ಬುಧವಾರ, ಸೆಪ್ಟೆಂಬರ್ 22, 2021
21 °C

‘ಶಾಸಕರಿಗೇ ರಕ್ಷಣೆ ಇಲ್ಲದಿದ್ದರೆ, ಜನಸಾಮಾನ್ಯರ ಗತಿ ಏನು?’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈಗಿನ ಸರ್ಕಾರದಲ್ಲಿ ಆ ಪಕ್ಷದ ಶಾಸಕರಿಗೇ ರಕ್ಷಣೆ ಇಲ್ಲ. ಇಂತಹ ಸರ್ಕಾರ ಜನಸಾಮಾನ್ಯರನ್ನು ರಕ್ಷಿಸಲು ಸಾಧ್ಯವೇ’ ಎಂದು ಆಮ್‌ ಆದ್ಮಿ ಪಕ್ಷದ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಪ್ರಶ್ನಿಸಿದರು.

ಪಕ್ಷದ ಮಾಧ್ಯಮ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಗೃಹ ಸಚಿವರಾಗಿ ವೈಫಲ್ಯ ಕಂಡಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಲಾಗಿದೆ. ಈ ಹುದ್ದೆಗೆ ಅವರು ನ್ಯಾಯ ಒದಗಿಸಬಲ್ಲರೇ. ರಾಜ್ಯದಲ್ಲಿ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳು ಏರುತ್ತಲೇ ಇವೆ. ಮಕ್ಕಳು, ಮಹಿಳೆಯರು ನಿರ್ಭೀತಿಯಿಂದ ಓಡಾಡುವುದೂ ಕಷ್ಟವಾಗಿದೆ’ ಎಂದು ದೂರಿದರು.  

‘ತಾವು ಗೃಹಸಚಿವರಾಗಿದ್ದ ಅವಧಿಯಲ್ಲಿ ಅಪರಾಧ ಪ್ರಕರಣಗಳು ಶೇ. 20ರಷ್ಟು ಹೆಚ್ಚಿದೆ ಎಂದು ಬಸವರಾಜ್‌ ಬೊಮ್ಮಾಯಿ ಅವರೇ ಒಪ್ಪಿಕೊಂಡಿದ್ದರು. ಹೀಗಿದ್ದರೂ ಅವುಗಳಿಗೆ ಕಡಿವಾಣ ಹಾಕಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ತನಿಖೆ ನಡೆಸಬೇಕು ಎಂಬ ಕಾರಣಕ್ಕೆ ಕೆಲ ಠಾಣೆಗಳಲ್ಲಿ ಪೊಲೀಸರು ಎಫ್‌ಐಆರ್‌ ದಾಖಲಿಸುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ’ ಎಂದು ಆರೋಪಿಸಿದರು.  

‘ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಶಾಸಕರ ಮನೆಗಳ ಮೇಲೆ ದಾಳಿ ನಡೆದಿದೆ. ಪೊಲೀಸ್‌ ಅಧಿಕಾರಿಗಳ ಮೇಲೂ ಹಲ್ಲೆ ನಡೆಸಲಾಗಿದೆ. ಪಾಲಿಕೆಯ ಸದಸ್ಯೆಯಾಗಿದ್ದ ರೇಖಾ ಖದಿರೇಶ್‌ ಹತ್ಯೆಯಾಗಿದೆ. ರಸ್ತೆಗಳಲ್ಲಿ ವಾಹನ ಸವಾರರನ್ನು ನಿಲ್ಲಿಸಿ ದಂಡದ ರೂಪದಲ್ಲಿ ಹಣ ವಸೂಲಿ ಮಾಡುವ ಪೊಲೀಸರು ಅಪರಾಧ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸ್‌ ಇಲಾಖೆ ಇದ್ದು ಪ್ರಯೋಜನವಿಲ್ಲದಂತಾಗಿದೆ’ ಎಂದರು. 

ಪಕ್ಷದ ಮುಖಂಡ ಫಿರೋಜ್‌ ‘ರಾಜ್ಯದಲ್ಲಿ ಸೈಬರ್‌ ಅಪರಾಧ ಕೂಡ ಹೆಚ್ಚಿದೆ. ಈ ಜಾಲವನ್ನು ಬೇಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ’ ಎಂದು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು