ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಡಗರದ ದುರ್ಗಮ್ಮ ಸಿಡಿಬಂಡಿ ಉತ್ಸವ

Last Updated 28 ಫೆಬ್ರುವರಿ 2018, 9:03 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ಅಧಿದೇವತೆ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ಸಿಡಿಬಂಡಿ ರಥೋತ್ಸವವು ಸಾವಿರಾರು ಭಕ್ತರ ಜಯಘೋಷದ ನಡುವೆ ಸಗಡರದಿಂದ ಜರುಗಿತು.

ನಗರ, ಜಿಲ್ಲೆ ಮಾತ್ರವಲ್ಲದೇ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು, ಶ್ರದ್ಧೆ–ಭಕ್ತಿಯಿಂದ ದೇವಿಯ ದರ್ಶನ ಪಡೆದು ಪುನೀತರಾದರು.

ಪಾರ್ವತಿನಗರ, ಗಾಂಧಿನಗರ, ಕಪ್ಪಗಲ್ಲು ರಸ್ತೆ, ರೈಲು ಕೆಳಸೇತುವೆ, ಎಸ್ಪಿ ಕಚೇರಿ ಮುಂಭಾಗ ಸೇರಿದಂತೆ ದೇವಾಲಯದ ಸುತ್ತಲಿನ ರಸ್ತೆಗಳು ಭಕ್ತರಿಂದ ಕಿಕ್ಕಿರಿದು ತುಂಬಿದ್ದವು.‌ ಎತ್ತರದ ಕಟ್ಟಡಗಳು, ಮರಗಳ ಮೇಲೆ ನಿಂತು ಭಕ್ತರು ಸಿಡಿಬಂಡಿಗೆ ಭಕ್ತಿಯಿಂದ ಕೈಮುಗಿದ ದೃಶ್ಯ ಕಂಡು ಬಂತು.

ಬೆಳಿಗ್ಗೆಯಿಂದಲೇ ನಗರದ ಎಲ್ಲ ರಸ್ತೆಗಳಲ್ಲೂ ದುರ್ಗಮ್ಮನ ಭಕ್ತರು ದೊಡ್ಡ ಹೂ ಮಾಲೆ ಹಿಡಿದು, ಮಂಗಳ ವಾದ್ಯಗಳೊಂದಿಗೆ ಮೆರವಣಿಗೆಯ ಮೂಲಕ ಸಾಗಿ ಬಂದರು. ಮುಸ್ಸಂಜೆಯ ವೇಳೆಗೆ ಸಿಡಿಬಂಡಿ ಚಲಿಸಲು ಆರಂಭಿಸುತ್ತಿದ್ದಂತೆ, ‘ದುರ್ಗಮ್ಮನಿಗೆ ಜೈ’ ಎಂಬ ಘೋಷಣೆ ನಗರದಲ್ಲಿ ಮಾರ್ದನಿಸಿತು.

ಬಂಡಿ ಎಳೆದ ಮೂರು ಜೊತೆ ಕೀಲಾರಿ ಎತ್ತುಗಳ ಸಾರಥ್ಯವನ್ನು ಗಾಣಿಗ ಸಮುದಾಯದವರು ವಹಿಸಿದ್ದರು. ಬಂಡಿ ಚಲಿಸುವುದಕ್ಕೂ ಮುನ್ನ ಹರಕೆ ತೀರಿಸಿ ಭಕ್ತರು ಮೇಲೆ ಎಸೆದ ಕೋಳಿಗಳನ್ನು ಹಿಡಿಯಲು ಯುವಕರ ದಂಡು ಕೈಚಾಚಿ ಸಾಹಸ ಪ್ರದಶಿಸಿತು. ನಂತರ ದೇವಸ್ಥಾನವನ್ನು ಸಿಡಿಬಂಡಿ ಮೂರು ಸುತ್ತು ಹಾಕಿತು. ಪ್ರತಿ ಸುತ್ತಿನಲ್ಲೂ ಭಕ್ತರ ಘೋಷಣೆ ಮುಗಿಲು ಮುಟ್ಟಿತ್ತು.

ಜಾತ್ರೆಯ ರಂಗು: ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆಯಿಂದಲೇ ಜಾತ್ರೆಯ ರಂಗು ಕಳೆಕಟ್ಟಿತ್ತು. ಮಹಿಳೆಯರು, ಮಕ್ಕಳು ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಂತು, ಹಣ್ಣು -ಕಾಯಿ ಅರ್ಪಿಸಿ, ದೇವಿಯ ದರ್ಶನ ಪಡೆದರು. ಭಕ್ತರಿಗೆ ಸಿಹಿಯೂಟದ ವ್ಯವಸ್ಥೆ ಮಾಡಲಾಗಿತ್ತು.

ಈಶ್ವರಪ್ಪ ಭೇಟಿ: ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ವಿಶೇಷ ಪೂಜೆ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷಲಾಡ್ ಅಭಿಮಾನಿ ಬಳಗ, ಬಿ.ಎಸ್.ಯಡಿಯೂರಪ್ಪ ಅಭಿಮಾನ ಬಳಗದ ಶ್ರೀನಿವಾಸ ಪಾಟೀಲ, ಗೋವರ್ಧನರೆಡ್ಡಿ ನೇತೃತ್ವದಲ್ಲಿ ದೇವಿಗೆ ವಿಶೇಷ ಪೂಜೆ ನೆರವೇರಿಸಿದರು.

ಮಜ್ಜಿಗೆ ವಿತರಣೆ: ದೇವಸ್ಥಾನದ ಮುಂದೆ ಕಾಂಗ್ರೆಸ್ ಮುಖಂಡ ವಿ.ವಿವೇಕ ಅವರು ಭಕ್ತರಿಗೆ ಮಜ್ಜಿಗೆ ವಿತರಿದರು. ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಬಳಿ ಭಕ್ತರು ನೀರಿನ ಅರವಟಿಗೆಯನ್ನು ಸ್ಥಾಪಿಸಿದ್ದರು.

ಬ್ಯಾರಿಕೇಡ್‌ ಅಳವಡಿಕೆ: ನಗರದ ತಾಳೂರು ರಸ್ತೆ, ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಂದೋಬಸ್ತ್‌ ಒದಗಿಸಿದ್ದರು. ಭಕ್ತರು ಚದುರಿಸಲು ಪೊಲೀಸರು ಲಾಟಿ ಬೀಸಿದರು. ಲಡ್ಡು ಪ್ಯಾಕೆಟ್ ವಿತರಣೆ: ಕೆಲ ಸಂಘ–ಸಂಸ್ಥೆಗಳು ಲಡ್ಡು, ಚಿತ್ರನ್ನದ ಪ್ಯಾಕೆಟ್‌ಗಳನ್ನು ಭಕ್ತರಿಗೆ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT