ಅಪಘಾತ; ಮೂವರು ವಿದ್ಯಾರ್ಥಿಗಳ ದುರ್ಮರಣ

7
ಕೆಟ್ಟು ನಿಂತಿದ್ದ ಲಾರಿಗೆ ಕಾರು ಡಿಕ್ಕಿ

ಅಪಘಾತ; ಮೂವರು ವಿದ್ಯಾರ್ಥಿಗಳ ದುರ್ಮರಣ

Published:
Updated:
ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿರುವುದು. (ಒಳಚಿತ್ರಗಳು ವಿಶಾಲ್, ಪ್ರಜ್ವಲ್)

ಬೆಂಗಳೂರು: ದೇವನಹಳ್ಳಿ ಸಮೀಪದ ಸಣ್ಣ ಅಮಾನಿಕೆರೆ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದ (ಕಿಮ್ಸ್) ಮೂವರು ವಿದ್ಯಾರ್ಥಿಗಳು ಮೃತಪಟ್ಟು, ಮತ್ತೊಬ್ಬ ಗಾಯಗೊಂಡಿದ್ದಾನೆ.

ಪ್ರಜ್ವಲ್ (20), ವಿಶಾಲ್ ರಾವ್ (21), ಭೂಷಣ್‌ (20) ಮೃತರು. ಕುಮಾರ್ ರಾಜ್ (24) ಗಾಯಗೊಂಡಿದ್ದು, ತುರ್ತು ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ.

ಚಿಕ್ಕಬಳ್ಳಾಪುರದ ವೆಂಕಟಗಿರಿ ಗ್ರಾಮದ ಕುಮಾರ್, ಮಂಗಳವಾರ ರಾತ್ರಿ ಸ್ನೇಹಿತರನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತಿದ್ದ. 1.30ರ ಸುಮಾರಿಗೆ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬಂದಿರುವ ಆತ, ಸಣ್ಣ ಅಮಾನಿಕೆರೆ ಬಳಿಯ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡಿದ್ದಾನೆ. ಆಗ ಅಡ್ಡಾದಿಡ್ಡಿಯಾಗಿ ಸಾಗಿದ ಕಾರು, ರಸ್ತೆ ಬದಿ ನಿಂತಿದ್ದ ಸರಕು ಸಾಗಣೆ ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಹೇಳಿದರು.

ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ತಲೆಗೆ ಗಂಭೀರ ಪೆಟ್ಟು ಬಿದ್ದು ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸೀಟ್ ಬೆಲ್ಟ್ ಧರಿಸಿದ್ದ ಕಾರಣ ಕುಮಾರ್‌ನ ತಲೆಗೆ ಹೆಚ್ಚಿನ ಪೆಟ್ಟು ಬಿದ್ದಿಲ್ಲ. ಇತರೆ ವಾಹನಗಳ ಸವಾರರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಮೃತರ ಮೊಬೈಲ್‌ನಿಂದ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದರು.

ಆತ್ಮೀಯ ಸ್ನೇಹಿತರು: ವಿಶಾಲ್ ರಾಜಸ್ಥಾನದವನು. ಮಗನನ್ನು ಬೆಂಗಳೂರಿನ ಕಾಲೇಜಿಗೆ ಸೇರಿಸಿದ ಬಳಿಕ ಆತನ ಪೋಷಕರೂ ದೊಡ್ಡಬಳ್ಳಾಪುರಕ್ಕೆ ಬಂದು ನೆಲೆಸಿದ್ದಾರೆ. ಸರ್ಕಾರಿ ನೌಕರರಾದ ಪ್ರಜ್ವಲ್ ತಂದೆ, ಪತ್ನಿ–ಮಗಳ ಜತೆ ತುಮಕೂರಿನಲ್ಲಿ ವಾಸವಿದ್ದಾರೆ. ಭೂಷಣ್ ವಿಜಯಪುರದವನಾಗಿದ್ದು, ಆತನ ತಂದೆ ದೊಡ್ಡಬಳ್ಳಾಪುರದ ಖಾಸಗಿ ಕಂಪನಿಯೊಂದರಲ್ಲಿ ವ್ಯವಸ್ಥಾಪಕರಾಗಿದ್ದಾರೆ.

ಕಿಮ್ಸ್‌ನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ಬಳಿಕ ನಾಲ್ವರೂ ಕಾಲೇಜಿನ ಹಾಸ್ಟೆಲ್‌ನಲ್ಲೇ ಉಳಿದುಕೊಂಡಿದ್ದರು. ರಾತ್ರಿ ತನ್ನ ಕಾರಿನಲ್ಲಿ ಊರಿಗೆ ಹೊರಟಿದ್ದ ಕುಮಾರ್, ಗೆಳೆಯರನ್ನೂ ಮನೆಗೆ ಆಹ್ವಾನಿಸಿದ್ದ. ಹೀಗಾಗಿ, ಮೂವರೂ ಹೊರಟು ಬಂದಿದ್ದರು ಎಂದು ದೇವನಹಳ್ಳಿ ಸಂಚಾರ ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 18

  Sad
 • 0

  Frustrated
 • 0

  Angry

Comments:

0 comments

Write the first review for this !