ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಎನ್‌ಇಪಿ ತಕ್ಷಣ ರದ್ದುಗೊಳಿಸಿ: ರುಪ್ಸಾ

Published 25 ಮೇ 2023, 7:03 IST
Last Updated 25 ಮೇ 2023, 7:03 IST
ಅಕ್ಷರ ಗಾತ್ರ

ಬೆಂಗಳೂರು: ‘ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) –2020 ಅನ್ನು ವಿಧಾನ ಮಂಡಲದ ಎರಡು ಸದನಗಳಲ್ಲಿ ಚರ್ಚಿಸಿ ತಿರಸ್ಕರಿಸಬೇಕು. ಎನ್‌ಇಪಿ ತಕ್ಷಣ ರದ್ದುಗೊಳಿಸಿ, 2017 ಮತ್ತು 2018ರಲ್ಲಿದ್ದ ಶಿಕ್ಷಣ ಪದ್ಧತಿ ಮರುಜಾರಿಗೊಳಿಸಬೇಕು’ ಎಂದು ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಸಂಘ (ರುಪ್ಸಾ) ಆಗ್ರಹಿಸಿದೆ.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ‌ಲೋಕೇಶ್ ತಾಳಿಕಟ್ಟೆ, ‘ರಾಜ್ಯಕ್ಕೆ ಪೂರಕವಾಗುವ ರಾಜ್ಯ ಶಿಕ್ಷಣ ನೀತಿ ರೂಪಿಸಲು ಶಿಕ್ಷಣ ತಜ್ಞ ನಿರಂಜನಾರಾಧ್ಯ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ರಾಜ್ಯ ಶಿಕ್ಷಣ ಆಯೋಗ ರಚಿಸಬೇಕು. ಖಾಸಗಿ ಶಾಲೆಗಳನ್ನು ಗುರಿಯಾಗಿಸಿ ರೂಪಿಸಿರುವ ಅಗ್ನಿ ಅವಘಡ ಸುರಕ್ಷತೆ, ಕಟ್ಟಡ ದಕ್ಷತೆ, ಸ್ಥಿರ ನಿಧಿ, ಅನಧಿಕೃತ ಶಾಲೆಗಳ ಪಟ್ಟಿ ಇತ್ಯಾದಿ ಅವೈಜ್ಞಾನಿಕ ನಿರ್ಧಾರಗಳಿಂದ ಆಗಿರುವ ಸಮಸ್ಯೆಗಳ ಕುರಿತು ಸಮಗ್ರವಾಗಿ ಅಧ್ಯಯನ ನಡೆಸಿ, ಆ ವರದಿ ಆಧಾರದಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

‘1995ರ ನಂತರ ಆರಂಭವಾಗಿರುವ ಎಲ್ಲ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡಬೇಕು. ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿರುವ ಶಾಲೆಗಳಲ್ಲಿ ಕಲಿಯುತ್ತಿರುವ ಬಡ ಮಕ್ಕಳಿಗೆ ಬಿಸಿಯೂಟ ವ್ಯವಸ್ಥೆ ವಿಸ್ತರಿಸಬೇಕು. ಡಿಎಸ್‌ಇಆರ್‌ಟಿ, ಡಯಟ್‌, ಡಿಡಿಪಿಐ, ಬಿಇಒ ಹಂತದಲ್ಲಿನ ಭ್ರಷ್ಟಾಚಾರದಲ್ಲಿ ತೊಡಗಿರುವ ಹಾಗೂ ಕೋಮುದ್ವೇಷ ಮನಸ್ಥಿತಿ ಹೊಂದಿರುವ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಳಗಳಿಂದ ತಕ್ಷಣ ವರ್ಗಾವಣೆ ಮಾಡಬೇಕು. ಶೇ 50ರಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಖಾಸಗಿ ಶಾಲಾ ಕಾಲೇಜುಗಳ ಸಮಸ್ಯೆಗಳನ್ನು ಸಮಗ್ರವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಅಧ್ಯಯನ ಸಮಿತಿ ರಚಿಸಿ, ಅದರ ಶಿಫಾರಸಿನಂತೆ ಕ್ರಮ ಕೈಗೊಳ್ಳಬೇಕು‘ ಎಂದೂ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT