ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಾಟ: ಐವರ ಬಂಧನ

ವಿದ್ಯಾರಣ್ಯಪುರ ಪೊಲೀಸರಿಂದ ಆರೋಪಿಗಳ ಸೆರೆ
Last Updated 8 ಜೂನ್ 2022, 20:21 IST
ಅಕ್ಷರ ಗಾತ್ರ

ಬೆಂಗಳೂರು: ನಿವೇಶನಗಳಿಗೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ, ಹೆಸರುಗಳನ್ನು ಬದಲಿಸಿಕೊಂಡು ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ ಐದು ಮಂದಿಯನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರೇಣುಗೋಪಾಲ್ (49), ಗೌರಮ್ಮ (48), ಶಂಕರ್ (44), ಎಂ. ಪ್ರಕಾಶ್ (50), ಶಾಂತರಾಜು (43) ಬಂಧಿತರು. ಬಂಧಿತರಿಂದ ನಕಲಿ ಆಧಾರ್‌ ಕಾರ್ಡ್, ಪಾನ್‍ಕಾರ್ಡ್, ಬ್ಯಾಂಕ್ ಪಾಸ್‍ಬುಕ್‍ಗಳ ನಕಲಿ ಪ್ರತಿಗಳು ಹಾಗೂ ನೋಂದಾಯಿತ ಕಾಗದ ಪತ್ರಗಳ ನಕಲು ಪ್ರತಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಯಲಹಂಕ ಹೋಬಳಿ ಚಿಕ್ಕಬೆಟ್ಟಹಳ್ಳಿ ಗ್ರಾಮದ ಸರ್ವೆ ನಂಬರ್‌ 27/1ರಲ್ಲಿ ವಿಂಗಡಿಸಿರುವ ಶ್ರೀ ಸಾಯಿ ಲೇಔಟ್‍ನಲ್ಲಿರುವ 56ನೇ ಸಂಖ್ಯೆಯ ನಿವೇಶನ ಡಾ.ಎನ್. ಗಿರಿ ದಂಪತಿಯಿಂದ 2015ರಲ್ಲಿ ಕಾರ್ತಿಕ್ ಎಂಬುವವರ ಹೆಸರಿಗೆ ಕ್ರಯಪತ್ರವಾಗಿದೆ. ಇದೇ ಸ್ವತ್ತಿಗೆ ಸಂಬಂಧಿಸಿದಂತೆ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ, ಮಾರಾಟ ಮಾಡಿರುವ ಬಗ್ಗೆ ಕಾರ್ತಿಕ್ ಅವರ ಬಾಮೈದ ರಂಜಿತ್ ಎಂಬುವವರು ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣದ ತನಿಖೆ ಕೈಗೊಂಡಾಗ, ಶಂಕರ್ ಎಂಬಾತ ಟಿ. ನಾಗರಾಜ್ ಎಂದು, ಗೌರಮ್ಮ ಎಂಬಾಕೆ ಟಿ. ಜಯಲಕ್ಷ್ಮಿ ಎಂದು, ರೇಣುಗೋಪಾಲ್ ಎಂಬಾತ ವೇಣುಗೋಪಾಲ್ ಎಂದು ಹೆಸರು ಬದಲಿಸಿಕೊಂಡಿರುವುದು ಗೊತ್ತಾಗಿದೆ. ಕಾರ್ತಿಕ್‌ ಖರೀದಿಸಿದ್ದ ನಿವೇಶನಕ್ಕೆ 2016ರ ಜೂನ್ 6ರಂದು ನಾಗರಾಜ್, ಜಯಲಕ್ಷ್ಮಿ (ನಕಲಿ ಹೆಸರುಗಳು) ಎಂಬುವರು ವೇಣುಗೋಪಾಲ್‍ಗೆ ಈ ದಾನಪತ್ರ ನೀಡಿರುವುದು, ವೇಣುಗೋಪಾಲ್ 2019ರ ಜೂನ್ 17ರಂದು ಭಾಸ್ಕರ್ ಎಂಬುವರಿಗೆ ಕ್ರಯಪತ್ರ ಮಾಡಿಕೊಟ್ಟಿರುವುದು ತನಿಖೆಯಿಂದ ತಿಳಿದುಬಂದಿದೆ. ಭಾಸ್ಕರ್ ಅವರು ವಿ. ಮುನಿಲಕ್ಷ್ಮಮ್ಮ ಮತ್ತು ಎನ್‌. ಕುಶಾಲ್ ಎಂಬುವರಿಗೆ 2020ರ ಆಗಸ್ಟ್ 21ರಂದು ಮಾರಾಟ ಮಾಡಿರುವುದೂ ಗೊತ್ತಾಗಿದೆ.

ಪ್ರಕರಣದ ತನಿಖೆ ಚುರುಕು ಗೊಳಿಸಿದ ಪೊಲೀಸರು ನಕಲಿ ಹೆಸರಿನ ವೇಣುಗೋಪಾಲ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆತನ ನಿಜವಾದ ಹೆಸರು ರೇಣುಗೋಪಾಲ್ ಎಂದು ಗೊತ್ತಾಗಿದೆ. ಈತ ದಾಸರಹಳ್ಳಿ ಅಗ್ರಹಾರದ ಬಸವೇಶ್ವರನಗರ ಮುಖ್ಯರಸ್ತೆ, 5ನೇ ಮುಖ್ಯರಸ್ತೆಯ 13ನೇ ಕ್ರಾಸ್‍ನಲ್ಲಿ ವಾಸವಾಗಿರುವುದನ್ನು ಪತ್ತೆಹಚ್ಚಿದ ಪೊಲೀಸರು, ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ಪ್ರಮುಖ ಸೂತ್ರದಾರ ಆತನ ಸ್ನೇಹಿತ ಪ್ರಕಾಶ್ ಎಂಬುದು ಗೊತ್ತಾಗಿದೆ.

ರಾಜಾಜಿನಗರ ವೆಸ್ಟ್‌ ಆಫ್ ಕಾರ್ಡ್ ರಸ್ತೆಯ ಇಂಡಸ್ಟ್ರಿಯಲ್ ಟೌನ್‍ನಲ್ಲಿ ವಾಸವಾಗಿದ್ದ ಪ್ರಕಾಶ್ ಆಟೊಕನ್‌ಸಲ್ಟೆಂಟ್‌ ಆಗಿ ಕೆಲಸ ಮಾಡಿಕೊಂಡಿದ್ದ. ಪ್ರಕಾಶ್ ಸ್ನೇಹಿತನಾದ ಶಾಂತರಾಜು ವಿದ್ಯಾರಣ್ಯಪುರದ ಎಎಂಎಸ್ ಲೇಔಟ್‍ನಲ್ಲಿ ವಾಸವಾಗಿದ್ದು, ಸುಮಾರು ವರ್ಷಗಳಿಂದ ಖಾಲಿ ಇರುವ ನಿವೇಶನಗಳನ್ನು ಗುರುತಿಸಿ ಅಕ್ಕಪಕ್ಕದವರಲ್ಲಿ ವಿಚಾರಿಸಿ, ವಾರಸುದಾರರು ದೀರ್ಘಕಾಲದಿಂದ ಜಾಗಕ್ಕೆ ಬರುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದ. ಬಳಿಕ ಉಪ ನೋಂದಣಿ ಕಚೇರಿಗಳಿಂದ ಅಂಥ ನಿವೇಶನಗಳ ನೋಂದಾಯಿತ ಪ್ರತಿಗಳನ್ನು ಪಡೆದು, ನಿವೇಶನ ಮಾಲೀಕರ ಹೆಸರುಗಳ ಜಾಗದಲ್ಲಿ ಅಸಲಿ ವ್ಯಕ್ತಿಗಳ ಬದಲಿಗೆ ನಕಲಿ ವ್ಯಕ್ತಿಗಳನ್ನು ತೋರಿಸಿ ಉಪ ನೋಂದಣಿ ಕಚೇರಿಗಳಲ್ಲಿ ದಾನಪತ್ರ ಮಾಡಿಕೊಂಡು ಸ್ವತ್ತನ್ನು ಅಕ್ರಮವಾಗಿ ಬೇರೆಯವರಿಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದುದು ತನಿಖೆಯಿಂದ ಗೊತ್ತಾಗಿದೆ.

ಕೆಂಗೇರಿ ಪೊಲೀಸ್ ಠಾಣೆವ್ಯಾಪ್ತಿಯ ನಿವೇಶನವೊಂದಕ್ಕೆ ರೇಣುಗೋಪಾಲ್ ಅಲಿಯಾಸ್ ವೇಣುಗೋಪಾಲ್ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಅಕ್ರಮ ಎಸಗಿರುವ ಬಗ್ಗೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ‌ದೆ. ಆರೋಪಿಗಳ ಬಂಧನದಿಂದ ಒಟ್ಟು ಎರಡು ಪ್ರಕರಣಗಳು ಪತ್ತೆಯಾದಂತಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಅನಿಲ್‍ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT