ಸೋಮವಾರ, ಜುಲೈ 4, 2022
24 °C
ತಪ್ಪಿತಸ್ಥ ಅಧಿಕಾರಿಗಳಿಗೆ ಸರ್ಕಾರ ರಕ್ಷಣೆ: ಎಎಪಿ ಆರೋಪ

ಎಸಿಬಿ ದಾಳಿ: ನಾಲ್ಕು ಅಧಿಕಾರಿಗಳಿಗಷ್ಟೇ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸಿದ ದಾಳಿಯಿಂದ ಅಕ್ರಮ ಆಸ್ತಿ ಪತ್ತೆಯಾದರೂ ತಪ್ಪಿತಸ್ಥ ಅಧಿಕಾರಿಗಳನ್ನು ರಾಜ್ಯ ಸರ್ಕಾರ ರಕ್ಷಿಸುತ್ತಿದೆ’ ಎಂದು ಆಮ್‌ ಆದ್ಮಿ ಪಕ್ಷದ ನಗರ ಘಟಕದ ಅಧ್ಯಕ್ಷ ಮೋಹನ್ ದಾಸರಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ‘ಸರ್ಕಾರವು ಭ್ರಷ್ಟ ಅಧಿಕಾರಿಗಳಿಗೆ ಬೆನ್ನೆಲುಬಾಗಿ ನಿಂತಿದೆ. ಲೋಕಾಯುಕ್ತಕ್ಕೆ ಪರ್ಯಾಯವಾಗಿ ಎಸಿಬಿ ಅಸ್ತಿತ್ವಕ್ಕೆ ಬಂದು ಆರು ವರ್ಷಗಳಾಗಿವೆ. ಈವರೆಗೆ ಕೇವಲ ನಾಲ್ಕು ಮಂದಿಗೆ ಮಾತ್ರ ಶಿಕ್ಷೆಯಾಗಿದೆ. ಅಘೋಷಿತ ಆಸ್ತಿ ಪ್ರಕರಣಗಳಿಗೆ ಸಂಬಂಧಿಸಿದಂತೆ 989ಕ್ಕೂ ಅಧಿಕ ಅಧಿಕಾರಿಗಳು ಮತ್ತು ನೌಕರರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಆದರೆ, ದಾಳಿಗೊಳಗಾದ ಅಧಿಕಾರಿಗಳು ಏನೂ ಆಗಿಲ್ಲ ಎನ್ನುವಂತೆ ಕೆಲವೇ ದಿನಗಳಲ್ಲಿ ಮತ್ತೆ ಕಚೇರಿ, ಹುದ್ದೆಗೆ ಹಾಜರಾಗುತ್ತಿದ್ದಾರೆ’ ಎಂದರು.

ಪಕ್ಷದ ರಾಜ್ಯ ಘಟಕದ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ‘ಆರು ವರ್ಷಗಳಲ್ಲಿ ಎಸಿಬಿಯಲ್ಲಿ 1,600ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 615 ಅಧಿಕಾರಿಗಳ ಮೇಲೆ ಮಾತ್ರ ಚಾರ್ಜ್‌ಶೀಟ್‌ ದಾಖಲಾಗಿದೆ. 368 ಆರೋಪಿ ಅಧಿಕಾರಿಗಳ ವಿಚಾರಣೆಗೆ ಸಕ್ಷಮ ಪ್ರಾಧಿಕಾರದ ಅನುಮತಿ ಸಿಕ್ಕಿಲ್ಲ. ದಾಳಿಯಲ್ಲಿ ಈವರೆಗೆ 80 ಕೆ.ಜಿ.ಗೂ ಅಧಿಕ ಚಿನ್ನಾಭರಣ, ₹ 50 ಕೋಟಿಗೂ ಅಧಿಕ ನಗದು, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಗೆ ಸಂಬಂಧಿಸಿದ ದಾಖಲೆ ಜಪ್ತಿ ಮಾಡಲಾಗಿದೆ. 1,519 ಅಧಿಕಾರಿಗಳ ಬಂಧನವಾಗಿದ್ದು, 1,219 ಅಧಿಕಾರಿಗಳ ಅಮಾನತಿಗೆ ಎಸಿಬಿ ಶಿಫಾರಸು ಮಾಡಿದೆ. ಆದರೂ ನಾಲ್ಕು ಅಧಿಕಾರಿಗಳಿಗೆ ಶಿಕ್ಷೆಯಾಗಿರುವುದು ವ್ಯವಸ್ಥೆಯ ವಿಪರ್ಯಾಸ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು