ಪ್ರತ್ಯೇಕ ಅಪಘಾತ; ಆರು ಮಂದಿ ದುರ್ಮರಣ

7

ಪ್ರತ್ಯೇಕ ಅಪಘಾತ; ಆರು ಮಂದಿ ದುರ್ಮರಣ

Published:
Updated:
Deccan Herald

ಬೆಂಗಳೂರು/ಹೊಸಕೋಟೆ: ನಗರದ ನಾಲ್ಕು ಕಡೆಗಳಲ್ಲಿ ಗುರುವಾರ ಹಾಗೂ ಶುಕ್ರವಾರ ಸಂಭವಿಸಿದ ಅಪಘಾತಗಳಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.

ಹೊಸಕೋಟೆ ಸಮೀಪದ ವಾಣಿಜ್ಯ ತೆರಿಗೆ ಕಚೇರಿ ಬಳಿ ಸಂಭವಿಸಿದ ಅಪಘಾತದಲ್ಲಿ ಸುಬೇಂದ್ ಬೇಜ್ (29) ಹಾಗೂ ಅಮರನಾಥ್ ಸಿಂಗ್ (26) ಮೃತಪಟ್ಟಿದ್ದಾರೆ. 

ಬೆಂಗಳೂರಿನ ಉದಯ ನಗರದ ಸುಬೇಂದ್ ಬೇಜ್ ಹಾಗೂ ಕಾಡುಗೋಡಿಯ ಅಮರನಾಥ್ ಸಿಂಗ್, ಸ್ನೇಹಿತರ ಜೊತೆಯಲ್ಲಿ ಕೋಲಾರಕ್ಕೆ ಕಾರಿನಲ್ಲಿ ಹೊರಟಿದ್ದರು. ಬೈಕ್‌ಗೆ ಗುದ್ದಿದ್ದ ಅವರ ಕಾರು, ನಂತರ ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ ಅವಘಡ ಸಂಭವಿಸಿದೆ.

ಕಾರಿನಲ್ಲಿದ್ದ ಎ. ನಾರಾಯಣಪುರದ ಜಸ್ವಂತ್, ಔಷಧ ಮಾರಾಟ ಪ್ರತಿನಿಧಿ ಸಂದೀಪ್ (27) ಹಾಗೂ ಬೈಕ್ ಸವಾರ ಮಂಜುನಾಥ್ ತೀವ್ರವಾಗಿ ಗಾಯಗೊಂಡಿದ್ದಾರೆ. ಮೃತ ಅಮರನಾಥ, ನಿವೃತ್ತ ಪಬ್ಲಿಕ್ ಪ್ರಾಸಿಕ್ಯೂಟರ್ ಭವಾನಿ ಸಿಂಗ್ ಅವರ ಮಗ ಎಂದು ಹೊಸಕೋಟೆ ಪೊಲೀಸರು ತಿಳಿಸಿದರು.

ಇನ್ನೊಂದು ಪ್ರಕರಣದಲ್ಲಿ ಹೆದ್ದಾರಿಯ ಮೆಡ್ರಿಚ್ ಕಾರ್ಖಾನೆ ಮುಂಭಾಗ ಬೈಕ್‌ಗೆ ಲಾರಿ ಗುದ್ದಿದ್ದರಿಂದ ಸವಾರ ಹೊಸಕೋಟೆ ತಾಲ್ಲೂಕು ಬೈಲನರಸಾಪುರ ಗ್ರಾಮದ ಸೈಯದ್ ಅರ್ಬಾ‌ಜ್ (18) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರಿಗೆ ಹೋಗಿದ್ದ ಅರ್ಬಾ‌ಜ್, ತಮ್ಮ ಗ್ರಾಮಕ್ಕೆ ವಾಪಸ್‌ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಹೇಳಿದರು.

ಮರಕ್ಕೆ ಗುದ್ದಿದ ಬೈಕ್:  ಜಾಲಹಳ್ಳಿ ಸಮೀಪದ ಬಾಹುಬಲಿ ನಗರದ 4ನೇ ಅಡ್ಡರಸ್ತೆಯಲ್ಲಿ ಮರಕ್ಕೆ ಬೈಕ್‌ ಗುದ್ದಿದ್ದರಿಂದ ಸವಾರ ವಿನಾಯಕ (21) ಸ್ಥಳದಲ್ಲೇ ಅಸುನೀಗಿದ್ದಾರೆ.

ಸ್ಥಳೀಯ ನಿವಾಸಿಯಾದ ಅವರು, ಕಾರು ಸ್ವಚ್ಛಗೊಳಿಸುವ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಪಲ್ಸರ್ ಬೈಕ್‌ನಲ್ಲಿ ಗುರುವಾರ ರಾತ್ರಿ 12.45 ಗಂಟೆ ಸುಮಾರಿಗೆ ಮನೆಗೆ ಹೊರಟಿದ್ದ ವೇಳೆಯಲ್ಲೇ ಈ ಅವಘಡ ಸಂಭವಿಸಿದೆ. 

ಮತ್ತೊಂದು ಪ್ರಕರಣದಲ್ಲಿ ಮೈಸೂರು ರಸ್ತೆಯ ಕೊಮ್ಮಘಟ್ಟ ಗೇಟ್‌ ಬಳಿ ಕಾರು ಉರುಳಿಬಿದ್ದಿದ್ದರಿಂದ ಭರತ್ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಉತ್ತರಹಳ್ಳಿ ನಿವಾಸಿಯಾದ ಭರತ್, ಮಾಗಡಿ ರಸ್ತೆಯಲ್ಲಿ ಕೋಳಿ ಫಾರ್ಮ್‌ ನಡೆಸುತ್ತಿದ್ದರು. ಶುಕ್ರವಾರ ನಸುಕಿನ 3.15 ಗಂಟೆ ಸುಮಾರಿಗೆ ಕಾರಿನಲ್ಲಿ ಮನೆಗೆ ಹೊರಟಿದ್ದ ವೇಳೆಯಲ್ಲಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಉದಯ್ ಹಾಗೂ ಜಯಂತ್ ಗಾಯಗೊಂಡಿದ್ದಾರೆ ಎಂದು ಕೆಂಗೇರಿ ಸಂಚಾರ ಪೊಲೀಸರು ಹೇಳಿದರು.

ಲಾರಿ ಗುದ್ದಿ ಸವಾರ ಸಾವು: ದೇವನಹಳ್ಳಿ ಸಮೀಪದ ನಲ್ಲೂರು ಬಳಿ ಬೈಕ್‌ಗೆ ಲಾರಿ ಗುದ್ದಿದ್ದರಿಂದ ಸವಾರ ನರಸಿಂಹಮೂರ್ತಿ (40) ಮೃತಪಟ್ಟಿದ್ದಾರೆ.

ಸೌತೇಗೌಡನಹಳ್ಳಿ ನಿವಾಸಿಯಾದ ಅವರು, ಸೂಲಿಬೆಲೆ ಕಡೆಯಿಂದ ಹೊಸಕೋಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ರಾತ್ರಿ 7.15 ಗಂಟೆಗೆ ಹೊರಟಿದ್ದರು. ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದರು ಎಂದು ದೇವನಹಳ್ಳಿ ಸಂಚಾರ ಪೊಲೀಸರು ಹೇಳಿದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !