ಬೆಂಗಳೂರು: ಮಾಗಡಿ ರಸ್ತೆಯ ಈಸ್ಟ್ ವೆಸ್ಟ್ ಕಾಲೇಜು ಜಂಕ್ಷನ್ ಬಳಿ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು, ಕೃಷ್ಣಮೂರ್ತಿ ಸಿ.ಡಿ (64) ಮೃತಪಟ್ಟಿದ್ದಾರೆ.
‘ಶನಿವಾರ ಸಂಜೆ ನಡೆದಿದ್ದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಕೃಷ್ಣಮೂರ್ತಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಅವರು ಭಾನುವಾರ ಮೃತಪಟ್ಟಿದ್ದಾರೆ’ ಎಂದು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಹೇಳಿದರು.
‘ಕೃಷ್ಣಮೂರ್ತಿ ಅವರು ಟಿವಿಎಸ್ ಮೊಪೆಡ್ (ಕೆಎ 04 ಇಯು 9717) ವಾಹನದಲ್ಲಿ, ಈಸ್ಟ್ ವೆಸ್ಟ್ ಕಾಲೇಜು ಕಡೆಯಿಂದ ಬ್ಯಾಡರಹಳ್ಳಿ ಠಾಣೆ ಕಡೆಗೆ ಹೊರಟಿದ್ದರು. ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಜೈ (24), ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ತಮ್ಮ ಹೊಂಡಾ ಆ್ಯಕ್ಟಿವಾ ದ್ವಿಚಕ್ರ ವಾಹನ (ಕೆಎ 02 ಎಚ್‌ಕೆ 4120) ಚಲಾಯಿಸಿದ್ದ. ಇದರಿಂದಾಗಿ ದ್ವಿಚಕ್ರ ವಾಹನ, ಟಿವಿಎಸ್ ಮೊಪೆಡ್‌ಗೆ ಡಿಕ್ಕಿ ಹೊಡೆದಿತ್ತು.’
‘ಕೃಷ್ಣಮೂರ್ತಿ, ಜೈ ಹಾಗೂ ಆತನ ವಾಹನದ ಹಿಂಬದಿಯಲ್ಲಿದ್ದ ಕಾಲು ಉರ್ವಾ (31) ಗಾಯಗೊಂಡಿದ್ದರು. ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೈ ಹಾಗೂ ಉರ್ವಾ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದರು.
‘ಅಪಘಾತಕ್ಕೆ ಕಾರಣವಾದ ಆರೋಪದಡಿ ಜೈ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.