ಶನಿವಾರ, ಆಗಸ್ಟ್ 20, 2022
22 °C
ಬೋಗಸ್‌ ದಾಖಲೆ ಆಧರಿಸಿ ಶುದ್ಧ ಕ್ರಯಪತ್ರ ನೋಂದಣಿ ಮಾಡಿ ಸ್ವಾಧೀನ ಪತ್ರ ನೀಡಿದ ಪ್ರಕರಣ

ಉಪಕಾರ್ಯದರ್ಶಿ ರಾಜು ಸೇರಿ ಮೂವರು ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಕಲಿ ಫಲಾನುಭವಿಗಳ ಜೊತೆ ಶಾಮೀಲಾಗಿ ಬೋಗಸ್‌ ದಾಖಲೆಗಳನ್ನು ತಯಾರಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಐದು ನಿವೇಶನಗಳಿಗೆ ಕಾನೂನುಬಾಹಿರವಾಗಿ ಶುದ್ಧಕ್ರಯಪತ್ರ ನೋಂದಾಯಿಸಿ ಸ್ವಾಧೀನ ಪತ್ರ ನೀಡಿದ ಪ್ರಕರಣಗಳ ಸಂಬಂಧ ಉಪಕಾರ್ಯದರ್ಶಿ –4 ರಾಜು ಸೇರಿದಂತೆ ಮೂವರು ನೌಕರರನ್ನು ಅಮಾನತು ಮಾಡಲಾಗಿದೆ.

ಉಪಕಾರ್ಯದರ್ಶಿ–4 ವಿಭಾಗದ ಮೇಲ್ವಿಚಾರಕ ಆರ್‌.ಕುಮಾರ್‌ ಹಾಗೂ ಪ್ರಥಮ ದರ್ಜೆ ಸಹಾಯಕಿ ಮಂಜುಳಾಬಾಯಿ ಅಮಾನತುಗೊಂಡ ಇನ್ನಿಬ್ಬರು.

ವರ್ತೂರು ಹೋಬಳಿಯ ಕಾಡುಬೀಸನಹಳ್ಳಿ ಗ್ರಾಮದ ಸರ್ವೆ ನಂಬರ್‌ 26/1ರಲ್ಲಿ ಬಿಡಿಎ ನಿರ್ಮಿಸಿದ್ದ ಐದು ನಿವೇಶನಗಳನ್ನು ಜಿಪಿಎ ಆಧಾರದಲ್ಲಿ ಅನಸೂಯ ಗೊರ್ಲ (ನಿವೇಶನ ಸಂಖ್ಯೆ 2), ನಾಗಭೂಷಣ ಸಿ (ನಿ.ಸಂಖ್ಯೆ 05), ವರಲಕ್ಷ್ಮೀ (ನಿ.ಸಂಖ್ಯೆ 06), ಜಯಲಕ್ಷ್ಮೀ ಗಂಟೆ (ನಿ.ಸಂಖ್ಯೆ 07) ಹಾಗೂ ಮಸ್ತಾನಯ್ಯ ಡಾಮಿನೇನಿ (ನಿ.ಸಂಖ್ಯೆ 10) ಅವರ ಹೆಸರಿಗೆ ಶುದ್ಧಕ್ರಯಪತ್ರ ಮಾಡಿಕೊಡಲಾಗಿತ್ತು. ಇವರು ನೈಜ ಫಲಾನುಭವಿಗಳಲ್ಲ. ಅವರು ನೀಡಿರುವ ಜಿಪಿಎ ಕೂಡಾ ನಕಲಿ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು.

ಈ ಪ್ರಕರಣದಲ್ಲಿ ಬಿ. ರಾಜು, ಆರ್‌.ಕುಮಾರ್‌, ಡಿ.ಮಂಜುಳಾ ಬಾಯಿ, ಅಭಿಲೇಖಾಲಯ ವಿಭಾಗದ ಮೇಲ್ವಿಚಾರಕಿ ವಿ.ಮಹದೇವಮ್ಮ, ಆರ್ಥಿಕ ವಿಭಾಗದ ಪ್ರಥಮದರ್ಜೆ ಲೆಕ್ಕ ಸಹಾಯಕ ಎನ್‌.ಬಿ.ಜಯರಾಮ್‌ ಅವರಿಗೆ ಬಿಡಿಎ ಆಯುಕ್ತ ಎಚ್‌.ಆರ್‌.ಮಹದೇವ್‌ ಇತ್ತೀಚೆಗೆ ನೋಟಿಸ್‌ ಜಾರಿಗೊಳಿಸಿದ್ದರು. ಈ ಪೈಕಿ ಜಯರಾಂ ಅವರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ಅವರು ಆಗಸ್ಟ್‌ ತಿಂಗಳಲ್ಲಿ ನಿವೃತ್ತರಾಗಿದ್ದಾರೆ. ಮಹದೇವಮ್ಮ ಅವರ ವಿರುದ್ಧ ಬಿಡಿಎ ಸದ್ಯಕ್ಕೆ ಕ್ರಮ ಕೈಗೊಂಡಿಲ್ಲ.

ಆರೋಪಿಗಳು ನಕಲಿ ದಾಖಲೆ ಆಧಾರದಲ್ಲಿ ನಕಲಿ ಫಲಾನುಭವಿಗಳಿಗೆ ಐದು ನಿವೇಶನಗಳನ್ನು ಕಾನೂನುಬಾಹಿರವಾಗಿ ಶುದ್ಧ ಕ್ರಯಪತ್ರ ನೋಂದಾಯಿಸಿ, ಸ್ವಾಧೀನ ಪತ್ರ ನೀಡಿದ್ದು ಸಾಬೀತಾಗಿದೆ. ಇದರಿಂದ ಬಿಡಿಎಗೆ ₹ 4.80 ಕೋಟಿ ನಷ್ಟವಾಗಿದೆ. ಆರೋಪಿಗಳಿಗೆ ನೋಟಿಸ್‌ ನೀಡಿದರೂ ತಮ್ಮ ಮೇಲಿನ ಆರೋಪಗಳಿಗೆ ಸೂಕ್ತ ಉತ್ತರ ನೀಡಿಲ್ಲ. ಹಾಗಾಗಿ ಇಲಾಖಾ ವಿಚಾರಣೆ ಕಾಯ್ದಿರಿಸಿ ಅವರನ್ನು ಅಮಾನತು ಮಾಡುವಂತೆ ಆಯುಕ್ತರು ಆದೇಶ ಮಾಡಿದ್ದಾರೆ.

ಹೊರವರ್ತುಲ ರಸ್ತೆ ನಿರ್ಮಾಣಕ್ಕೆ ಬಿಡಿಎ ಹಳೆ ಮದ್ರಾಸ್‌ ರಸ್ತೆ, ಬಾಣಸವಾಡಿ ರಸ್ತೆ ಮತ್ತು ಸರ್ಜಾಪುರ ರಸ್ತೆ ಮಧ್ಯೆ 23 ಕಟ್ಟಡಗಳನ್ನು ಸ್ವಾಧೀನಪಡಿಸಿಕೊಂಡಿತ್ತು. ಈ ಕಟ್ಟಡಗಳ ಮಾಲೀಕರಿಗೆ ಪುನರ್ವಸತಿ ಕಲ್ಪಿಸಲು ಕಾಡುಬೀಸನಹಳ್ಳಿ ಗ್ರಾಮದ ಸರ್ವೆ ನಂಬರ್‌ 26/1ರಲ್ಲಿ 1 ಎಕರೆ 18 ಗುಂಟೆ ಜಮೀನು ಸ್ವಾಧೀನಪಡಿಸಿಕೊಂಡಿತ್ತು. 23 ಮಂದಿಯಲ್ಲಿ 18 ಮಂದಿಗೆ 1999ರಲ್ಲೇ ನಿವೇಶನ ಹಂಚಿಕೆ ಮಾಡಲಾಗಿತ್ತು. ಉಳಿದ ಐವರು (ಬಾಲಕೃಷ್ಣಾಚಾರಿ, ಕಮಲಾ ವೈದ್ಯನಾಥ್‌, ಸಜ್ಜಾದ್‌ ಅಹ್ಮದ್‌, ಅಹ್ಮದ್‌ ಖಾನ್‌, ಮುನಿರೆಡ್ಡಿ) ಬದಲಿ ನಿವೇಶನ ಹಂಚಿಕೆಗೆ ಕೋರಿ ಅರ್ಜಿ ಸಲ್ಲಿಸದ ಕಾರಣ ಐದು ನಿವೇಶನಗಳು (ನಿವೇಶನ ಸಂಖ್ಯೆ 2, 5, 6, 7 ಮತ್ತು 13) ಪ್ರಾಧಿಕಾರದ ಬಳಿಯೇ ಉಳಿದಿದ್ದವು.

ಈ ನಿವೇಶnಗಳಿಗೆ 2020ರ ಮಾರ್ಚ್‌ 20ರಂದು ಶುದ್ಧ ಕ್ರಯಪತ್ರ ಮಾಡಿಕೊಡಲಾಗಿದೆ. ಈ ಹಗರಣದ ಬಗ್ಗೆ ‘ಪ್ರಜಾವಾಣಿ’ ಜುಲೈ 31ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

‘ಹಿಂದಿನ ಆಯುಕ್ತರ ಮೌಖಿಕ ನಿರ್ದೇಶನದಂತೆ ಕ್ರಮ’

‘ಬಿಡಿಎಯ ಆಗಿನ ಆಯುಕ್ತರ ಮೌಖಿಕ ನಿರ್ದೇಶನದ ಪ್ರಕಾರ ಈ ಕಡತಗಳನ್ನು ಮಂಡಿಸಿದ್ದೇನೆ. ಜಿಪಿಎಗಳ ನೈಜತೆಯನ್ನು ಪರಿಶೀಲಿಸಬೇಕಾಗುತ್ತದೆ ಎಂಬ ಬಗ್ಗೆಯೂ ಆಯುಕ್ತರಿಗೆ ವಿವರಿಸಿದ್ದೆ. ಇದರಲ್ಲಿ ನನ್ನ ತಪ್ಪು ಇಲ್ಲ’ ಎಂದು ಉಪಕಾರ್ಯದರ್ಶಿ ರಾಜು ಅವರು ಈಗಿನ ಆಯುಕ್ತರು ನೀಡಿರುವ ನೋಟಿಸ್‌ಗೆ ನೀಡಿರುವ ಉತ್ತರದಲ್ಲಿ ಸಮಜಾಯಿಷಿ ನೀಡಿದ್ದಾರೆ.

‘ಆಯುಕ್ತರ ಮೌಖಿಕ ನಿರ್ದೇಶನದಂತೆ ಕಡತ ಮಂಡಿಸಿದ ಬಗ್ಗೆ ರಾಜು ಅವರು ಕಡತದಲ್ಲಿ ಉಲ್ಲೇಖಿಸಿಲ್ಲ. ಜಿಪಿಎ ನೈಜತೆಯನ್ನು ಪರಿಶೀಲಿಸಲು ಉಪನೋಂದಣಾಧಿಕಾರಿಗಳಿಂದ ದೃಢೀಕೃತ ಪ್ರತಿಗಳನ್ನು ತರಿಸುವ ಬಗ್ಗೆ ಹಾಗೂ 1999ರಲ್ಲಿ ಪ್ರಾಧಿಕಾರಕ್ಕೆ ಹಣ ಸಂದಾಯವಾದ ಬಗ್ಗೆ ಆರ್ಥಿಕ ವಿಭಾಗದಿಂದ ದೃಢೀಕರಿಸಿಕೊಳ್ಳುವ ಬಗ್ಗಯೂ ನಮೂದಿಸಿಲ್ಲ. ಹಾಗಾಗಿ ಅವರ ಸಮಜಾಯಿಷಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಈಗಿನ ಆಯುಕ್ತರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು