ಬೆಂಗಳೂರು: ಚಿಕ್ಕಬಾಣಾವರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವರಾಮ ಕಾರಂತ ಬಡಾವಣೆಯ ಸೆಕ್ಟರ್ 5ರಲ್ಲಿ ನಡೆಯುತ್ತಿದ್ದ ಕಾಮಗಾರಿ ಸ್ಥಳದಲ್ಲಿ ಪೈಪ್‌ಗಳನ್ನು ಇಳಿಸಿ ಲಾರಿಯನ್ನು ಹಿಂದಕ್ಕೆ ತೆಗೆದುಕೊಳ್ಳುವ ವೇಳೆ ಸೆಕ್ಯೂರಿಟಿ ಗಾರ್ಡ್‌ಗೆ ಡಿಕ್ಕಿಯಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ಧಾರೆ.
ಬಿಹಾರದ ರಮಾನಾಥ್ ಸಿಂಗ್(49) ಮೃತಪಟ್ಟ ವ್ಯಕ್ತಿ.
ಭಾನುವಾರ ರಾತ್ರಿ 7.30ರ ಸುಮಾರಿಗೆ ಪೈಪ್‌ಗಳನ್ನು ತುಂಬಿಕೊಂಡು ಬಂದಿದ್ದ ಲಾರಿ ಚಾಲಕ, ಪೈಪ್‌ಗಳನ್ನು ಇಳಿಸಿ ವಾಪಸ್ ತೆರಳಲು ಮುಂದಾಗಿದ್ದರು. ಲಾರಿ ಹಿಂದಕ್ಕೆ ಚಲಿಸುತ್ತಿದ್ದ ವೇಳೆ ಡಿಕ್ಕಿಯಾಗಿದೆ. ಸೆಕ್ಯೂರಿಟಿ ಗಾರ್ಡ್ ಗಂಭೀರವಾಗಿ ಗಾಯಗೊಂಡಿದ್ದರು. ಸಮೀಪದ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ಧಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಲಾರಿ ಬಿಟ್ಟು ಪರಾರಿಯಾಗಿರುವ ಚಾಲಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಸಂಚಾರ ಠಾಣೆ ಪೊಲೀಸರು ಮಾಹಿತಿ ನೀಡಿದರು.
ಚಿಕ್ಕಬಾಣವಾರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿ ಸಾವು: ಕೆಂಪೇಗೌಡ ಬಸ್ ನಿಲ್ದಾಣದ ಸಮೀಪ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ಧಾರೆ. ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಮೃತ ವ್ಯಕ್ತಿಗೆ 25ರಿಂದ 30 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ.
‘ಕೆಎಸ್ಆರ್‌ಟಿಸಿ ಟರ್ಮಿನಲ್ 2–ಎನಿಂದ ಹೊರಹೋಗುವ ಮಾರ್ಗದಲ್ಲಿ ಗಣೇಶನ ದೇವಸ್ಥಾನ ಬಳಿ ಅಪಘಾತ ಸಂಭವಿಸಿದೆ. ವಾಹನವೊಂದು ಡಿಕ್ಕಿ ಹೊಡೆದು ತೆರಳಿದೆ. ಕೆಳಕ್ಕೆ ಬಿದ್ದಿದ್ದ ಆ ವ್ಯಕ್ತಿಯ ಮೇಲೆ ಕೆಎಸ್‌ಆರ್‌ಟಿಸಿ ಬಸ್‌ನ ಚಕ್ರ ಹರಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ’ ಎಂದು ಸಂಚಾರ ಠಾಣೆ ಪೊಲೀಸರು ಹೇಳಿದರು.
ಮೃತ ವ್ಯಕ್ತಿಯ ಜೇಬಿನಲ್ಲಿ ಯಾವುದೇ ಮೊಬೈಲ್, ಗುರುತಿನ ಚೀಟಿ ದೊರೆತಿಲ್ಲ ಎಂದು ಪೊಲೀಸರು ತಿಳಿಸಿದರು.
ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.