ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿ ಒಡಲದನಿ: ಬೆಂಗಳೂರಲಿ ಪದೇ ಪದೇ ಅಪಘಾತ: ಹೊಣೆ ಯಾರು’?

Last Updated 19 ಏಪ್ರಿಲ್ 2022, 20:43 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನಗಳ ಸವಾರರ ಪಾಲಿಗೆ ಕಸ ಹೊತ್ತೊಯ್ಯುವ ಬಿಬಿಎಂಪಿ ಲಾರಿಗಳು ಯಮ ಸ್ವರೂಪಿಯಾಗಿ ಕಾಡುತ್ತಿವೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಮೂವರನ್ನು ಈ ಲಾರಿಗಳು ಬಲಿ ಪಡೆದುಕೊಂಡಿವೆ.

ಹೆಬ್ಬಾಳ ಬಸ್ ನಿಲ್ದಾಣದ ಎದುರಿನಲ್ಲಿ ರಸ್ತೆ ದಾಟುತ್ತಿದ್ದ 9ನೇ ತರಗತಿ ವಿದ್ಯಾರ್ಥಿನಿ ಅಕ್ಷಯಾ (14) ಅವರ ಮೇಲೆ ಮಾ.21 ಕಸದ ಲಾರಿ ಹರಿದಿತ್ತು. ಇನ್ನೂ ಮೂವರು ಗಾಯಗೊಂಡಿದ್ದರು.

ಬಾಗಲೂರು ಬಳಿ ದ್ವಿಚಕ್ರ ವಾಹನಕ್ಕೆ ಮಾ.31ರಂದು ಕಸದ ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ರಾಮಯ್ಯ(76) ಮೃತಪಟ್ಟಿದ್ದರು. ನಾಯಂಡಹಳ್ಳಿ ಬಳಿ ಏ.18ರಂದು ದ್ವಿಚಕ್ರ ವಾಹನ ಸವಾರರಾದ ಪದ್ಮಿನಿ (40) ಅವರ ಮೇಲೆ ಕಸ ತುಂಬಿದ್ದ ಲಾರಿ ಹರಿದಿದೆ. ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಭಯಪಡುವ ವಾತಾವರಣ ನಗರದಲ್ಲಿ ಸೃಷ್ಟಿಯಾಗಿದೆ. ಈ ಬಗ್ಗೆ ನಾಗರಿಕರು ‘‍ಪ್ರಜಾವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

--

‘ರಸ್ತೆಗಿಂತ ಪಾದಚಾರಿ ಮಾರ್ಗ ಮುಖ್ಯ’

ಪಾದಚಾರಿಗಳಿಗೆ ನಗರದಲ್ಲಿ ಪ್ರಾಮುಖ್ಯತೆಯೇ ಇಲ್ಲವಾಗಿದೆ. ರಸ್ತೆಗಳೆಂದರೆ ಕೇವಲ ವಾಹನಗಳ ಸಂಚಾರಕ್ಕೆ ಸೀಮಿತ ಎಂಬಂತೆ ಆಗಿದೆ. ಯಾವುದೇ ವಾಹನದಲ್ಲಿ ಹೋಗುವವರು ಮೊದಲಿಗೆ ಮತ್ತು ಕೊನೆಗೆ ಪಾದಚಾರಿಗಳೇ ಆಗಿರುತ್ತಾರೆ. ಮಹಿಳೆಯರು, ಮಕ್ಕಳು, ವೃದ್ಧರು, ಅಂಗವಿಕಲರು ರಸ್ತೆ ದಾಟುವುದೇ ಕಷ್ಟವಾಗಿದೆ. ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ(ಸಿಬಿಡಿ) ಟೆಂಡರ್ ಶ್ಯೂರ್ ರಸ್ತೆಗಳಲ್ಲಿ ಮಾತ್ರ ಪಾದಚಾರಿ ಮಾರ್ಗಗಳು ಉತ್ತಮವಾಗಿವೆ. ನಗರ ಹೊರ ವಲಯದಲ್ಲಿ ವಿಸ್ತಾರಗೊಳ್ಳುತ್ತಿದೆ. ಜಯನಗರ, ಬಸವನಗುಡಿ, ಮಲ್ಲೇಶ್ವರದಂತೆ ಯೋಜನಾಬದ್ಧವಾಗಿ ಬೆಳೆಯುತ್ತಿಲ್ಲ. ಹಳ್ಳಿಗಳೇ ನಗರವಾಗಿ ಮಗ್ಗಲು ಬದಲಿಸುತ್ತಿವೆ. ಅಲ್ಲಿಗೆ ಪೂರಕವಾದ ಬೇರೆ ರೀತಿಯ ಪಾದಚಾರಿ ಮಾರ್ಗಗಳನ್ನು ನಿರ್ಮಿಸುವತ್ತ ಗಮನ ಹರಿಸಬೇಕಿದೆ. ರಸ್ತೆ ಅಭಿವೃದ್ಧಿ ಬದಲು ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ಮೊದಲ ಆದ್ಯತೆ ದೊರೆಯಬೇಕಿದೆ. ಅದೇ ರೀತಿ ನಗರದಲ್ಲಿ ವಾಹನಗಳ ವೇಗಕ್ಕೂ ಕಡಿವಾಣ ಹಾಕಬೇಕಿದೆ.

ಎಚ್‌.ಎಸ್. ಸುಧೀರ್, ನಗರ ಸಂಚಾರ ತಜ್ಞ
---
‘ಚಾಲಕರಿಗೆ ವಿಶೇಷ ತರಬೇತಿ ನೀಡಿ’

ಬಿಬಿಎಂಪಿ ಲಾರಿಗಳನ್ನು ನೋಡಿದರೆ ಭಯವಾಗುವ ವಾತಾವರಣ ಸೃಷ್ಟಿಯಾಗಿದೆ. ಒಂದೇ ತಿಂಗಳಲ್ಲಿ ಮೂರು ಜನರನ್ನು ಬಿಬಿಎಂಪಿ ಲಾರಿಗಳು ಬಲಿ ಪಡೆದಿವೆ ಎಂದರೆ ರಸ್ತೆಯಲ್ಲಿ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಓಡಾಡುವುದಾದರೂ ಹೇಗೆ? ಬಿಬಿಎಂಪಿ ಕಸದ ಲಾರಿಗಳನ್ನು ಓಡಿಸುವ ಚಾಲಕರ ಬಳಿ ಚಾಲನಾ ಪರವಾನಗಿ ಇದೆಯೇ ಎಂಬುದನ್ನು ಮೊದಲು ಪರೀಕ್ಷಿಸಬೇಕಿದೆ. ರಸ್ತೆಯಲ್ಲಿ ನಿಧಾನವಾಗಿ ಚಾಲನೆ ಮಾಡುವ ಬಗ್ಗೆ ವಿಶೇಷ ತರಬೇತಿ ಕೊಡುವ ಅಗತ್ಯವಿದೆ. ಬೇರೆ ವಾಹನಗಳು ಮತ್ತು ಜನರ ಪ್ರಾಣ ಲೆಕ್ಕಿಸದೆ ಚಾಲನೆ ಮಾಡುವವರ ಪರವಾನಗಿ ರದ್ದುಗೊಳಿಸಬೇಕು. ಅಲ್ಲದೇ ಲಾರಿಗಳು ಸುಸ್ಥಿತಿಯಲ್ಲಿ ಇವೆಯೇ ಎಂಬುದನ್ನೂ ಪರಿಶೀಲಿಸಬೇಕು. ಒಟ್ಟಾರೆ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರ ಪ್ರಾಣ ರಕ್ಷಣೆಯಾಗಬೇಕು.‌

ಮುನಿರಾಜು,ಖಾಸಗಿ ಸಂಸ್ಥೆ ಉದ್ಯೋಗಿ
---
‘ಕಿಲ್ಲರ್ ಬಿಬಿಎಂಪಿ ಆಗಬಾರದು’

ಬಿಎಂಟಿಸಿ ಬಸ್‌ಗಳಿಂದ ಬೆಂಗಳೂರಿನಲ್ಲಿ ಅಪಘಾತ ಹೆಚ್ಚಾಗುತ್ತಿತ್ತು. ಈಗ ಬಿಬಿಎಂಪಿ ಲಾರಿಗಳಿಂದ ಜನರು ಪ್ರಾಣ ಕಳೆದುಕೊಳ್ಳಬೇಕಾಗಿದೆ. ಕಿಲ್ಲರ್ ಬಿಎಂಟಿಸಿ ಬದಲಿಗೆ, ಕಿಲ್ಲರ್ ಬಿಬಿಎಂಪಿ ಎಂದು ಕರೆಯಬೇಕಾಗಿದೆ. ವೇಗಕ್ಕೆ ನಿಯಂತ್ರಣವೇ ಇಲ್ಲದೆ ಲಾರಿ ಚಾಲನೆ ಮಾಡುವುದರಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಾಮಾನ್ಯ ಜನರಿಗೆ ಪ್ರಾಣಕ್ಕೆ ಬೆಲೆಯೇ ಇಲ್ಲವಾಗಿದೆ. ಬಿಬಿಎಂಪಿ ಚಾಲಕರ ನಿರ್ಲಕ್ಷ್ಯ ಇದೇ ರೀತಿ ಮುಂದುವರಿದರೆ ಜನ ಕಾನೂನು ಕೈಗೆತ್ತಿಕೊಳ್ಳುತ್ತಾರೆ. ಅದಕ್ಕೆ ಅವಕಾಶ ಆಗದಂತೆ ಬಿಬಿಎಂಪಿ ಚಾಲಕರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಬೇಕು ಮತ್ತು ಸುಸ್ಥಿತಿಯಲ್ಲಿರುವ ಲಾರಿಗಳನ್ನಷ್ಟೇ ರಸ್ತೆಗೆ ಇಳಿಸಬೇಕು. ಪಾದಚಾರಿಗಳು ರಸ್ತೆ ದಾಟಲು ಮತ್ತು ರಸ್ತೆ ಬದಿಯಲ್ಲಿ ಸುರಕ್ಷಿತವಾಗಿ ನಡೆದು ಸಾಗಲು ಅನುಕೂಲ ಆಗುವಂತೆ ಮಾರ್ಗಗಳನ್ನು ಕಲ್ಪಿಸಬೇಕು.

ಅಂಬರೀಷ್‌, ಆಟೋರಿಕ್ಷ ಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT