ಬೆಂಗಳೂರು: ಕೆಂಗೇರಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಹಿಂಬದಿ ಸವಾರ ಶೇಖ್ ಅನ್ವರ್ (34) ಮೃತಪಟ್ಟಿದ್ದಾರೆ.
‘ಬಿಹಾರದ ಶೇಖ್ ಅನ್ವರ್, ಹಲವು ವರ್ಷಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದರು. ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಕೆಂಗೇರಿಯಲ್ಲಿ ವಾಸವಿದ್ದರು’ ಎಂದು ಪೊಲೀಸರು ಹೇಳಿದರು.
‘ಶೇಖ್ ಅನ್ವರ್ ಹಾಗೂ ಸ್ನೇಹಿತ ಮೊಹಮ್ಮದ್ ನಾದೀರ್ ಅವರು ಸೋಮವಾರ ರಾತ್ರಿ ಬೈಕ್‌ನಲ್ಲಿ ಹೊರಟಿದ್ದರು. ಅನ್ವರ್ ಅವರು ಹಿಂಬದಿಯಲ್ಲಿ ಕುಳಿತಿದ್ದರು. ಮೈಸೂರು ಮುಖ್ಯರಸ್ತೆ ಮಧು ಜಂಕ್ಷನ್ ಬಳಿ ಅತೀ ವೇಗವಾಗಿ ಹೊರಟಿದ್ದ ಲಾರಿ, ಬೈಕ್‌ಗೆ ಡಿಕ್ಕಿ ಹೊಡೆದಿತ್ತು.’
‘ಬೈಕ್ ಸಮೇತ ಉರುಳಿ ರಸ್ತೆಗೆ ಬಿದ್ದಿದ್ದ ಶೇಖ್ ಅನ್ವರ್ ಮೈ ಮೇಲೆ ಲಾರಿಯ ಚಕ್ರ ಹರಿದಿತ್ತು. ತೀವ್ರ ಗಾಯಗೊಂಡು ಅವರು ಮೃತಪಟ್ಟಿದ್ದಾರೆ. ಸವಾರ ನಾದೀರ್ ಅವರೂ ಗಾಯಗೊಂಡಿದ್ದಾರೆ. ಲಾರಿ ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.