ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Aero India 2023: ರಕ್ಷಣಾ ಉಪಕರಣಗಳ ಸಾಮರ್ಥ್ಯ ಅನಾವರಣ

Last Updated 14 ಫೆಬ್ರುವರಿ 2023, 4:53 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿನ ಯಲಹಂಕದ ವಾಯುನೆಲೆಯಲ್ಲಿ ಆರಂಭವಾಗಿರುವ ‘ಏರೋ ಇಂಡಿಯಾ’ ಪ್ರದರ್ಶನದಲ್ಲಿ ದೇಶ, ವಿದೇಶಗಳ ವೈಮಾನಿಕ ಹಾಗೂ ರಕ್ಷಣಾ ಪರಿಕರಗಳು ಮೇಳೈಸಿ, ಈ ಕ್ಷೇತ್ರದ ಸಾಮರ್ಥ್ಯವನ್ನು ಅನಾವರಣ ಮಾಡಿವೆ.

ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಉಪಕರಣ ಖರೀದಿ, ಒಡಂಬಡಿಕೆ ಹಾಗೂ ತಂತ್ರಜ್ಞಾನದ ತಿಳಿವಳಿಕೆಗೆ ಈ ಪ್ರದರ್ಶನವು ವೇದಿಕೆ ಒದಗಿಸುತ್ತಿದೆ.

ರಷ್ಯಾ, ಫ್ರಾನ್ಸ್‌, ಇಸ್ರೇಲ್‌ ಸೇರಿದಂತೆ ಹಲವು ರಾಷ್ಟ್ರಗಳ ರಕ್ಷಣಾ ಉಪಕರಣಗಳ ಮಾದರಿಗಳು ಪ್ರದರ್ಶನ ಮಳಿಗೆಯಲ್ಲಿವೆ. ಐದು ದಿನಗಳ ಕಾಲ ನಡೆಯುವ ಪ್ರದರ್ಶನದಲ್ಲಿ, ಮೊದಲ ದಿನವಾದ ಸೋಮವಾರ 700ಕ್ಕೂ ಹೆಚ್ಚು ಕಂಪನಿಗಳು ಬಂದಿದ್ದವು. ಮಂಗಳವಾರ ಮತ್ತಷ್ಟು ಪ್ರದರ್ಶಕರು ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ತಿಳಿಸಿದರು.

ಅತ್ತ ಸೂರ್ಯಕಿರಣ್‌, ಸುಖೋಯ್‌, ತೇಜಸ್‌, ‘ಪ್ರಚಂಡ’ ಬಾನೆತ್ತರದಲ್ಲಿ ಚಿತ್ತಾರ ಮೂಡಿಸಿದ್ದನ್ನು ಕಣ್ರಪ್ಪೆ ಮುಚ್ಚದೆಯೇ ನೋಡಿದ್ದ ಪ್ರೇಕ್ಷಕರು ಪ್ರದರ್ಶನ ಮಳಿಗೆಗಳತ್ತ ಲಗ್ಗೆಯಿಟ್ಟರು.

ಭಾರತದ ಪ್ರದರ್ಶನ ಮಳಿಗೆಯ ಬಳಿ ಇರಿಸಲಾಗಿದ್ದ ಎಚ್‌ಎಎಲ್‌ನ ಪ್ರಚಂಡ ಹೆಲಿಕಾಪ್ಟರ್ ಆಕರ್ಷಣೆ
ಯಾಗಿತ್ತು. ಆ ಹೆಲಿಕಾಪ್ಟರ್‌ ಎದುರು ಪ್ರೇಕ್ಷಕರು ನಿಂತು ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು.

ಇಸ್ರೇಲ್ ವೈಮಾನಿಕ ಸಂಸ್ಥೆ, ಬ್ರಹ್ಮೋಸ್‌ ಏರೋಸ್ಪೇಸ್, ಆರ್ಮಿ ಏವಿಯೇಷನ್, ಎಚ್.ಸಿ.ರೊಬೊಟಿಕ್ಸ್, ಎಚ್ಎಎಲ್, ಬಿಇಎಲ್, ಬಿಇಎಂಎಲ್‌... ಹೀಗೆ ನಾನಾ ಸಂಸ್ಥೆಗಳ ಮಳಿಗೆಗಳಿವೆ. ಈ ಸಂಸ್ಥೆಗಳು ತಯಾರಿಸಿದ ರಕ್ಷಣಾ ಉಪಕರಣಗಳು ಪ್ರದರ್ಶನಕ್ಕೆ ಇಡಲಾಗಿದೆ.

ದೇಶ ಹಾಗೂ ವಿದೇಶದ ಲಘು ಯುದ್ಧ ವಿಮಾನ (ಎಲ್.ಸಿ.ಎ) ಹಾಗೂ ಲಘು ಯುಟಿಲಿಟಿ ಹೆಲಿಕಾಪ್ಟರ್‌, ಯುದ್ಧ ಟ್ಯಾಂಕರ್‌ ಮಾದರಿಗಳು ಇವೆ. ಅವುಗಳ ಕಾರ್ಯಕ್ಷಮತೆ, ವೇಗ, ಕಾರ್ಯಾಚರಣೆಯ ಬಗ್ಗೆ ಪ್ರೇಕ್ಷಕರು ಮಾಹಿತಿ ಪಡೆದುಕೊಂಡರು.

ರಸ್ತೆಯ ಬದಿಯಲ್ಲೂ ವೀಕ್ಷಣೆ: ಬಾನಂಗಳದಲ್ಲಿ ಹೆಲಿಕಾಪ್ಟರ್‌ಗಳು ಕಸರತ್ತು ನಡೆಸಿದ್ದು ಬಳ್ಳಾರಿ ರಸ್ತೆಗೂ ಕಾಣಿಸುತ್ತಿತ್ತು. ಸಾವಿರಾರು ಜನರು ರಸ್ತೆಯ ಎರಡೂ ಬದಿಯಲ್ಲಿ ನಿಂತು ವೈಮಾನಿಕ ಕಸರತ್ತು ವೀಕ್ಷಿಸಿದರು. ಫೆ.17ರ ವರೆಗೆ ಈ ವೈಮಾನಿಕ ಪ್ರದರ್ಶನ ನಡೆಯಲಿದೆ. ಫೆ.16 ಹಾಗೂ 17ರಂದು ಮಾತ್ರ ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಎಲ್ಲೆಲ್ಲೂ ಮೋದಿ ಫೋಟೊ

ಯಲಹಂಕದ ವಾಯುನೆಲೆಯ ಎಲ್ಲೆಡೆ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೊಗಳು ರಾರಾಜಿಸುತ್ತಿದ್ದವು. ಊಟದ ಕೌಂಟರ್‌, ಪ್ರದರ್ಶನ ಮಳಿಗೆ, ಪ್ರವೇಶ ದ್ವಾರ, ವೈಮಾನಿಕ ಪ್ರದರ್ಶನ ನಡೆದ ಆವರಣದ ಬಳಿ ಹಾಕಲಾಗಿದ್ದ ಬೃಹತ್‌ ಫ್ಲೆಕ್ಸ್‌ಗಳಲ್ಲಿ ಮೋದಿ ಫೋಟೊ ಹಾಕಲಾಗಿತ್ತು.

ಉದ್ಘಾಟನೆಗೆ ಪ್ರಧಾನಿ ಆಗಮಿಸಿದ್ದ ಕಾರಣಕ್ಕೆ ವಾಯುನೆಲೆಯ ಸುತ್ತಲೂ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಮೂರು ಹಂತದಲ್ಲಿ ಪ್ರೇಕ್ಷಕರನ್ನು ತಪಾಸಣೆ ನಡೆಸಿ, ವೈಮಾನಿಕ ಪ್ರದರ್ಶನಕ್ಕೆ ಸ್ಥಳಕ್ಕೆ ಬಿಡಲಾಯಿತು. ಲಗೇಜ್‌ ಸ್ಕ್ರೀನಿಂಗ್‌
ವ್ಯವಸ್ಥೆಯಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT