ಬೆಂಗಳೂರು: ‘ಮಾದಕ ದ್ರವ್ಯ ಮುಕ್ತ ಭಾರತ ನಿರ್ಮಾಣದ ಸವಾಲುಗಳನ್ನು ಸಾಮಾಜಿಕ, ಸಾರ್ವಜನಿಕ ಜವಾಬ್ದಾರಿಯಾಗಿ ಪರಿವರ್ತಿಸಿದಾಗ ಮಾತ್ರ ಗುರಿ ತಲುಪಲು ಸಾಧ್ಯ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಮಾದಕ ದ್ರವ್ಯ ಕಳ್ಳ ಸಾಗಣೆ ಹಾಗೂ ರಾಷ್ಟ್ರೀಯ ಭದ್ರತೆ ಕುರಿತ ದಕ್ಷಿಣ ರಾಜ್ಯಗಳ ಪ್ರಾದೇಶಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ದೇಶದಲ್ಲಿ ಮಾದಕ ದ್ರವ್ಯದ ಮಾರಾಟ, ಸೇವನೆಯನ್ನು ಸಂಪೂರ್ಣ ನಿರ್ಮೂಲನೆ ಮಾಡುವುದು ದೊಡ್ಡ ಸವಾಲು. ಇಂತಹ ಹೋರಾಟ ಸರ್ಕಾರದ ಪ್ರಯತ್ನಗಳಿಂದ ಸಾಧ್ಯವಿಲ್ಲ. ಸರ್ಕಾರದ ಜತೆಗೆ, ಸಮುದಾಯದ ಪ್ರತಿಯೊಬ್ಬ ನಾಗರಿಕರ ಸಹಕಾರವೂ ಮುಖ್ಯ. ದೇಶದ ಭದ್ರತೆಗೆ ಮಾರಕವಾದ ಈ ವ್ಯಸನವನ್ನು ದೇಶದಿಂದ ಬುಡಸಮೇತ ಕಿತ್ತೆಸೆಯಲು ಎಲ್ಲರೂ ಒಗ್ಗೂಡಬೇಕಿದೆ’ ಎಂದರು.
ಮಾದಕವಸ್ತುಗಳ ಪತ್ತೆ, ಜಾಲದ ನಾಶ, ಅಪರಾಧಿಗಳ ಬಂಧನ ಹಾಗೂ ಮಾದಕ ದ್ರವ್ಯ ವ್ಯಸನಿಗಳಿಗೆ ಪುನರ್ವಸತಿ ಕಲ್ಪಿಸುವ ನಾಲ್ಕು ಹಂತದ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ವಿವರ ನೀಡಿದರು.
ನಿಯಂತ್ರಣಕ್ಕೆ ಕಠಿಣ ಕ್ರಮ: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯದಲ್ಲಿ ಮಾದಕವಸ್ತು ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಶೂನ್ಯ ಸಹಿಷ್ಣುತೆ ನಿಯಮ ಅನುಸರಿಸಲಾಗುತ್ತಿದೆ. ಪ್ರತಿವರ್ಷ ಐದು ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಶಿಕ್ಷೆಯ ಪ್ರಮಾಣವೂ ಅಧಿಕವಾಗಿದೆ’ ಎಂದರು.
‘ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿ ತಮಿಳುನಾಡು ಗಡಿ ಇದೆ. ಹಾಗಾಗಿ, ಮಾದಕ ವಸ್ತು ವಿಚಾರದಲ್ಲಿ ಎರಡೂ ರಾಜ್ಯಗಳ ನಡುವೆ ಸಹಕಾರ ಅಗತ್ಯ. ವಿದೇಶದ ಪ್ರಜೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ನೆರವು ಪಡೆಯಲಾಗುತ್ತಿದೆ’ ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್
ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.