ಭಾನುವಾರ, ಜನವರಿ 23, 2022
27 °C

ಬೆಂಗಳೂರು ನೈಸ್ ರಸ್ತೆಯಲ್ಲಿ ಅಪಘಾತ: ನಾಲ್ವರು ಸಾವು

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೈಸ್‌ ರಸ್ತೆಯಲ್ಲಿ ಶುಕ್ರವಾರ ರಾತ್ರಿ ನಡೆದ ಸರಣಿ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಮಾರಸ್ವಾಮಿ ಲೇಔಟ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮೊಹಮ್ಮದ್‌ ಫಾದಿಲ್‌ (25), ಅಭಿಲಾಷ್‌ (25), ಜೀನಾ (26) ಹಾಗೂ ಶಿಲ್ಪಾ (30) ಮೃತಪಟ್ಟವರು. ಕೇರಳದವರಾದ ಇವರು ಬೊಮ್ಮನಹಳ್ಳಿಯಲ್ಲಿ ವಾಸವಿದ್ದರು. ಜೀನಾ, ಅಭಿಲಾಷ್‌ ಹಾಗೂ ಫಾದಿಲ್‌ ಸಾಫ್ಟ್‌ವೇರ್‌ ಕಂಪನಿ ಉದ್ಯೋಗಿಗಳಾಗಿದ್ದರು. ಶಿಲ್ಪಾ ಅವರು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

‘ಮೃತರೆಲ್ಲರೂ ಕೇರಳದ ನೋಂದಣಿ ಸಂಖ್ಯೆ ಹೊಂದಿದ್ದ ವ್ಯಾಗನ್ ಆರ್‌ ಕಾರಿನಲ್ಲಿ ನೈಸ್‌ ರಸ್ತೆಯ ಪುರವಾಂಕರ ವಸತಿ ಸಮುಚ್ಚಯದ ಬಳಿ ಸಾಗುತ್ತಿದ್ದರು. ಈ ವೇಳೆ ತಮಿಳುನಾಡಿನ ನೋಂದಣಿ ಸಂಖ್ಯೆ ಹೊಂದಿದ್ದ ಲಾರಿಯೊಂದು ಅತಿ ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು ಒಳಗಿದ್ದ ನಾಲ್ವರೂ ಮೃತಪಟ್ಟಿದ್ದಾರೆ’ ಎಂದು ತಿಳಿಸಿದ್ದಾರೆ.

‘ಈ ಅಪಘಾತದಿಂದಾಗಿ ಅಕ್ಕಪಕ್ಕದಲ್ಲಿ ಸಾಗುತ್ತಿದ್ದ ಕ್ವಾಲಿಸ್‌ ಹಾಗೂ ಸ್ವಿಪ್ಟ್‌ ಕಾರು ಹಾಗೂ ಮೂರು ಕಂಟೈನರ್‌ ವಾಹನಗಳಿಗೂ ಹಾನಿಯಾಗಿದೆ. ಕ್ವಾಲಿಸ್‌ ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಸ್ವಿಫ್ಟ್ ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲೇ ಲಾರಿಯನ್ನು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಆತನಿಗಾಗಿ ಶೋಧ ಆರಂಭಿಸಿದ್ದೇವೆ’ ಎಂದು ವಿವರಿಸಿದ್ದಾರೆ.

ಯಲಹಂಕದಲ್ಲಿ ಸ್ಕೂಟರ್‌ ಸವಾರ ಸಾವು

ಸ್ಕೂಟರ್‌ನಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬೆಟ್ಟ ಹಲಸೂರು ನಿವಾಸಿಯಾಗಿರುವ ಉದಯ್‌ಕುಮಾರ್‌ (58) ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ರೈತ ಸಂತೆ ಬಳಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ವಾಹನವೊಂದು ಡಿಕ್ಕಿಯಾಗಿತ್ತು. ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಆತನಿಗಾಗಿ ಹುಡುಕುತ್ತಿದ್ದೇವೆ’ ಎಂದು ಪೊಲೀಸರು ಹೇಳಿದ್ದಾರೆ.

ಬೈಕ್‌ಗಳ ನಡುವೆ ಡಿಕ್ಕಿ: ಸವಾರ ಸಾವು

ಬೈಕ್‌ಗಳ ನಡುವಣ ಮುಖಾಮುಖಿ ಡಿಕ್ಕಿಯಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಬಾಣಸವಾಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಜೇವರ್ಗಿಸ್‌ ಮೃತಪಟ್ಟವರು. ಬಾಬೂಸಾಪಾಳ್ಯ ನಿವಾಸಿಯಾಗಿದ್ದ ಇವರು ಟಿ.ಸಿ.ಪಾಳ್ಯದಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ. ಶುಕ್ರವಾರ ರಾತ್ರಿ 9.30ರ ಸುಮಾರಿಗೆ ಟಿ.ಸಿ.‍ಪಾಳ್ಯದಿಂದ ಮನೆಗೆ ಬೈಕ್‌ನಲ್ಲಿ ಬರುತ್ತಿದ್ದರು. ಹೊರಮಾವು ಬಳಿಯ ಅಗ್ರಹಾರ ವೃತ್ತದಲ್ಲಿ ವೇಗವಾಗಿ ಬಂದ ಬೈಕ್‌ವೊಂದು ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಬೈಕ್‌ನೊಂದಿಗೆ ಸವಾರ ಪರಾರಿಯಾಗಿದ್ದೇನೆ’ ಎಂದು ಪೊಲೀಸರು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು