ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಕಳ್ಳತನ ಜಾಲ ಭೇದಿಸಿದ ಪೊಲೀಸರು: 150 ಮೊಬೈಲ್ ಜಪ್ತಿ

ಪರ್ಸ್, ಮೊಬೈಲ್ ಕದ್ದು ಆಟೊದಲ್ಲಿ ಪರಾರಿ
Last Updated 14 ಜನವರಿ 2023, 20:13 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಸಂಚರಿಸಿ ಪರ್ಸ್ ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿದ್ದ ಜಾಲ ಭೇದಿಸಿರುವ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು, ಏಳು ಆರೋಪಿಗಳನ್ನು ಬಂಧಿಸಿದ್ದಾರೆ.

‘ಸುಭಾಷ್‌ನಗರದ ಜಾಫರ್ ಸಿದ್ದಿಕ್ (26), ಬೇಗೂರು ಬೋಳಿಗುಡ್ಡದ ಸೈಯದ್ ಅಖಿಲ್ ಅಲಿಯಾಸ್ ಸಮೀರ್ (40), ಹಳೇಗುಡ್ಡದಹಳ್ಳಿಯ ರೆಹಮಾನ್ ಶರೀಫ್ (42), ಶಫಿಕ್ ಅಹಮ್ಮದ್ ಅಲಿಯಾಸ್ ಮೌಲಾ (38), ಪಾದರಾಯನಪುರದ ಮುಷ್ತಾಕ್ ಅಹಮ್ಮದ್ (45) ಹಾಗೂ ಪಾರ್ವತಿಪುರದ ಇಮ್ರಾನ್ ಪಾಷಾ (34) ಬಂಧಿತರು. ಮತ್ತಷ್ಟು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ತನಿಖೆ ಮುಂದುವರಿಸಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಎಂ. ಚಂದ್ರಶೇಖರ್ ಶನಿವಾರ ‘ಪತ್ರಿಕಾಗೋಷ್ಠಿ‘ಯಲ್ಲಿ ತಿಳಿಸಿದರು.

‘ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಜಾಫರ್ ಹಾಗೂ ಸೈಯದ್, ತಮ್ಮದೇ ವ್ಯವಸ್ಥಿತ ಜಾಲ ರೂಪಿಸಿಕೊಂಡು ಕೃತ್ಯ ಎಸಗುತ್ತಿದ್ದರು. ಯಾರಾದರೂ ಬೆನ್ನಟ್ಟಿದರೆ ಅವರಿಂದ ತಪ್ಪಿಸಿಕೊಂಡು ಹೋಗುವ ಎಲ್ಲ ದಾರಿಗಳನ್ನೂ ಕಂಡುಕೊಂಡಿದ್ದರು. ಈ ಜಾಲದಿಂದ ಸದ್ಯ ₹ 25 ಲಕ್ಷ ಮೌಲ್ಯದ 150 ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಹೇಳಿದರು.

ಮೂರು ವರ್ಷದಿಂದ ಕಳ್ಳತನ: ‘ಜಾಫರ್ ಹಾಗೂ ಸೈಯದ್ ಮೂರು ವರ್ಷಗಳಿಂದ ಕಳ್ಳತನ ಮಾಡುತ್ತಿದ್ದರು. ಇವರಿಬ್ಬರ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇತ್ತೀಚೆಗೆ ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್ ಕಳ್ಳತನವಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡಾಗಲೇ ಆರೋಪಿಗಳು ಸಿಕ್ಕಿಬಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಜನರಿಂದ ತುಂಬಿರುತ್ತಿದ್ದ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಆರೋಪಿಗಳು, ಪರ್ಸ್ ಹಾಗೂ ಮೊಬೈಲ್ ಕದಿಯುತ್ತಿದ್ದರು. ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ನಿರ್ಜನ ಪ್ರದೇಶಗಳಲ್ಲಿ ಪರ್ಸ್ ಬಿಸಾಡುತ್ತಿದ್ದರು. ಮೊಬೈಲ್‌ಗಳನ್ನು ಮಧ್ಯವರ್ತಿಗಳ ಮೂಲಕ ಮಾರಿಸಿ ಹಣ ಸಂಪಾದಿಸುತ್ತಿದ್ದರು’ ಎಂದು
ಹೇಳಿದರು.

‘ಜಾಫರ್, ಸೈಯದ್ ಎಸಗುತ್ತಿದ್ದ ಕೃತ್ಯಕ್ಕೆ ರೆಹಮಾನ್ ಶರೀಫ್, ಶಫಿಕ್ ಅಹಮ್ಮದ್, ಮುಸ್ತಾಕ್ ಅಹಮ್ಮದ್, ಇಮ್ರಾನ್ ಪಾಷಾ ಹಾಗೂ ಇತರರು ಸಹಕಾರ ನೀಡುತ್ತಿದ್ದರು’ ಎಂದು ತಿಳಿಸಿದರು.

ಸಿನಿಮೀಯ ರೀತಿಯಲ್ಲಿ ಪರಾರಿ: ‘ಸೈಯದ್ ಹಾಗೂ ಜಾಫರ್ ಕಳ್ಳತನಕ್ಕೆಂದು ಬಸ್‌ ಏರುತ್ತಿದ್ದರು. ಇತರೆ ಆರೋಪಿಗಳು ಆಟೊದಲ್ಲಿ ಬಸ್‌ ಹಿಂಬಾಲಿಸುತ್ತಿದ್ದರು. ಕಳ್ಳತನದ ನಂತರ ಬಸ್ಸಿನಿಂದ ಇಳಿಯುತ್ತಿದ್ದ ಆರೋಪಿಗಳು, ಆಟೊದಲ್ಲಿ ಹತ್ತಿ ಸಿನಿಮೀಯ ರೀತಿಯಲ್ಲಿ ಸ್ಥಳದಿಂದ ಪರಾರಿಯಾಗುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಕೆಲ ಪ್ರಯಾಣಿಕರು ಆರೋಪಿಗಳನ್ನು ಬೆನ್ನಟ್ಟಲು ಯತ್ನಿಸಿದ್ದರು. ಅವರಿಂದ ತಪ್ಪಿಸಿಕೊಂಡಿದ್ದ ಆರೋಪಿಗಳು, ಆಟೊದಿಂದ ಆಟೊ ಏರಿ ಸ್ಥಳದಿಂದ ಪರಾರಿಯಾಗಿದ್ದ ಬಗ್ಗೆಯೂ ಮಾಹಿತಿ ಇದೆ’ ಎಂದು ತಿಳಿಸಿದರು.

‘ಕದ್ದ ಮೊಬೈಲ್‌ಗಳನ್ನು ಸಾಮಾಜಿಕ ಮಾಧ್ಯಮ ಹಾಗೂ ಜಾಲತಾಣಗಳ ಮೂಲಕ ಮಾರುತ್ತಿದ್ದರೆಂದು ಗೊತ್ತಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳು ಸಿಕ್ಕ ಬಳಿಕವೇ ಮತ್ತಷ್ಟು ಮಾಹಿತಿ ಲಭ್ಯವಾಗಿದೆ’ ಎಂ‌ದು ಹೇಳಿದರು.

‘ಮೊಬೈಲ್ ಮಾಲೀಕರಿಗಾಗಿ ಹುಡುಕಾಟ’
‘ಆರೋಪಿಗಳಿಂದ ಜಪ್ತಿ ಮಾಡಲಾದ 150 ಮೊಬೈಲ್‌ಗಳ ಪೈಕಿ ಬಹುತೇಕ ಮೊಬೈಲ್‌ಗಳ ಮಾಲೀಕರು ಯಾರೆಂಬುದು ಗೊತ್ತಾಗಿಲ್ಲ. ಮೊಬೈಲ್ ಜಪ್ತಿ ಬಗ್ಗೆ ವಿವಿಧ ಠಾಣೆಗಳಿಗೆ ಮಾಹಿತಿ ಕಳುಹಿಸಲಾಗಿದೆ. ಐಎಂಇಐ ಸಂಖ್ಯೆ ಆಧರಿಸಿ ಮಾಲೀಕರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT