ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರೀಕ್ಷೆ ನಂತರದ ಸವಾಲುಗಳೂ ಕಠಿಣ’

ರಾಜ್‌ಕುಮಾರ್‌ ಸಿವಿಲ್‌ ಸರ್ವಿಸ್‌ ಅಕಾಡೆಮಿಯಿಂದ ತರಗತಿ ಪ್ರಾರಂಭ
Last Updated 23 ಜೂನ್ 2019, 20:18 IST
ಅಕ್ಷರ ಗಾತ್ರ

ಬೆಂಗಳೂರು:‘ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳು ಕಠಿಣ ಮತ್ತು ಸಂಕೀರ್ಣವಾಗಿರುತ್ತವೆ. ಆದರೆ, ಈ ಪರೀಕ್ಷೆ ಉತ್ತೀರ್ಣಗೊಳಿಸಿ ಸೇವೆಗೆ ಸೇರಿದ ಮೇಲೆ ಎದುರಾಗುವ ಸವಾಲುಗಳು ಪರೀಕ್ಷೆಗಿಂತ ಕಠಿಣವಾಗಿರುತ್ತವೆ’ ಎಂದು ಡಿಜಿಪಿ-ಐಜಿಪಿ ನೀಲಮಣಿ ರಾಜು ಭಾನುವಾರ ಹೇಳಿದರು.

ರಾಜ್‌ಕುಮಾರ್‌ ಸಿವಿಲ್‌ ಸರ್ವಿಸ್‌ ಅಕಾಡೆಮಿಯಿಂದ ಮೂರನೇ ವರ್ಷದ ತರಬೇತಿ ಪ್ರಾರಂಭೋತ್ಸವದಲ್ಲಿ ಮಾತನಾಡಿದ ಅವರು, ‘ಜನರಿಗೆ ಸೇವೆ ಸಲ್ಲಿಸುವುದನ್ನೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡಿದರೆ ಇಂತಹ ಯಾವ ಸವಾಲುಗಳೂ ಕಠಿಣ ಎನಿಸುವುದಿಲ್ಲ. ಆತ್ಮತೃಪ್ತಿ ಮತ್ತು ಬದ್ಧತೆಯಿಂದ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ’ ಎಂದರು.

‘ನಾನು ನಾಗರಿಕ ಸೇವಾ ಪರೀಕ್ಷೆಗಳನ್ನು ತೆಗೆದುಕೊಂಡ ಸಂದರ್ಭದಲ್ಲಿ ಈಗಿನಂತೆ ತರಬೇತಿ ಕೇಂದ್ರಗಳು ಇರಲಿಲ್ಲ, ಸೂಕ್ತ ಮಾರ್ಗದರ್ಶನವೂ ಸಿಗುತ್ತಿರಲಿಲ್ಲ. ಆದರೆ, ಈಗ ಪರೀಕ್ಷೆಗಳು ಹೆಚ್ಚು ಸಂಕೀರ್ಣವಾಗಿರುವುದರಿಂದ ತರಬೇತಿಯ ಅಗತ್ಯವಿದೆ’ ಎಂದರು.

ಅಕಾಡೆಮಿಯ ಮುಖ್ಯಸ್ಥರಾದ ರಾಘವೇಂದ್ರ ರಾಜ್‌ ಕುಮಾರ್, ‘ತಂದೆ–ತಾಯಿ ಜಗತ್ತಿನ ಯಾವುದೇ ವಿಶ್ವವಿದ್ಯಾಲಯಗಳಿಗಿಂತ ದೊಡ್ಡವರು. ಅವರ ಜೀವನಾನುಭವದಿಂದ ನಾವೆಲ್ಲರೂ ಕಲಿಯಬೇಕು’ ಎಂದರು.

‘ಮಾವಿನ ಹಣ್ಣಿಗೆ ನಿತ್ಯ ನೀರು ಸುರಿದರೂ, ಅದು ಸಮಯ ಬಂದಾಗ ಮಾತ್ರ ಫಲ ನೀಡುತ್ತದೆ. ಅದೇ ರೀತಿ, ನಾವು ಎಷ್ಟೇ ಪರಿಶ್ರಮ ಪಟ್ಟರೂ, ನಿತ್ಯ ಓದಿದರೂ ಸಮಯ ಬಂದಾಗ ಮಾತ್ರ ಅದರ ಫಲ ದೊರೆಯುತ್ತದೆ. ನಿರಂತರ ಅಭ್ಯಾಸ ಮಾಡುತ್ತಿರಬೇಕು’ ಎಂದರು.

ಐಆರ್‌ಎಸ್‌ ಅಧಿಕಾರಿ ಡಿ.ಸಿ. ಸೌಮ್ಯಾ, ‘ಸಮಯ ನಿರ್ವಹಣೆ ಅರಿವು, ಬರವಣಿಗೆ ಕೌಶಲ, ಸತತ ಅಭ್ಯಾಸ ಹಾಗೂ ಸಾಧಿಸುವ ಛಲ ಇದ್ದರೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬಹುದು’ ಎಂದು ಸಲಹೆ ನೀಡಿದರು.

ಕಳೆದ ಪರೀಕ್ಷೆಯಲ್ಲಿ 45ನೇ ರ‍್ಯಾಂಕ್‌ ಪಡೆದಿರುವ ಲಕ್ಷ್ಮಿ ಮಾತನಾಡಿದರು.ಗೀತಾ ಶಿವರಾಜ್‌ ಕುಮಾರ್, ಮಂಗಳಾ ರಾಘವೇಂದ್ರ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT