ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಮುಂದಿನ ಫೆಬ್ರುವರಿಯಲ್ಲಿ ‘ಏರೋ ಇಂಡಿಯಾ–2023’ ವೈಮಾನಿಕ ಪ್ರದರ್ಶನ ನಡೆಯುವ ನಿರೀಕ್ಷೆ ಇದ್ದು, ರಾಜ್ಯ ಸರ್ಕಾರ ಪೂರಕ ಸಿದ್ಧತೆ ಆರಂಭಿಸಿದೆ. ಸಂಚಾರ ದಟ್ಟಣೆ ನಿಯಂತ್ರಣ, ವಾಹನ ನಿಲುಗಡೆಗೆ ಸ್ಥಳ ನಿಗದಿ, ವ್ಯವಸ್ಥಿತವಾಗಿ ಬಸ್ ಸಂಚಾರ ಕಲ್ಪಿಸಲು ಈಗಿನಿಂದಲೇ ತಯಾರಿ ಆರಂಭವಾಗಿದೆ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಬಿಬಿಎಂಪಿ, ಬಿಎಂಟಿಸಿ, ಭಾರತೀಯ ವಾಯುಪಡೆ ಮತ್ತು ಸಂಚಾರ ಪೊಲೀಸರ ಜತೆ ಇದೇ 22ರಂದು ಉನ್ನತಮಟ್ಟದ ಸಭೆ ನಡೆಸಿರುವ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಸಿದ್ಧತೆ ಕುರಿತು ನಿರ್ದೇಶನಗಳನ್ನು ನೀಡಿದ್ದಾರೆ. ವಿವಿಧ ಇಲಾಖೆಗಳು, ಸಂಸ್ಥೆಗಳಿಗೆ ಜವಾಬ್ದಾರಿ ಹಂಚಿಕೆಯನ್ನೂ ಮಾಡಿದ್ದಾರೆ.
20,000 ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡುವುದಾಗಿ ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ. ವಾಯುಪಡೆ ಕೇಂದ್ರದಲ್ಲಿನ ಎರಡು, ಗಡಿ ಭದ್ರತಾ ಪಡೆ ಕ್ಯಾಂಪಸ್, ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆವರಣ, ಅರಮನೆ ಮೈದಾನ, ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವ ಯೋಜನೆಯನ್ನು ವಾಯುಪಡೆ ಅಧಿಕಾರಿಗಳು ರೂಪಿಸಿದ್ದಾರೆ.
ವೈಮಾನಿಕ ಪ್ರದರ್ಶನ ಸ್ಥಳದ ಸಮೀಪದ ವಾಹನ ನಿಲುಗಡೆ ಸ್ಥಳಗಳಿಗೆ ಹೆಚ್ಚು ದರದ ಟಿಕೆಟ್ ಖರೀದಿಸಿದವರ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಟಿಕೆಟ್‌ನಲ್ಲೇ ವಾಹನ ನಿಲುಗಡೆ ಶುಲ್ಕವನ್ನೂ ವಿಧಿಸಲಾಗುತ್ತದೆ ಎಂಬ ಮಾಹಿತಿಯನ್ನು ವಾಯುಪಡೆ ಅಧಿಕಾರಿಗಳು ಹಂಚಿಕೊಂಡಿದ್ದಾರೆ.
ವಾಹನ ದಟ್ಟಣೆ ತಪ್ಪಿಸುವುದಕ್ಕಾಗಿ ವೈಮಾನಿಕ ಪ್ರದರ್ಶನದ ಅವಧಿಯಲ್ಲಿ ಯಲಹಂಕ ವಾಯುನೆಲೆಗೆ ಹೆಚ್ಚಿನ ಬಸ್‌ಗಳನ್ನು ಓಡಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಬಿಎಂಟಿಸಿಗೆ ಸೂಚಿಸಲಾಗಿದೆ. ವಾಹನ ನಿಲುಗಡೆ ಸ್ಥಳಗಳಿಂದ ಜನರನ್ನು ಕರೆದೊಯ್ಯುವುದಕ್ಕೆ ಬಸ್‌ಗಳನ್ನು ಓಡಿಸುವಂತೆಯೂ ಸೂಚನೆ ನೀಡಲಾಗಿದೆ. ಜನದಟ್ಟಣೆಯನ್ನು ತಪ್ಪಿಸುವುದಕ್ಕಾಗಿ ಪ್ರತಿದಿನ ಬೆಳಿಗ್ಗೆ 9.30ಕ್ಕೆ ಮೊದಲ ಪ್ರದರ್ಶನ ಆರಂಭಿಸಿ, 10.30ರಿ.ದ 11 ಗಂಟೆಯೊಳಗೆ ಮುಕ್ತಾಯಗೊಳಿಸುವಂತೆ ವಾಯಪಡೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಪರ್ಯಾಯ ಮಾರ್ಗಗಳ ಸಿದ್ಧತೆ: ವಾಯನೆಲೆಯನ್ನು ಸಂಪರ್ಕಿಸಲು 15 ಪರ್ಯಾಯ ಮಾರ್ಗಗಳನ್ನು ಗುರುತಿಸಿ
ರುವ ಸಂಚಾರ ವಿಭಾಗದ ಪೊಲೀಸರು, ಈ ರಸ್ತೆಗಳಲ್ಲಿ ಗುಂಡಿ ಮುಚ್ಚುವುದು ಮತ್ತು ಡಾಂಬರೀಕರಣ ಕಾಮಗಾರಿ ಕೈಗೊಳ್ಳುವಂತೆ ಕೋರಿದ್ದಾರೆ. ಈ ಕೆಲಸವನ್ನು ನಿರ್ವಹಿಸುವಂತೆ ಬಿಬಿಎಂಪಿ ಹಾಗೂ ಲೋಕೋಪಯೋಗಿ ಇಲಾಖೆಗೆ ನಿರ್ದೇಶನ ನೀಡಲಾಗಿದೆ.
ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ, ಮೂಲಸೌಲಭ್ಯ ಅಔಭಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಬಿಬಿಎಂಪಿ ವಿಶೇಷ ಆಯುಕ್ತ ಎಸ್. ರಂಗಪ್ಪ, ಜಂಟಿ ಆಯುಕ್ತೆ ಪೂರ್ಣಮಾ, ಯಲಹಂಕ ವಾಯುನೆಲೆಯ ಗ್ರೂಪ್ ಕ್ಯಾಪ್ಟನ್ ಎಸ್. ಗಿರೀಶ್ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.