ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಲ್ಲಿರುವುದು 90 ಪರ್ಸೆಂಟ್ ಭ್ರಷ್ಟ ಸರ್ಕಾರ: ಸಿದ್ದರಾಮಯ್ಯ ಆಪಾದನೆ

Last Updated 22 ಫೆಬ್ರುವರಿ 2018, 9:46 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರದಲ್ಲಿರುವುದು 90 ಪರ್ಸೆಂಟ್ ಭ್ರಷ್ಟ ಸರ್ಕಾರ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದವರೆ ಜೈಲಿಗೆ ಹೋಗಿದ್ದಾರೆ. ಸಹರ ಡೈರಿ, ಜೈನ್ ಹವಾಲ ಕೇಸ್‌ಗಳಲ್ಲಿ ಯಾರ ಸಂಕೇತಾಕ್ಷರಗಳಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ನಮ್ಮ ಸರ್ಕಾರವನ್ನು 10 ಪರ್ಸೆಂಟ್ ಎಂದು ಕರೆಯುವವರು ಈ ಬಗ್ಗೆಯೂ ಮಾತನಾಡಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಿಧಾನಸಭೆಯಲ್ಲಿ ಪರೋಕ್ಷವಾಗಿ ಹರಿಹಾಯ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಾಕ್ಷ್ಯ ನೀಡದೆ ಆಪಾದನೆ ಮಾಡಿದರೆ ಅದು ಹಿಟ್ ಅಂಡ್ ರನ್ ಆದಂತಾಗುತ್ತದೆ ಎಂದು ಹೇಳಿದರು.

ವಿಧಾನ ಮಡಲದ ಉಭಯ ಸದನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದ ಮೇಲೆ ಗುರುವಾರ ನಡೆದ ಚರ್ಚೆಗೆ ಸಿದ್ದರಾಮಯ್ಯ ಅವರು ಉತ್ತರ ನೀಡಿದರು. ಉತ್ತರದ ಪೂರ್ಣ ಸಾರ ಇಲ್ಲಿದೆ.

* ‘ಇದು ಹದಿನಾಲ್ಕನೇ ವಿಧಾನಸಭೆಯ ಕೊನೆಯ ಅಧಿವೇಶನ. ಹದಿನೈದನೆ ವಿಧಾನಸಭೆ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ.

* ರಾಜ್ಯಪಾಲರು ತಮ್ಮ ಭಾಷಣದಲ್ಲಿ ಸರ್ಕಾರ ಹೇಳಿದ್ದೇನು, ಮಾಡಿದ್ದೇನು ಎಂಬುದನ್ನು ಹೇಳಿದ್ದಾರೆ. ನಮ್ಮ ಸರ್ಕಾರ ಕಳೆದ ಐದು ವರ್ಷದಲ್ಲಿ ನುಡಿದಂತೆ ನಡೆದಿದೆ. ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದೆ. ಜನರಿಗೂ ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂಬುದು ಮನವರಿಕೆ ಆಗಿದೆ. ಹೀಗಾಗಿ ಆಡಳಿತ ವಿರೋಧಿ ಅಲೆ ಇಲ್ಲ.

* ಜನರು ನಮ್ಮ ಸರ್ಕಾರದ ಬಗ್ಗೆ ಸಮಾಧಾನದಿಂದ ಇದ್ದಾರೆ. ಅವರ ವಿಶ್ವಾಸ ಉಳಿಸಿಕೊಂಡಿದ್ದೇವೆ. ಇದರ ಆಧಾರದ ಮೇಲೆ ಮತ್ತೆ ಅಧಿಕಾರಕ್ಕೆ ಬರುವ ಮಾತು ಹೇಳುತ್ತಿದ್ದೇನೆಯೇ ಹೊರತು ಭ್ರಮೆ ಅಲ್ಲ.

* ವಸ್ತುಸ್ಥಿತಿ ಆಧಾರದ ಮೇಲೆ ಕನಸುಗಳನ್ನು ಕಟ್ಟಬೇಕು. ಅದನ್ನು ನನಸಾಗಿಸಲು ಪ್ರಯತ್ನ ಮಾಡಬೇಕು. ಅದನ್ನು ನಾವು ಐದು ವರ್ಷದಲ್ಲಿ ಮಾಡಿದ್ದೇವೆ.

* ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯ ಮಾಡುವುದು ನಮ್ಮ ಕನಸಾಗಿತ್ತು.  ಅನ್ನಭಾಗ್ಯ ಯೋಜನೆ ಮೂಲಕ ಅದನ್ನು ಸಾಕಾರ ಮಾಡುತ್ತಿದ್ದೇವೆ.

* ಶಾಲಾ ಮಕ್ಕಳಿಗೆ ಹಾಲು, ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಪರಿಣಾಮ ರಾಜ್ಯ ಹಸಿವು ಮುಕ್ತ ಆಗಿದೆ. ಇದಕ್ಕಿಂತ ತೃಪ್ತಿ ಬೇರಿಲ್ಲ. ಹಸಿದು ಬಂದವರಿಗೆ ಅನ್ನ, ಹಾಲು, ಬೆಣ್ಣೆ ನೀಡಬೇಕು ಎಂದು ಸರ್ವಜ್ಞರೆ ಹೇಳಿಲ್ಲವೇ ಇದು ನಮ್ಮ ಸರ್ಕಾರದ ಕೊಡುಗೆ ಎಂದು ಹೇಳುವುದಿಲ್ಲ. ಇದು ಒಂದು ದೊಡ್ಡ ಜನಸೇವೆ.

* 1.8 ಕೋಟಿ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಸಿಗುತ್ತಿದೆ. ಇನ್ನೂ 15 ಲಕ್ಷ ಕುಟುಂಬಗಳಿಗೆ ಪಡಿತರ ಚೀಟಿ ನೀಡಲಿದ್ದೇವೆ. ಬಡವರಿಗಾಗಿ ಅನಿಲ ಭಾಗ್ಯ ಯೋಜನೆ ಜಾರಿಗೆ ತಂದಿದ್ದೇವೆ‌. 30 ಲಕ್ಷ ಕುಟುಂಬಗಳಿಗೆ ಇದರಿಂದ ಅನುಕೂಲ ಆಗಲಿದೆ.

* ನಮ್ಮ ಅಮ್ಮ ಹಸಿ ಸೌದೆಯಲ್ಲಿ‌ ಅಡುಗೆ ಮಾಡುವಾಗ ಹೊಗೆ ಬಂದು ಕಣ್ಣೀರು ಹಾಕುತ್ತಿದ್ದರು. ಆ ಕಷ್ಟದ ಅರಿವಾಗಿಯೇ ಅನಿಲ ಭಾಗ್ಯ ಯೋಜನೆಯಲ್ಲಿ ಸ್ಟವ್, ಅನಿಲದ ಸಿಲಿಂಡರ್ ನೀಡುತ್ತಿದ್ದೇವೆ.

ಕಾವೇರಿ: ತೀರ್ಪಿಗೆ ಸ್ವಾಗತ; ವಾದ ಮಂಡಿಸಿದ ನಮ್ಮ ವಕೀಲರಿಗೆ ಅಭಿನಂದನೆ
* ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧದ ತೀರ್ಪಿನಲ್ಲಿ ಬೆಂಗಳೂರಿಗೂ ನೀರು ಸಿಕ್ಕಿದೆ. ನಾನು ಆ ತೀರ್ಪು ಸ್ವಾಗತ ಮಾಡಿ ವಾದ ಮಂಡಿಸಿದ ನಮ್ಮ ವಕೀಲರನ್ನು ಅಭಿನಂದಿಸುತ್ತೇನೆ. ಮಹಾದಾಯಿ ವಿಚಾರದಲ್ಲೂ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ಮಹಾದಾಯಿ ವಿಷಯದಲ್ಲಿ ಕೊಂಚ ರಾಜಕೀಯ ಆಗಿರಬಹುದು. ಆದರೆ ಕಾವೇರಿ ವಿಚಾರದಲ್ಲಿ ಪ್ರತಿ ಪಕ್ಷಗಳೂ ಸೇರಿ ಯಾರೂ ರಾಜಕೀಯ ಮಾಡಲಿಲ್ಲ ಎಂದು ಸಿಎಂ ಉತ್ತರಿಸಿದರು.

* ಕೃಷಿ ಉತ್ಪನ್ನಗಳಿಗೆ ಸೂಕ್ತ ದರ ಒದಗಿಸಲು ಎಪಿಎಂಸಿಗಳಲ್ಲಿ ಏಕರೂಪ ಮಾರುಕಟ್ಟೆ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಆನ್‌ಲೈನ್ ಪದ್ಧತಿಯನ್ನು ಅಳವಡಿಸಿದ್ದೇವೆ. ಇದು ಕೇಂದ್ರದ ನೀತಿ ಆಯೋಗದಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ಇದು ದೇಶದಲ್ಲೇ ಪ್ರಥಮ.

* ರಾಜ್ಯದಲ್ಲಿ ರೈತರ ಆತ್ಮಹತ್ಯೆ ಆಗಿರುವುದು ನಿಜ. ಹಿಂದೆಯೂ ಆಗಿದೆ. ಭೀಕರ ಬರಗಾಲದ ಪರಿಣಾಮ ಆತ್ಮಹತ್ಯೆ ಪ್ರಕರಣಗಳು ಕೊಂಚ ಹೆಚ್ಚಾದವು. ಆದರೆ, ಈ ವರ್ಷ ಕಡಿಮೆಯಾಗಿದೆ.

* ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ಸರ್ಕಾರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತದೆ. ಹೀಗಾಗಿ ಸಾವಿಗೆ ಶರಣಾಗಬೇಡಿ ಎಂದು ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಈ ಹಿಂದೆಯೂ ಮನವಿ ಮಾಡಿದ್ದೇನೆ.

* ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಕುಟುಂಬದವರಿಗೆ ನೀಡುವ ಪರಿಹಾರ ಐದು ಲಕ್ಷಕ್ಕೆ ಹೆಚ್ಚಿಸಿ  ಮಾಸಿಕ ಪಿಂಚಣಿಯಾಗಿ ಎರಡು ಸಾವಿರ ನೀಡುತ್ತಿದ್ದೇವೆ. ಮಕ್ಕಳಿಗೆ ಶಿಕ್ಷಣ, ಕುಟುಂಬದವರಿಗೆ ಆರೋಗ್ಯ ಸೌಲಭ್ಯ ನೀಡುತ್ತಿದ್ದೇವೆ.

* ಕೃಷಿ ಭಾಗ್ಯ ಯೋಜನೆಯಲ್ಲಿ 1.92 ಲಕ್ಣ  ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿದ್ದೇವೆ. 1920 ಕೋಟಿ ರೂ.ಗಳನ್ನು ಇದಕ್ಕಾಗಿ ವೆಚ್ಚ ಮಾಡಿದ್ದೇವೆ. ಇದು ಅತ್ಯಂತ ಜನಪ್ರಿಯ ಯೋಜನೆ ಆಗಿದೆ.

* 70 ಲಕ್ಷ ರೈತರಿಗಾಗಿ ರೈತ ಬೆಳಕು ಯೋಜನೆ ಜಾರಿಗೆ ತರುತ್ತಿದ್ದೇವೆ. ಒಣಭೂಮಿ ಬೇಸಾಯ ಮಾಡುವವರಿಗೆ ಇದರಿಂದ ಅನುಕೂಲ ಆಗಲಿದೆ. ಇದರ ವಾರ್ಷಿಕ ವೆಚ್ಚ ಮೂರೂವರೆ ಸಾವಿರ ಕೋಟಿ. ತೆಲಂಗಾಣದ ಬಳಿಕ ಇಂತಹ ಯೋಜನೆ ಜಾರಿಗೆ ತಂದ ಎರಡನೇ ರಾಜ್ಯ ಕರ್ನಾಟಕ. ಈ ಯೋಜನೆಯಲ್ಲಿ ಐದು ಸಾವಿರದಿಂದ ಹತ್ತು ಸಾವಿರದ ವರೆಗಿನ ಪ್ರೋತ್ಸಾಹ ಧನ ರೈತರಿಗೆ ಸಿಗಲಿದೆ.

* ನಾನು ಬಿಎಸ್ಸಿ ಪಾಸು ಮಾಡಿ ಎಂಎಸ್ಸಿಗೆ ಸೀಟು ಸಿಗದೆ ಊರಿಗೆ ಹೋಗಿ ಹೊಲ ಉಳುತ್ತಿದ್ದೆ. ಬಳಿಕ ಕಾನೂನು ಪದವಿಗೆ ಸೇರಿಕೊಂಡೆ.

* ನಮ್ಮ ಸರ್ಕಾರ ನೀರಾವರಿಗೂ ಹೆಚ್ಚು ಅನುದಾನ ಒದಗಿಸುವ ಜೊತೆಗೆ ಕೆರೆಗಳನ್ನು ತುಂಬಿಸುತ್ತಿದ್ದೇವೆ. 2,600 ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಲು ಸುಮಾರು ಎಂಟು ಸಾವಿರ ಕೋಟಿ ವೆಚ್ಚ ಮಾಡಿದ್ದೇವೆ.

* ಕೆರೆಗಳನ್ನು ತುಂಬಿಸಿದ್ದರಿಂದ ಅಂತರ್ಜಲಮಟ್ಟ ಹೆಚ್ಚಾಗಿದೆ. ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿದೆ. ಕೋಲಾರ ಮತ್ತಿತರ ಜಿಲ್ಲೆಗಳಿಗೆ ಸಂಸ್ಕರಿಸಿದ ನೀರು ಕೊಡಲಿದ್ದೇವೆ. ಇದು ಕುಡಿಯುವ ಉದ್ದೇಶಕ್ಕೆ ಅಲ್ಲ. ಕೆರೆಗಳನ್ನು ತುಂಬಿಸಲು ಮಾತ್ರ. ಇದು ₹2450 ಕೋಟಿ ವೆಚ್ಚದ ಯೋಜನೆ.

* 13 ಸಾವಿರ ಕೋಟಿ ವೆಚ್ಚದಲ್ಲಿ ಎತ್ತಿನ ಹೊಳೆ ಯೋಜನೆ ಜಾರಿಯಾಗುತ್ತಿದೆ. ಇದರಿಂದ ಬಯಲು ಸೀಮೆ ಜಿಲ್ಲೆಗಳಲ್ಲಿ ಕೆರೆಗಳು ತುಂಬಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಆಗಲಿದೆ.

* ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧದ ತೀರ್ಪಿನಲ್ಲಿ ಬೆಂಗಳೂರಿಗೂ ನೀರು ಸಿಕ್ಕಿದೆ. ನಾನು ಆ ತೀರ್ಪು ಸ್ವಾಗತ ಮಾಡಿ ವಾದ ಮಂಡಿಸಿದ ನಮ್ಮ ವಕೀಲರನ್ನು ಅಭಿನಂದಿಸುತ್ತೇನೆ. ಮಹಾದಾಯಿ ವಿಚಾರದಲ್ಲೂ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ.

* ಕಾವೇರಿ ವಿಚಾರದಲ್ಲೂ ಕೆಲವರು ರಾಜಕೀಯ ಮಾಡಲು ನೋಡಿದರು. ರಾಜ್ಯದ ವಕೀಲರು ಸರಿಯಾಗಿ ವಾದ ಮಂಡಿಸಿಲ್ಲ ಎಂದು ತೀರ್ಪು ಬರುವ ಮುನ್ನಾ ದಿನ ಆರೋಪಿಸಿದರು. ಆದರೆ,  ತೀರ್ಪಿನಿಂದ ಎಲ್ಲರೂ ಸಮಾಧಾನದ ಉಸಿರು ಬಿಟ್ಟಿದ್ದಾರೆ.

* ನೀರಾವರಿಗೆ ಐದು ವರ್ಷದಲ್ಲಿ 58 ಸಾವಿರ ಕೋಟಿ ಅನುದಾನ ನಿಗಧಿ ಮಾಡಿ ಜನವರಿ ವರೆಗೆ 44, 542 ಕೋಟಿ ವೆಚ್ಚ ಮಾಡಿದ್ದೇವೆ.  ಕೃಷ್ಣಾ ಮೇಲ್ದಂಡೆಗೆ ಎಂಟೂವರೆ ಸಾವಿರ ಕೋಟಿ ನಿಗಧಿ ಮಾಡಿ ಏಳೂವರೆ ಸಾವಿರ ಕೋಟಿ ಖರ್ಚು ಮಾಡಿದ್ದೇವೆ.

* ನೀರಾವರಿಯ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲು ಒಂದು ಲಕ್ಷ ಕೋಟಿಗೂ ಹೆಚ್ಚು ಅನುದಾನ ಬೇಕಾಗುತ್ತದೆ. ಟೇಕಾಫ್ ಆಗದ ಸರ್ಕಾರ ಈ ಎಲ್ಲ ಕೆಲಸ ಮಾಡಲು ಸಾಧ್ಯವೇ ?

* ಪರಿಶಿಷ್ಟರ ಕಲ್ಯಾಣಕ್ಕೆ  ನಾವು ಜಾರಿಗೆ ತಂದಿರುವ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಕೇಂದ್ರದಲ್ಲಿ ಇದೆಯೇ? ಐದು ವರ್ಷದಲ್ಲಿ ಈ ಕಾನೂನು ಪ್ರಕಾರ ₹ 88 ಸಾವಿರ ಕೋಟಿಗಳನ್ನು ಪರಿಶಿಷ್ಟರ ಕಲ್ಯಾಣಕ್ಕೆ ಖರ್ಚು ಮಾಡಿದ್ದೇವೆ. ಇದು ಹಿಂದಿನ ಸರ್ಕಾರಕ್ಕಿಂತ ನಾಲ್ಕು ಪಟ್ಟು ಹೆಚ್ಚು.

* ಸಾರ್ವತ್ರಿಕ ಆರೋಗ್ಯ ಯೋಜನೆಯನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತರುತ್ತಿದ್ದೇವೆ. 1.40 ಕೋಟಿ ಕುಟುಂಬಗಳಗೆ ಯೋಜನೆ ಸೌಲಭ್ಯ ಸಿಗಲಿದೆ.

* ಬಂಡವಾಳ ಹೂಡಿಕೆಯಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ. ಇದರಿಂದ 13 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಇದು ಗುಜರಾತ್ ನಲ್ಲಿ ಏಕೆ ಸಾಧ್ಯವಾಗಿಲ್ಲ. ನಮಗೆ ಬಂದಿರುವ ಹೂಡಿಕೆಯಲ್ಲಿ ಶೇ.50ರಷ್ಟೂ ಗುಜರಾತ್ ನಲ್ಲಿ ಆಗಿಲ್ಲ.

* ಸಾರಿಗೆ ಇಲಾಖೆಯಲ್ಲಿ 105ಕ್ಕೂ ಹೆಚ್ಚು ಪ್ರಶಸ್ತಿಗಳು ಕೇಂದ್ರದಿಂದಲೇ ಬಂದಿವೆ. ಟೇಕಾಫ್ ಆಗದ, ನಿಷ್ಕ್ರಿಯ ಸರ್ಕಾರಕ್ಕೆ ಇಷ್ಟು ಪ್ರಶಸ್ತಿ ಬರಲು ಹೇಗೆ ಸಾಧ್ಯ.‌ಜಿಡಿಪಿ ಬೆಳವಣಿಗೆ ಕಳೆದ ಸಾಲಿನಲ್ಲಿ 7.5 ಈ ಸಾಲಿನಲ್ಲಿ 8.5. ಇದು ಕೇಂದಕ್ಕಿಂತ ಹೆಚ್ಚು. ನಿಷ್ಕ್ರಿಯ ಸರ್ಕಾರ ಈ ಸಾಧನೆ ಮಾಡಲು ಸಾಧ್ಯವೇ?

* ಸರ್ಕಾರ ಹೆಚ್ಚು ಸಾಲ ಮಾಡಿದೆ, ರಾಜ್ಯ ದಿವಾಳಿ ಆಗಿದೆ ಎನ್ನುತ್ತಾರೆ. ಆದರೆ ನಾವು ವಿತ್ತೀಯ ಶಿಸ್ತು ಮೀರಿಲ್ಲ. ಸಾಲ ಶೇ.25 ಮೀರಬಾರದು ಎಂದಿದೆ. ಆದರೆ ಶೇ.19ಕ್ಕಿಂತ ಕಡಿಮೆ ಇದೆ. ದಿವಾಳಿ ಆಗಲು ಹೇಗೆ ಸಾಧ್ಯ.

* ಆರ್ಥಿಕ ತಜ್ಞರೂ ಆಗಿರುವ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರೇ ರಾಜ್ಯದ ಹಣಕಾಸು ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

* ಕೇಂದ್ರ ದುಡ್ಡು ಕೊಟ್ಟಿದೆ ಲೆಕ್ಕ ಕೊಡಿ ಎನ್ನುತ್ತಾರೆ. ಈಗ ಲೆಕ್ಕ ಕೊಡುತ್ತಿಲ್ಲವೇ. ಕೇಂದ್ರ ಅನುದಾನ ಕೊಟ್ಟಿದೆ. ಅದನ್ನು ರಾಜ್ಯ ತಿಂದು ಹಾಕಿದೆ ಎಂದು ಸುಳ್ಳು ಹೇಳಬಾರದು. ಕೇಂದ್ರ ಸರ್ಕಾರ ಕೊಡುವುದು ನಮ್ಮ ತೆರಿಗೆ ಹಣವನ್ನೇ. ಯಾರೂ ಕೈನಿಂದ ಕೊಡುವುದಿಲ್ಲ. ಕೇಂದ್ರದಿಂದ ಬರಬೇಕಾದ ಅನುದಾನದಲ್ಲಿ ₹10,500 ಕೋಟಿ ಖೋತಾ ಆಗಿದೆ. ಈ ಬಗ್ಗೆ ನಾವು ಯಾರನ್ನು ಕೇಳಬೇಕು.

* ಕೆಲವರು ನನ್ನನ್ನು ರಾಜಕೀಯವಾಗಿ ಟಾರ್ಗೆಟ್ ಮಾಡುತ್ತಾರೆ. ಪರವಾಗಿಲ್ಲ ನಾನು ಅದನ್ನು ಎದುರಿಸಬಲ್ಲೆ. ಸಮರ್ಥವಾಗಿ ಉತ್ತರಿಸಬಲ್ಲೆ. ನನ್ನ ರಾಜಕೀಯ ಪುಸ್ತಕ ತೆರೆದ ಪುಸ್ತಕ.

* ಸುಮ್ಮನೆ ನಮ್ಮ ಸರ್ಕಾರ ಭ್ರಷ್ಟ ಸರ್ಕಾರ ಎನ್ನುತ್ತಾರೆ. ಹತ್ತು ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಆರೋಪಿಸುತ್ತಾರೆ. ದಾಖಲೆ ಎಲ್ಲಿದೆ.

* ನೀರವ್ ಮೋದಿ ಹನ್ನೊಂದು ಸಾವಿರ ಕೋಟಿ ನುಂಗಿ ಪರಾರಿಯಾಗಿದ್ದಾರೆ‌.‌ ಲಲಿತ್ ಮೋದಿ, ವಿಜಯ ಮಲ್ಯ ಸಾವಿರಾರು ಕೋಟಿ ದೋಚಿ ದೇಶದಿಂದ ಓಡಿ ಹೋಗಿದ್ದಾರೆ. ಅದಕ್ಕೆ ಯಾರು ಜವಾಬ್ದಾರಿ.

* ಮಾತೆತ್ತಿದರೆ ಡೈರಿ ಡೈರಿ ಎನ್ನುತ್ತಾರೆ. ಸಹಾರ ಡೈರಿಯಲ್ಲಿ ಯಾರ ಇನಿಷಿಯಲ್ ಇದೆ ಎಂಬುದನ್ನು ಹೇಳಬೇಕು. ಬರೇ ಹೇಳಿದ್ದೇ ಹೇಳುವುದು ಇವರು.

* ಹಾಗಾದರೆ ಕೇಂದ್ರ ಸರ್ಕಾರವನ್ನು 90 ಪರ್ಸೆಂಟ್ ಭ್ರಷ್ಟ ಸರ್ಕಾರ ಎಂದು ಹೇಳುತ್ತೇನೆ. ಬಿಜೆಪಿ ಸರ್ಕಾರ ಇದ್ದಾಗ ಇಲ್ಲಿ ಮುಖ್ಯಮಂತ್ರಿ ಆಗಿದ್ದವರು ಜೈಲಿಗೆ ಹೋಗಿಲ್ಲವೆ. ಅವರಿಂದ ನಾವು ಪಾಠ ಕಲಿಯಬೇಕೇ? ದಾಖಲೆ ಇಲ್ಲದೆ ಸುಳ್ಳು ಆರೋಪಗಳನ್ನು ಮಾಡುವುದು ಹಿಟ್ ಅಂಡ್ ರನ್ ಕೇಸಿನಂತೆ.

* ಸತ್ಯ ಹೇಳಿದರೆ ಬಿಜೆಪಿಯವರು ಸಹಿಸುವುದಿಲ್ಲ. ನೀರವ್ ಮೋದಿ ಬಗ್ಗೆ ಮಾತನಾಡಿದರೆ ಏಕೆ ಅವರು‌ ಸಹನೆ ಕಳೆದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT