಾರ್ಕೆಟ್‌ನಲ್ಲಿ ಸುವ್ಯವಸ್ಥಿತ ವಹಿವಾಟು ನಡೆಸಲು ಹಾಗೂ ಜನರ ಮಧ್ಯೆ ಅಂತರ ಕಾಯ್ದುಕೊಳ್ಳಲು ಪೊಲೀಸ್ ಕಮಿಷನರ್‌ ಸತೀಶಕುಮಾರ್‌ ಅವರು ಎರಡೂ ಮಾರುಕಟ್ಟೆಗಳಲ್ಲಿ ಬಿದಿರಿನ ಕಟ್ಟಿಗೆಗಳನ್ನು ಅಳವಡಿಸಿ ವ್ಯಾಪಾರಿಗಳಿಗೆ ಒಂದೊಂದು ಜಾಗವನ್ನು ನಿಗದಿ ಮಾಡಿದ್ದಾರೆ. ಅದೇ ಜಾಗದಲ್ಲಿ ಕುಳಿತು ವಹಿವಾಟು ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ.

ಬೆಳಗಿನ ಜಾವ 2ರಿಂದ 4ರವರೆಗೆ ಸಗಟು ವ್ಯಾಪಾರಿಗಳಿಗೆ ಹಾಗೂ 4ರಿಂದ ಬೆಳಿಗ್ಗೆ 8ರವರೆಗೆ ಸಣ್ಣಪುಟ್ಟ ವ್ಯಾಪಾರಿಗಳು ವಹಿವಾಟು ನಡೆಸಲು ಅನುವಾಗುವಂತೆ ಗುರುತಿನ ಚೀಟಿಗಳನ್ನು ನೀಡಿದ್ದಾರೆ. ಗುರುತಿನ ಚೀಟಿಯನ್ನು ಪರಿಶೀಲಿಸಿ ಒಳಬಿಡಲು ಸಂಚಾರ ವಿಭಾಗದ ಪೊಲೀಸರನ್ನು ನಿಯೋಜಿಸಿದ್ದಾರೆ. ಇದರ ಉಸ್ತುವಾರಿಯನ್ನು ಸಂಚಾರ ವಿಭಾಗದ ಎಸಿಪಿ ವೀರೇಶ್‌ ಅವರಿಗೆ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT