ಬೆಂಗಳೂರು: ಇದುವರೆಗಿನ ಅತಿ ದೊಡ್ಡ ವೈಮಾನಿಕ ಮತ್ತು ರಕ್ಷಣಾ ಪ್ರದರ್ಶನ ಎಂದೇ ಖ್ಯಾತಿ ಪಡೆದಿರುವ ‘ಏರೋ ಇಂಡಿಯಾ–2023’ಕ್ಕೆ ವೇದಿಕೆ ಸಜ್ಜುಗೊಂಡಿದ್ದು, ಪ್ರಮುಖವಾಗಿ ವೈಮಾನಿಕ ಕ್ಷೇತ್ರದ ಸ್ವಾವಲಂಬನೆ ಸಾಧಿಸುವ ಆಶಯ ಹೊಂದಿದೆ.
‘2025ರ ವೇಳೆಗೆ ವೈಮಾನಿಕ ಕ್ಷೇತ್ರದಲ್ಲಿ 1.75 ಲಕ್ಷ ವಹಿವಾಟಿನ ಗುರಿ ಹೊಂದಲಾಗಿದೆ. ವೈಮಾನಿಕ ಕ್ಷೇತ್ರದಲ್ಲಿನ ಭಾರತದ ಸಾಮರ್ಥ್ಯ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವುದನ್ನು ಏರೋ ಇಂಡಿಯಾದಲ್ಲಿ ಅನಾವರಣಗೊಳಿಸಲಾಗುವುದು ಎಂದು ಕಮಾಂಡರ್ ಅಚಲ್ ಮಲ್ಹೋತ್ರಾ ಭಾನುವಾರ ತಿಳಿಸಿದರು.
‘ರಕ್ಷಣಾ ವಲಯದಲ್ಲಿ ವಿದೇಶಿ ಹೂಡಿಕೆ ಆಕರ್ಷಿಸುವುದು, ಮಾನವ ರಹಿತ ವಿಮಾನಗಳ ವಲಯಕ್ಕೆ ಉತ್ತೇಜನ ನೀಡುವುದು ಸೇರಿದಂತೆ ರಕ್ಷಣಾ ವಲಯವನ್ನು ಬಲಪಡಿಸುವ ಆಶಯವನ್ನು ಏರೋ ಇಂಡಿಯಾ ಹೊಂದಿದೆ. ಕರ್ನಾಟಕ ಸರ್ಕಾರವು 32 ಒಪ್ಪಂದಗಳಿಗೆ ಸಹಿ ಹಾಕಲಿದೆ’ ಎಂದು ತಿಳಿಸಿದರು.
ಪೆವಿಲಿಯನ್ ಉದ್ಘಾಟನೆ: ಮೊದಲ ದಿನವಾದ ಸೋಮವಾರ ಏರೋ ಇಂಡಿಯಾಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ನಂತರ, ವಿಮಾನಗಳ ಹಾರಾಟ ಪ್ರದರ್ಶನ, ಭಾರತೀಯ ಪೆವಿಲಿಯನ್ ಉದ್ಘಾಟನೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ, ಸೆಮಿನಾರ್‌ಗಳು ನಡೆಯಲಿವೆ.
ಭಾರತೀಯ ಪೆವಿಲಿಯನ್‌ನಲ್ಲಿ 115 ಕಂಪನಿಗಳು ಭಾಗವಹಿಸಲಿದ್ದು, 227 ವಿವಿಧ ಉಪಕರಣಗಳನ್ನು ಪ್ರದರ್ಶಿಸಲಿವೆ. ಎಲ್‌ಸಿಎ ತೇಜಸ್, ಡ್ರೋನ್‌ಗಳು, ಡ್ರೋನ್ ನಿರೋಧಕ ತಂತ್ರಜ್ಞಾನ ಮತ್ತು ರಕ್ಷಣಾ ವಲಯದಲ್ಲಿ ಬಳಕೆಯಾಗುವ ಬಾಹ್ಯಾಕಾಶ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ, ರೋಬೊಟಿಕ್ಸ್ ಭಾರತ ಪೆವಿಲಿಯನ್‌ನ ಪ್ರಮುಖ ಆಕರ್ಷಣೆಯಾಗಲಿವೆ. ಎರಡನೇ ದಿನವಾದ ಮಂಗಳವಾರ ರಕ್ಷಣಾ ಸಚಿವರ ಸಮ್ಮೇಳನ ನಡೆಯಲಿದೆ.
ಬೆಂಗಳೂರಿಗೆ ಮೋದಿ: ಯಲಹಂಕ ವಾಯುನೆಲೆಯಲ್ಲಿ ಆಯೋಜಿಸಲಾಗಿರುವ ಏರೋ ಇಂಡಿಯಾ-2023ರಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಭಾರತೀಯ ವಾಯುಸೇನಾ ವಿಮಾನದ ಮೂಲಕ ಭಾನುವಾರ ಸಂಜೆ ನಗರದ ಎಚ್ಎಎಲ್ ವಿಮಾನಿಲ್ದಾಣಕ್ಕೆ ಬಂದಿಳಿದರು. ಅಲ್ಲಿಂದ ರಾಜಭವನಕ್ಕೆ ತೆರಳಿದರು.
ಸಂಗೀತ ಕಾರ್ಯಕ್ರಮ 15ಕ್ಕೆ: ಯುನೈಟೆಡ್ ಸ್ಟೇಟ್ಸ್ (ಯುಎಸ್) ‘ಏರ್ ಫೋರ್ಸ್ ಬ್ಯಾಂಡ್ ಆಫ್ ದಿ ಪೆಸಿಫಿಕ್ ಫೈನಲ್ ಅಪ್ರೋಚ್’ ತಂಡವು ಫೆ. 15ರಂದು ನಗರದ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದೆ.
2023ರ ಏರೋ ಇಂಡಿಯಾ ಪ್ರದರ್ಶನದ ಅಂಗವಾಗಿ ಭಾರತಕ್ಕೆ ಬಂದಿರುವ ಏಳು ಜನರ ಯುಎಸ್ ಪೆಸಿಫಿಕ್ ತಂಡವು ಈ ಪ್ರದರ್ಶನದಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದೆ. ಅದರ ಜೊತೆಗೆ ಸಂಗೀತದ ಕುರಿತು ಕಾರ್ಯಾಗಾರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.