ಬೆಂಗಳೂರು: ಪಾನಮತ್ತ ಚಾಲಕನೊಬ್ಬ ಲಾರಿಯನ್ನು ಅಡ್ಡಾದಿಡ್ಡಿ ಚಲಾಯಿಸಿ ಸರಣಿ ಅಪಘಾತವನ್ನುಂಟು ಮಾಡಿದ್ದು, ಬೈಕ್ ಸವಾರ ನೇಮಿರಾಜ್ (35) ಮೃತಪಟ್ಟಿದ್ದಾರೆ.
‘ಕಲ್ಯಾಣನಗರದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿರುವ ಅಪಘಾತದಲ್ಲಿ ಬೈಕ್, ಕಾರು ಸೇರಿ ಎಂಟು ವಾಹನಗಳು ಜಖಂಗೊಂಡಿವೆ. ಅಪಘಾತಕ್ಕೆ ಕಾರಣವಾಗಿರುವ ಲಾರಿ ಚಾಲಕ ಹಿಂದೂಪುರದ ಚಂದ್ರಶೇಖರ್‌ನನ್ನು (37)ಬಂಧಿಸಲಾಗಿದೆ. ಲಾರಿ ಜಪ್ತಿ ಮಾಡಲಾಗಿದೆ’ ಎಂದು ಬಾಣಸವಾಡಿ ಸಂಚಾರ ಪೊಲೀಸರು ಹೇಳಿದರು.
‘ಮೃತ ನೇಮಿರಾಜ್, ಹಾಸನದವರು. ನಗರದ ಅಮೆಜಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಸ್ತೂರಿನಗರ ನಿವಾಸಿಯಾದ ಯುವತಿಯನ್ನು ಕೆಲ ತಿಂಗಳ ಹಿಂದೆಯಷ್ಟೇ ನೇಮಿರಾಜ್ ಮದುವೆಯಾಗಿದ್ದರು. ದಂಪತಿ ಯಲಹಂಕದಲ್ಲಿ ನೆಲೆಸಿದ್ದರು.’
‘ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಕಾರಣ ಪತ್ನಿ ಬೆಳಿಗ್ಗೆಯೇ ತವರು ಮನೆಗೆ ಹೋಗಿದ್ದರು. ಮಧ್ಯಾಹ್ನದ ಪಾಳಿ ಕೆಲಸ ಮುಗಿಸಿದ್ದ ನೇಮಿರಾಜ್, ಕಚೇರಿಯಿಂದ ನೇರವಾಗಿ ರಾತ್ರಿ 12 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಪತ್ನಿಯ ತವರು ಮನೆಗೆ ಹೊರಟಿದ್ದರು. ಇದೇ ವೇಳೆಯೇ ಈ ಅವಘಡ ಸಂಭವಿಸಿದೆ’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.