ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ದ ವಿಮಾನಗಳ ಸಿಂಹ ಗರ್ಜನೆ: ವೈಮಾನಿಕ ಪ್ರದರ್ಶನಕ್ಕೆ ಭರ್ಜರಿ ಚಾಲನೆ

ಸೂರ್ಯಕಿರಣ್‌–ಸಾರಂಗಗಳ ಕಣ್ಣಾಮುಚ್ಚಾಲೆಯಾಟ
Last Updated 3 ಫೆಬ್ರುವರಿ 2021, 19:36 IST
ಅಕ್ಷರ ಗಾತ್ರ

ಬೆಂಗಳೂರು:ಭಾರತೀಯ ವಾಯುಪಡೆಯ ರಫೆಲ್‌, ಸುಖೋಯ್‌ 30 ಹಾಗೂ ತೇಜಸ್ ಯುದ್ಧ ವಿಮಾನಗಳ ಸಿಂಹ ಗರ್ಜನೆ, ಎಚ್‌‌ಎಎಲ್‌ ನಿರ್ಮಿಸಿರುವ ವಿವಿಧ ಹೆಲಿಕಾಪ್ಟರ್‌ಗಳ ರುದ್ರ ನರ್ತನ ಹಾಗೂ ಸೂರ್ಯಕಿರಣ– ಸಾರಂಗ ತಂಡಗಳ ಮನಮೋಹಕ ಪ್ರದರ್ಶನಗಳೊಂದಿಗೆ ’ಏರೊ ಇಂಡಿಯಾ‘ ವೈಮಾನಿಕ ಪ್ರದರ್ಶನದ 13ನೇ ಆವೃತ್ತಿಗೆ ಬುಧವಾರ ಭರ್ಜರಿ ಚಾಲನೆ ದೊರಕಿತು.

ರಾಷ್ಟ್ರಧ್ವಜ, ಭಾರತೀಯ ವಾಯುಪಡೆಯ ಧ್ವಜ ಹಾಗೂ ಏರೋ ಇಂಡಿಯಾ 2021ರ ಬಾವುಟಗಳನ್ನು ಹೊತ್ತ ಮೂರು ಎಂಐ–17 ಹೆಲಿಕಾಪ್ಟರ್‌ಗಳು ನೀಲಾಂಬರದಲ್ಲಿ ಸಾಗಿಬರುವ ಮೂಲಕ ವೈಮಾನಿಕ ಪ್ರದರ್ಶನಕ್ಕೆ ನಾಂದಿ ಹಾಡಿದವು.

ನೀಲಾಗಸದಲ್ಲಿ ತೇಲಿಬಂದು ಬೆಳ್ಳಿ ಮೋಡಗಳ ನಡುವೆ ಮರೆಯಾಗುತ್ತಾ ಸೂರ್ಯಕಿರಣ್‌– ಸಾರಂಗ ವೈಮಾನಿಕ ಪ್ರದರ್ಶನ ತಂಡಗಳು ನಡೆಸಿದ ಕಣ್ಣಾಮುಚ್ಚಾಲೆಯಾಟ ದಿನದ ಪ್ರಮುಖ ಆಕರ್ಷಣೆಯಾಗಿತ್ತು. ಈ ಎರಡೂ ತಂಡಗಳು ಅಂಬರದಲ್ಲಿ ‘ಹೃದಯ’ದ ಚಿಹ್ನೆ ಬರೆಯುವ ಮೂಲಕ ಪ್ರೇಕ್ಷಕರ ಮನಸುಗಳನ್ನು ಕದ್ದವು.

ಸೂರ್ಯಕಿರಣ ತಂಡದ ಒಂಬತ್ತು ವಿಮಾನಗಳು ಮಿಂಚಿನ ವೇಗದಲ್ಲಿ ಸಂಚರಿಸುತ್ತಾ ಬಾನಿನಲ್ಲಿ ಬಗೆ ಬಗೆಯ ವಿನ್ಯಾಸಗಳನ್ನು ರೂಪಿಸುತ್ತಾ ಪ್ರೇಕ್ಷಕರು ರೋಮಾಂಚನಗೊಳ್ಳುವಂತೆ ಮಾಡುತ್ತಿದ್ದರೆ, ಇನ್ನೊಂದೆಡೆ ಸಾರಂಗ ತಂಡದ ನಾಲ್ಕು ಹೆಲಿಕಾಪ್ಟರ್‌ಗಳು ಕುಣಿಯುತ್ತಾ ನಲಿಯುತ್ತಾಆಗಸದ ಅಂಗಳದಲ್ಲಿ ಹೊಗೆಯ ಗೆರೆಗಳಲ್ಲೇ ರಂಗವಲ್ಲಿ ಬರೆಯುತ್ತಾ ಮನಮುದಗೊಳಿಸಿದವು.ನೀಲಾಂಬರದಲ್ಲಿ ಹೊಗೆಯುಗುಳುತ್ತಾ ಶರವೇಗದಲ್ಲಿ ಸಾಗಿಬರುವ ಸೂರ್ಯಕಿರಣ ವಿಮಾನಗಳ ರೋಮಾಂಚನಕಾರಿ ವಿನ್ಯಾಸಗಳನ್ನು ಮನತುಂಬಿಕೊಳ್ಳುವುದೋ ಅಥವಾ ಕುಣಿದು ಕುಪ್ಪಳಿಸುತ್ತಿದ್ದ ಸಾರಂಗ ತಂಡದ ಹೆಲಿಕಾಪ್ಟರ್‌ಗಳು ಬಾನಿನಲ್ಲಿ ಮೂಡಿಸಿದ ಬಣ್ಣದೋಕುಳಿಯನ್ನು ಕಣ್ಣಿಗೆ ತುಂಬಿಸಿಕೊಳ್ಳುವುದೋ ಎಂದು ಪ್ರೇಕ್ಷಕರು ದ್ವಂದ್ವದಲ್ಲಿ ಮುಳುಗುವಂತೆ ಮಾಡಿತ್ತು ಈ ತಂಡಗಳ ಪ್ರದರ್ಶನ.

ರವಿಯ ಕಿರಣಗಳು ದಶದಿಕ್ಕುಗಳಿಗೂ ಚದುರುವ ತೆರದಲ್ಲಿ ಸೂರ್ಯಕಿರಣ ವಿಮಾನಗಳು ಒಟ್ಟಾಗಿ ಸಾಗಿಬಂದು ಬೇರೆ ಬೇರೆ ದಿಕ್ಕುಗಳಿಗೆ ಹಾರುವ ಮೂಲಕ ಅವು ಮೂಡಿಸಿದ ‘ವಿಕ್ಸೆನ್‌ ಬ್ರೇಕ್‌’ ಕಸರತ್ತು ಅವುಗಳ ಹೆಸರಿಗೆ ಅನ್ವರ್ಥವಾಗುವಂತಿತ್ತು. ಭಾರತಿಯ ವಾಯುಪಡೆಯ ತೇಜಸ್‌, ರಫೆಲ್‌ ಹಾಗೂ ಸುಖೋಯ್‌ ವಿಮಾನಗಳ ಹೆಸರಿನ ವಿನ್ಯಾಸಗಳನ್ನೂ ಆಗಸದಲ್ಲಿ ಮೂಡಿಸುವ ಮೂಲಕ ಸೂರ್ಯಕಿರಣ ತಂಡ ಗಮನ ಸೆಳೆಯಿತು.

ಪರಸ್ಪರ ಚುಂಬಿಸುತ್ತೇವೆಯೇನೋ ಎಂಬಂತೆ ಸಾಗಿಬಂದು ಕೊನೆಯ ಕ್ಷಣದಲ್ಲಿ ಚದುರಿ ಬೇರೆಯಾಗುವ ಸಾರಂಗ ತಂಡದ ‘ಲೆವೆಲ್‌ ಕ್ರಾಸ್‌’ ಕಸರತ್ತು ಮೈನವಿರೇಳಿಸುವಂತಿತ್ತು. ಇದರ ನೆನಪು ಮಾಸುವ ಮುನ್ನವೇ ಸೂರ್ಯಕಿರಣ್‌ ತಂಡವು ಶತ್ರುಗಳ ದಿಕ್ಕು ತಪ್ಪಿಸಲು ಬಳಸುವ ಜಿಂಕಿಂಗ್‌ ಕ್ರಾಸ್‌ ವಿನ್ಯಾಸ ಪ್ರದರ್ಶಿಸಿತು. ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಮಿಂಚಿನ ವೇಗದಲ್ಲಿ ಸಾಗಿ ಬಂದು ಕೆಲವೇ ಇಂಚುಗಳ ಅಂತರದಲ್ಲಿ ತಪ್ಪಿಸಿಕೊಳ್ಳುವ ಈ ಕಸರತ್ತುರೋಮಾಂಚನ ನೀಡಿತು.

ಅಬ್ಬರಿಸಿದ ಬ್ರಹ್ಮಾಸ್ತ್ರ: ನಂತರ ನುಗ್ಗಿ ಬಂದಿದ್ದು ಭಾರತದ ವಾಯುಪಡೆಯ ಹೊಸ ಬ್ರಹ್ಮಾಸ್ತ್ರ ರಫೆಲ್‌. ಮೂರು ರಫೆಲ್‌ ವಿಮಾನಗಳು ಚಿತ್ತಾಕರ್ಷಕ ವಿನ್ಯಾಸಗಳನ್ನು ಪ್ರದರ್ಶಿಸಿದವು. ಒಂದು ಸುಖೋಯ್‌ 30ಎಂಕೆ–1, ಎರಡು ಜಾಗ್ವಾರ್‌ ವಿಮಾನಗಳು, ಎರಡು ಹಾಕ್‌ ವಿಮಾನಗಳ ಸೇರಿ ಐದು ವಿಮಾನಗಳ ಸಮೂಹ ಮೂಡಿಸಿದ ಗರುಡ ಚಿತ್ತಾರ ಪ್ರೇಕ್ಷಕರನ್ನು ಸಮ್ಮೋಹನಗೊಳಿಸಿತು.

ಆಗಸದಲ್ಲಿ ಮೂಡಿದ ತ್ರಿಶೂಲ: ಮೂರು ಸುಖೋಯ್‌ 30 ಎಂಕೆ–1 ವಿಮಾನಗಳು ಯಲಹಂಕದ ಬಾನಿನ ಉದ್ದಗಲವನ್ನು ಅಕ್ಷರಶಃ ಆವರಿಸಿ ಬಿಟ್ಟವು. ಕಿವಿಗಡಚಿಕ್ಕುವ ಸದ್ದು ಮೊಳಗಿಸುತ್ತಾ ಮಿಂಚಿನ ವೇಗದಲ್ಲಿ ಸಂಚರಿಸುತ್ತಾ ಆರ್ಭಟಿಸಿದ ಈ ಯುದ್ಧ ವಿಮಾನಗಳು ಪ್ರಶಾಂತವಾದ ಆಗಸದಲ್ಲಿ ರುದ್ರ ನರ್ತನ ಮಾಡಿದವು.

ಉದ್ಘಾಟನಾ ದಿನ ಸಾರ್ವಜನಿಕರಿಗ ಸೀಮಿತ ಸಂಖ್ಯೆಯಲ್ಲಿ ಅವಕಾಶ ನೀಡಲಾಗಿತ್ತು. ಹಾಗಾಗಿ ಪ್ರೇಕ್ಷಕರ ಸಂಖ್ಯೆ ಕಡಿಮೆ ಇತ್ತು.

‘ಆತ್ಮನಿರ್ಭರ ಕಸರತ್ತು– ದೇಸಿ ಹೆಜ್ಜೆಗುರುತು’

ಎಚ್‌ಎಎಲ್ ಅಭಿವೃದ್ಧಿ ಪಡಿಸಿದ ವಿಮಾನಗಳುದೇಶವು ಸ್ವಾವಲಂಬನೆಯ ಹಾದಿಯಲ್ಲಿ ಸಾಗಲೆಂಬ ಆಶಯದೊಂದಿಗೆ ಈ ಬಾರಿ ‘ಆತ್ಮನಿರ್ಭರ’ ವಿನ್ಯಾಸದಲ್ಲಿ ಹಾರಾಟ ನಡೆಸಿದವು. ಲಘು ಯುದ್ಧ ಹೆಲಿಕಾಪ್ಟರ್‌, ಹಾಕ್‌–ಐ, ಇಂಟರ್ ಮೀಡಿಯೇಟ್‌ ಜೆಟ್‌ ಟ್ರೈನರ್‌ (ಐಜೆಟಿ) ಹಾಗೂ ಎರಡು ತರಬೇತಿ ವಿಮಾನಗಳು (ಎಚ್‌ಟಿಟಿ–40) ಮತ್ತು ‘ಡಾರ್ನಿಯರ್‌ 228’ ವಿಮಾನಗಳ ಬಳಗ ಒಟ್ಟೊಟ್ಟಿಗೆ ಹಾರಾಟ ನಡೆಸಿದವು. ನಾಲ್ಕು ಲಘು ಯುದ್ಧ ಹೆಲಿಕಾಪ್ಟರ್‌ಗಳು (ಎಲ್‌ಸಿಎಚ್‌) ಜೊತೆಯಲ್ಲೇ ಹಾರಿ ಬಂದ ಪರಿ ಅಂಬರಕ್ಕೆ ವಜ್ರದುಂಗುರ ತೊಡಿಸಿದಂತೆ ಕಂಡಿತು.

ಎ–145 ವಾಯುಜನ್ಯ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ ಅಳವಡಿಸಿದ ನೇತ್ರಾ (ಬ್ರೆಜಿಲ್‌ ನಿರ್ಮಿತ ಎಂಬ್ರಾಯರ್‌ 145 ವಿಮಾನ) ರಾಜಗಾಂಭೀರ್ಯದಿಂದ ಸಾಗಿದಳು. ಸಿ–17 ಗ್ಲೋಬ್‌ಮಾಸ್ಟರ್‌ ವಿಮಾನ, ಎರಡು ಸುಖೋಯ್‌ 30 ಎಂಕೆ–1 ವಿಮಾನಗಳು ಇಂಗ್ಲಿಷ್‌ ಅಕ್ಷರ ವಿ ಆಕಾರದಲ್ಲಿ ರಭಸದಿಂದ ನುಗ್ಗಿಬಂದವು.ಎರಡು ತೇಜಸ್‌ ಲಘು ಯುದ್ಧ ವಿಮಾನಗಳ ಗುಂಪು ಸದ್ದು ಮೊಳಗಿಸುತ್ತಾ ನಭದಲ್ಲಿ ಸಾಗಿತು.ಈ ಕಸರತ್ತು ವೈಮಾನಿಕ ಕ್ಷೇತ್ರದಲ್ಲಿ ದೇಸಿ ಹೆಜ್ಜೆಗುರುತುಗಳನ್ನು ಜಾಹೀರುಪಡಿಸಿತು.

ಆಗಾಗ ಸುತ್ತಾಟ ನಡೆಸುವ ಮೂಲಕ ಡಕೋಟಾ ಎಕ್ಸ್‌ಪ್ರೆಸ್‌ ಭಾರತೀಯ ವಾಯುಪಡೆಯ ಆರಂಭಿಕ ದಿನಗಳನ್ನು ನೆನಪಿಸಿತು.

ಹಾರಿದ್ದೊಂದೇ ವಿದೇಶಿ ವಿಮಾನ

ಅಮೆರಿಕದ ಬಿ1ಬಿ ಬಹೂಪಯೋಗಿ ಬಾಂಬರ್ ವಿಮಾನವು ಪ್ರದರ್ಶನದ ಆಕರ್ಷಣೆಯಾಗಿತ್ತು. ತೇಜಸ್ ವಿಮಾನದ ಜೊತೆ ಈ ವಿಮಾನ ಸಾಗಿಬಂತು.ಉದ್ಘಾಟನಾ ಸಮಾರಂಭದ ತರುವಾಯ ನಡೆದ ಕಸರತ್ತಿನಲ್ಲಿ ಬಿ1 ಬಿ ಹೊರತಾಗಿ ಬೇರಾವುದೇ ವಿದೇಶಿ ವಿಮಾನಗಳೂ ಹಾರಾಟ ನಡೆಸಲಿಲ್ಲ.

ತೇಜಸ್‌, ರಫೆಲ್‌ ಪೈಪೋಟಿ

ಕಳೆದ ವರ್ಷವಷ್ಟೇ ಭಾರತೀಯ ವಾಯುಪಡೆಗೆ ಸೇರ್ಪಡೆಯಾದ ರಫೆಲ್‌ ಹಾಗೂ ಎಚ್‌ಎಎಲ್ ಅಭಿವೃದ್ಧಿಪಡಿಸಿರುವ ತೇಜಸ್‌ ಪರಸ್ಪರ ಪೈಪೋಟಿಗೆ ಬಿದ್ದಿವೆಯೇನೋ ಎಂಬಂತೆ ಕಸರತ್ತು ನಡೆಸಿದವು.

ಕಣ್ಣೆವೆ ಮುಚ್ಚುವುದರೊಳಗೆ ಮುಗಿಲೆತ್ತರೆ ಜಿಗಿದು ಮರೆಯಾಗುತ್ತಾ, ಅರೆಕ್ಷಣದಲ್ಲಿ ಧುತ್ತೆಂದು ಪ್ರತ್ಯಕ್ಷವಾಗುತ್ತಾ, ಅಂಬರದಲ್ಲ ಉರುಳು ಸೇವೆ ಮಾಡುತ್ತಾ, ತಲೆಕೆಳಗಾಗಿ ಹಾರುತ್ತಾ ಪ್ರದರ್ಶಿಸಿದ ವಿನ್ಯಾಸಗಳು ಪ್ರೇಕ್ಷಕರ ಎದೆ ಢವಗುಟ್ಟುವಂತೆ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT