ಭಾನುವಾರ, ಆಗಸ್ಟ್ 25, 2019
23 °C
ಸುಪ್ರೀಂಕೋರ್ಟ್‌ನ ‘ರಸ್ತೆ ಸುರಕ್ಷತಾ ಸಮಿತಿ’ಯ ನಿರ್ದೇಶನ

ಅಪಘಾತಗಳ ತನಿಖೆಗೆ ‘ಜಂಟಿ ಸಮಿತಿ’

Published:
Updated:

ಬೆಂಗಳೂರು: ರಾಜ್ಯದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅವುಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲವಾಗುವ ರೀತಿಯಲ್ಲಿ ವೈಜ್ಞಾನಿಕ ತನಿಖೆ ನಡೆಸುವುದಕ್ಕೆ ತಾಲ್ಲೂಕುವಾರು ‘ಜಂಟಿ ಸಮಿತಿ’ ರಚಿಸಲಾಗುತ್ತಿದೆ.

ದೇಶದಲ್ಲಿ ದಿನದಿಂದ ದಿನಕ್ಕೆ ವಾಹನ ನೋಂದಣಿ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ರಾಜ್ಯವೂ ಅದಕ್ಕೆ ಹೊರತಾಗಿಲ್ಲ. ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾಗೂ ಇತರೆ ರಸ್ತೆಗಳಲ್ಲಿ ನಿತ್ಯವೂ ಅಪಘಾತಗಳು ಸಂಭವಿಸು
ತ್ತಿದ್ದು, ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಅಪಘಾತಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್‌, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಸಂಬಂಧ ಕಳೆದ ವರ್ಷವೇ ‘ರಸ್ತೆ ಸುರಕ್ಷತಾ ಸಮಿತಿ’ ರಚಿಸಿದೆ. ಅದರ ಸದಸ್ಯರು, ಎಲ್ಲ ರಾಜ್ಯಗಳಲ್ಲಿ ಸಭೆ ನಡೆಸಿ ಅಪಘಾತ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. 

ಅಪಘಾತಗಳ ನಿಯಂತ್ರಣಕ್ಕೆ ವೈಜ್ಞಾನಿಕ ತನಿಖೆ ಅಗತ್ಯವಿರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿರುವ ಸಮಿತಿ, ‘ಮೋಟಾರು ವಾಹನಗಳ ಕಾಯ್ದೆ 1988ರ ಪರಿಚ್ಛೇದ 135ರನ್ವಯ ಗಂಭೀರ ಗಾಯ ಅಥವಾ ಮರಣ ಸಂಭವಿಸಿದಂತಹ ಪ್ರತಿ ರಸ್ತೆ ಅಪಘಾತದ ಸ್ಥಳವನ್ನು ಲೋಕೋಪಯೋಗಿ, ಪೊಲೀಸ್ ಹಾಗೂ ಸಾರಿಗೆ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡ ತಂಡವೇ ವೈಜ್ಞಾನಿಕವಾಗಿ ತನಿಖೆ ಮಾಡಬೇಕು’ ಎಂದು ನಿರ್ದೇಶನ ನೀಡಿದೆ.

ಅದರ ಪಾಲನೆ ಸಂಬಂಧ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ‘ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ’ದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ತಾಲ್ಲೂಕುವಾರು ಸಮಿತಿ: ‘ಅಪಘಾತಗಳ ವೈಜ್ಞಾನಿಕ ತನಿಖೆಗಾಗಿ ಜಿಲ್ಲಾವಾರುಹಾಗೂ ತಾಲ್ಲೂಕುವಾರು ಜಂಟಿ ಸಮಿತಿ ರಚನೆ ಮಾಡುವಂತೆ ಆಯಾ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಜಿಲ್ಲಾಧಿಕಾರಿ, ಎಸ್‌.ಪಿ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಜಿಲ್ಲಾ ಕಾರ್ಯಪಾಲಕ ಎಂಜಿನಿಯರ್ ಅವರಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಹಲವು ತಾಲ್ಲೂಕುಗಳಲ್ಲಿ ಸಮಿತಿಗಳು ಕಾರ್ಯಾರಂಭ ಮಾಡಿವೆ’ ಎಂದು ‘ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ’ ಸದಸ್ಯರೊಬ್ಬರು ‘ಪ್ರಜಾವಾಣಿ‘ಗೆ ತಿಳಿಸಿದರು.

‘ಇಷ್ಟುದಿನ ಪೊಲೀಸರು ಮಾತ್ರ ಅಪಘಾತ ಸ್ಥಳದ ಪರಿಶೀಲನೆ ನಡೆಸುತ್ತಿದ್ದರು. ಸಾರಿಗೆ ಅಧಿಕಾರಿಗಳ ಸಹಾಯ ಪಡೆಯುತ್ತಿದ್ದರು. ಈ ಬಾರಿ ಪಿಡಬ್ಲ್ಯುಡಿ ಅಧಿಕಾರಿಗಳನ್ನೂ ಬಳಸಿಕೊಳ್ಳಲಾಗುತ್ತಿದೆ. ಈ ಸಮಿತಿಯಿಂದ ‘ಬ್ಲಾಕ್ ಸ್ಪಾಟ್’ ಗುರುತಿಸಿ, ಆ ರಸ್ತೆಯನ್ನು ದುರಸ್ತಿ ಮಾಡಲು ಅನುಕೂಲವಾಗ
ಲಿದೆ’ ಎಂದು ಹೇಳಿದರು.

ಪ್ರಾಧಿಕಾರ ನೀಡಿರುವ ಸೂಚನೆ

lಲೋಕೋಪಯೋಗಿ, ಪೊಲೀಸ್ ಹಾಗೂ ಸಾರಿಗೆ ಇಲಾಖೆಯ ಪ್ರತಿನಿಧಿಗಳನ್ನು ಒಳಗೊಂಡ ಜಿಲ್ಲಾ ಹಾಗೂ ತಾಲ್ಲೂಕುವಾರು ತನಿಖಾ ತಂಡ ರಚಿಸಬೇಕು.

lಗಂಭೀರ ಗಾಯ ಹಾಗೂ ಮರಣ ಸಂಭವಿಸಿದ ಅಪಘಾತದ ಸ್ಥಳವನ್ನು ವೈಜ್ಞಾನಿಕವಾಗಿ ತನಿಖೆ ಮಾಡಬೇಕು

lಪ್ರತಿ ಅಪಘಾತಕ್ಕೂ ಕಾರಣಗಳನ್ನು ದೃಢಪಡಿಸಿ, ‘ಬ್ಲಾಕ್ ಸ್ಪಾಟ್’ ಸ್ಥಳಗಳನ್ನು ದುರಸ್ತಿ ಮಾಡಬೇಕು. ಮೊದಲಿನ ಹಾಗೂ ನಂತರದ ಛಾಯಾಚಿತ್ರವನ್ನು ದಾಖಲಿಸಬೇಕು

lಬ್ಲಾಕ್ ಸ್ಪಾಟ್‌ಗಳನ್ನು ದುರಸ್ತಿ ಮಾಡಿ, ಅಪಘಾತ ಪ್ರಮಾಣ ಕಡಿಮೆಯಾದ ಬಗ್ಗೆ ಮಾಹಿತಿಯನ್ನು ಸಿದ್ಧಪಡಿಸಿ, ‘ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ’ಯ ಸಭೆಯಲ್ಲಿ ಮಂಡಿಸಬೇಕು. ಆ ಮಾಹಿತಿಯನ್ನೇ ‘ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ’ಕ್ಕೂ ಸಲ್ಲಿಸಬೇಕು

Post Comments (+)