ಬೆಂಗಳೂರು | ಗುರುರಾಘವೇಂದ್ರ ಬ್ಯಾಂಕ್ ಮೇಲೆ ಎಸಿಬಿ ದಾಳಿ

ಬೆಂಗಳೂರು: ಸಾವಿರಾರು ಗ್ರಾಹಕರ ಠೇವಣಿ ಹಿಂತಿರುಗಿಸದೆ ವಂಚಿಸಿರುವ ಆರೋಪಕ್ಕೊಳಗಾಗಿರುವ ಬಸವನಗುಡಿ ಗುರುರಾಘವೇಂದ್ರ ಸಹಕಾರಿ ಬ್ಯಾಂಕಿನ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಗುರುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಬ್ಯಾಂಕಿನ ಪ್ರಧಾನ ಕಚೇರಿ, ಬಸವನಗುಡಿ ಶಾಖೆ ಮತ್ತು ಗುರುರಾಘವೇಂದ್ರ ಸೌಹಾರ್ದ ಸಹಕಾರಿ ಸೊಸೈಟಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಸುಮಾರು 15ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ದಾಖಲೆಗಳ ಶೋಧನೆಯಲ್ಲಿ ಭಾಗವಹಿಸಿದ್ದಾರೆ.
‘ಬ್ಯಾಂಕಿನ ಸಿಇಒ ಆಗಿದ್ದ ಮಣೂರು ವಾಸುದೇವ ಮಯ್ಯ ಅವರ ಮನೆಗೂ ಅಧಿಕಾರಿಗಳು ತೆರಳಿದ್ದು, ಬೀಗ ಹಾಕಿಕೊಂಡು ಅವರು ನಾಪತ್ತೆಯಾಗಿದ್ದಾರೆ. ಬ್ಯಾಂಕ್ ಕೆಲವು ನಿರ್ದೇಶಕರು ತಲೆಮರೆಸಿಕೊಂಡಿದ್ದಾರೆ’ ಎಂದು ಎಸಿಬಿ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
’ಬ್ಯಾಂಕಿನ ಆಡಳಿತ ಮಂಡಳಿ ಭಾರಿ ಹಣಕಾಸು ಅವ್ಯವಹಾರ ನಡೆಸಿದೆ. ₹ 832 ಕೋಟಿ ವಂಚಿಸಲಾಗಿದೆ ಎಂದು ದೂರು ಬಂದಿದೆ. ದೂರು ಆಧರಿಸಿ ದಾಳಿ ನಡೆಸಲಾಗಿದೆ. ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ. ರಿಸರ್ವ್ ಬ್ಯಾಂಕ್ ಪ್ರಕಾರ ಅನುತ್ಪಾದಕ ಸಾಲ ಶೇ 4 ಮೀರಬಾರದು. ಆದರೆ, ಈ ಬ್ಯಾಂಕಿನಲ್ಲಿ ಶೇ 25ರಿಂದ 30ರಷ್ಟಿದೆ’ ಎಂದು ಅಧಿಕಾರಿ ವಿವರಿಸಿದರು.
ಇದನ್ನೂ ಓದಿ... ಗುರುರಾಘವೇಂದ್ರ ಬ್ಯಾಂಕ್ ಹಗರಣ: ತನಿಖೆ ಸಿಐಡಿಗೆ?
ದಾಖಲೆಗಳೇ ಇಲ್ಲ: ಗುರು ರಾಘವೇಂದ್ರ ಬ್ಯಾಂಕ್‌ನಲ್ಲಿ 2,876 ಸಾಲದ ಖಾತೆಗಳು ಹಾಗೂ ಇವುಗಳಿಗೆ ಕೊಡಲಾದ ₹ 1,544 ಕೋಟಿ ಸಾಲಕ್ಕೆ ದಾಖಲೆಗಳೇ ಇಲ್ಲ ಎಂದು ಸಹಕಾರಿ ಸಂಘಗಳ ರಿಜಿಸ್ಟ್ರಾರ್ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.
ಬ್ಯಾಂಕ್ ಸಿಕ್ಕಾಪಟ್ಟೆ ನಷ್ಟದಲ್ಲಿದ್ದರೂ ಲಾಭದಲ್ಲಿದೆ ಎಂದು ಬಿಂಬಿಸಲಾಗಿದೆ. ₹149 ಕೋಟಿ ಲಾಭ ಬಂದಿದೆ ಎಂದೂ ದಾಖಲೆಗಳಲ್ಲಿ ತೋರಿಸಲಾಗಿದೆ. ಒಟ್ಟು ₹ 2,000 ಕೋಟಿಗೂ ಅಧಿಕ ಠೇವಣಿ ಸಂಗ್ರಹಿಸಿದ್ದು, ಇದರಲ್ಲಿ ₹ 650 ಕೋಟಿಯಷ್ಟು ಸಾಂಸ್ಥಿಕ ಠೇವಣಿ ಸೇರಿದೆ. ಗುರುರಾಘವೇಂದ್ರ ಸೌಹಾರ್ದ ಸಹಕಾರಿ ಸಂಘಕ್ಕೆ ಬ್ಯಾಂಕಿನ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂಬ ಸಂಗತಿ ರಿಜಿಸ್ಟ್ರಾರ್ ಕಚೇರಿ ಪರಿಶೀಲನೆಯಿಂದ ಬಯಲಾಗಿದೆ.
ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ಜಾರಿ ನಿರ್ದೇಶನಾಲಯವೂ (ಇ.ಡಿ) ಗುರುರಾಘವೇಂದ್ರ ಬ್ಯಾಂಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಯುತ್ತಿದೆ. ಈಚೆಗಷ್ಟೇ ಸಹಕಾರ ಸಂಘಗಳ ರಿಜಿಸ್ಟ್ರಾರ್ ಪ್ರಸನ್ನ ಕುಮಾರ್, ಬ್ಯಾಂಕ್ ಆಡಳಿತ ಮಂಡಳಿ ವಜಾ ಮಾಡಿ ಆಡಳಿತಾಧಿಕಾರಿಯನ್ನು ನೇಮಿಸಿದ್ದಾರೆ.
ಇದನ್ನೂ ಓದಿ: ಆರ್‌ಬಿಐ ನಿರ್ಬಂಧ: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ಗ್ರಾಹಕರಲ್ಲಿ ಆತಂಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.