ಶನಿವಾರ, ಡಿಸೆಂಬರ್ 14, 2019
22 °C
ಸಂಚಾರ ಪೊಲೀಸರಿಂದ ಆರೋಪಿ ಬಂಧನ

ಬಚ್ಚಹಳ್ಳಿ ಗೇಟ್‌ ಬಳಿಯ ಕೊಲೆ ಪ್ರಕರಣ: ಪತ್ನಿ ಕೊಂದು ಅಪಘಾತದ ನಾಟಕವಾಡಿದ್ದ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತನ್ನ ಜೊತೆ ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸಲಿಲ್ಲವೆಂಬ ಕಾರಣಕ್ಕೆ ಪತ್ನಿಯನ್ನು ಕೊಂದು ಅಪಘಾತದ ನಾಟಕವಾಡಿದ್ದ ತೇಜ್‌ಸಿಂಗ್ (27) ಎಂಬಾತನ ಕೃತ್ಯ, ಪೊಲೀಸರ ಚುರುಕಿನ ತನಿಖೆಯಿಂದ ಬಯಲಾಗಿದೆ.

ಬಳ್ಳಾರಿ ರಸ್ತೆಯ ಬಚ್ಚಹಳ್ಳಿ ಗೇಟ್‌ ಬಳಿ ನಡೆದಿದ್ದ ಕೊಲೆ ಪ್ರಕರಣ ಭೇದಿಸಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರ ಠಾಣೆ ಪೊಲೀಸರು, ಆರೋಪಿ ತೇಜ್‌ಸಿಂಗ್‌ನನ್ನು ಬಂಧಿಸಿದ್ದಾರೆ.

‘ರಾಜಸ್ಥಾನದ ಜಲೋರ್ ಜಿಲ್ಲೆಯ ತೇಜ್‌ಸಿಂಗ್, ನಗರದಲ್ಲಿ ಚಿನ್ನಾಭರಣ ವ್ಯಾಪಾರ ಮಾಡುತ್ತಿದ್ದರು. ತನ್ನದೇ ಊರಿನ ಗಟ್ಟು ಕಂವಾರ್ (27) ಅವರನ್ನು ಮದುವೆ ಆಗಿದ್ದರು. ದಂಪತಿಯು ಹುಣಸಮಾರನಹಳ್ಳಿ ಬಿ.ವಿ.ರಾಮನ್ ನಗರದಲ್ಲಿ ವಾಸವಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಅಪಘಾತದ ದೂರು: ‘ನ. 16ರಂದು ರಾತ್ರಿ ಬಚ್ಚಹಳ್ಳಿ ಗೇಟ್‌ ಬಳಿ ಅಪಘಾತ ನಡೆದಿರುವುದಾಗಿ ಮಾಹಿತಿ ಬಂದಿತ್ತು. ಸ್ಥಳಕ್ಕೆ ಹೋದಾಗ ಗಟ್ಟು ಕಂವಾರ್ ಮೃತಪಟ್ಟಿದ್ದರು’ ಎಂದು ಅಧಿಕಾರಿ ಹೇಳಿದರು.

‘ಘಟನಾ ಸ್ಥಳದಲ್ಲೇ ಪತಿ ತೇಜ್‌ಸಿಂಗ್‌ ಇದ್ದರು. ‘ಪತ್ನಿ ಜೊತೆ ನಂದಿಬೆಟ್ಟಕ್ಕೆ ಹೊರಟಿದ್ದೆ. ಮಾರ್ಗಮಧ್ಯೆಯೇ ಅಪಘಾತವಾಯಿತು. ಪತ್ನಿ ಮೃತಪಟ್ಟರು. ನನಗೂ ಗಾಯಗಳಾಗಿವೆ’ ಎಂದು ಆತ ಹೇಳಿಕೆ ನೀಡಿದ್ದ. ಅದರ ಆಧಾರದಲ್ಲೇ ಇದೊಂದು ಅಪಘಾತವಿರಬಹುದೆಂದು ಭಾವಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು’ ಎಂದರು.

‘ಗಟ್ಟು ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ತಲೆಗೆ ತೀವ್ರ ಗಾಯವಾಗಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಅಭಿಪ್ರಾಯಪಟ್ಟಿದ್ದರು. ಅವಾಗಲೇ ಪತಿ ತೇಜ್‌ಸಿಂಗ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡ’ ಎಂದು ಅಧಿಕಾರಿ ತಿಳಿಸಿದರು.

ಕಾರಿನಿಂದ ತಳ್ಳಿ ಕೊಲೆ: ‘ನನ್ನ ಹಾಗೂ ಪತ್ನಿ ನಡುವೆ ಹೊಂದಾಣಿಕೆ ಇರಲಿಲ್ಲ. ಎಲ್ಲದಕ್ಕೂ ಜಗಳ ಮಾಡುತ್ತಿದ್ದಳು. ಅದೇ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿದೆ’ ಎಂದು ತೇಜ್‌ಸಿಂಗ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

‘ಗುರುಪ್ರಿತ್ ಸಿಂಗ್ ಹೆಸರಿನಲ್ಲಿ ಬಾಡಿಗೆ ಕಾರು ಬುಕ್ಕಿಂಗ್ ಮಾಡಿದ್ದೆ. ಹೋಟೆಲ್‌ನಲ್ಲಿ ಊಟ ಮಾಡಿಕೊಂಡು ನಂದಿಬೆಟ್ಟಕ್ಕೆ ಹೋಗಿ ಬರೋಣವೆಂದು ಹೇಳಿ ಅದೇ ಕಾರಿನಲ್ಲಿ ಪತ್ನಿ ಕರೆದುಕೊಂಡು ಹೊರಟಿದ್ದೆ. ಬಚ್ಚಹಳ್ಳಿ ಗೇಟ್ ಬಳಿ ಪತ್ನಿಯನ್ನು ಕಾರಿನಿಂದ ತಳ್ಳಿದೆ. ನಂತರ, ಆಕೆಯ ತಲೆ ಮೇಲೆ ಕಾರು ಚಲಾಯಿಸಿ ಕೊಲೆ ಮಾಡಿದೆ’ ಎಂಬುದಾಗಿ ಆತ ಹೇಳಿಕೆಯಲ್ಲಿ ಉಲ್ಲೇಖಿಸಿರುವುದಾಗಿ ಹಿರಿಯ ಅಧಿಕಾರಿ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು