ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಬಳಿಕ ಬಾನಿನಲ್ಲಿ ಬಣ್ಣದ ಚಿತ್ತಾರ

ಮುಕ್ತವಾಗಿ ಹಾರಾಡುತ್ತಿರುವ ಬಾನಾಡಿಗಳು
Last Updated 17 ಏಪ್ರಿಲ್ 2020, 20:09 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ 19 ನಿಯಂತ್ರಣದ ಸಲುವಾಗಿ ಹೇರಿರುವ ಲಾಕ್‌ಡೌನ್‌ನಿಂದ ಜನ ಮನೆಯೊಳಗೆ ಬಂಧಿಯಾಗಿರಬಹುದು. ಆದರೆ, ಇದು ಹಕ್ಕಿಗಳ ಪಾಲಿಗೆ ಹೊಸ ಸ್ವಾತಂತ್ರ್ಯವನ್ನು ದಯಪಾಲಿಸಿದೆ. ನಗರದ ಪಾಲಿಗೆ ಅಪರೂಪವಾಗಿದ್ದ ಬಗೆ ಬಗೆಯ ಬಾನಾಡಿಗಳು ಆಗಸದಲ್ಲಿ ಮುಕ್ತವಾಗಿ ಹಾರಾಡುತ್ತಿವೆ. ಇವು ಬಾನಿನಲ್ಲಿ ಬಣ್ಣದ ಚಿತ್ತಾರಗಳನ್ನೇ ಸೃಷ್ಟಿಸುತ್ತಿವೆ.

‘ಬಣ್ಣದ ಕೊಕ್ಕರೆಗಳನ್ನು (ಪೇಂಟೆಡ್‌ ಸ್ಟಾರ್ಕ್‌) ರಂಗನತಿಟ್ಟು ಹಾಗೂ ಕೊಕ್ಕರೆ ಬೆಳ್ಳೂರು ಪಕ್ಷಿಧಾಮಗಳಲ್ಲಿ ನೋಡುವುದು ಹೊಸತೇನಲ್ಲ. ಆದರೆ, ನಾನು ಏಪ್ರಿಲ್‌ 11ರಂದು ನಗರದ ನ್ಯಾಯಾಂಗ ಬಡಾವಣೆಯ ಬಳಿಯೂ ಬಣ್ಣದ ಕೊಕ್ಕರೆಗಳನ್ನು ನೋಡಿದೆ. ಆಸ್ಟ್ರೇಲಿಯಾ ಖಂಡದಿಂದ ವಲಸೆ ಬರುವ ಈ ಹಕ್ಕಿಗಳನ್ನು ಕಂಡು ರೋಮಾಂಚನಗೊಂಡೆ’ ಎನ್ನುತ್ತಾರೆ ಧನುಷ್‌ ರೆಡ್ಡಿ.

‘ಬಣ್ಣದ ಕೊಕ್ಕರೆ ಮಾತ್ರವಲ್ಲ, ಪೊದೆಗಳು, ಹುಲ್ಲುಗಾವಲುಗಳ ಬಳಿ ಮಾತ್ರ ಕಾಣಸಿಗುವ ಹುಲ್ಲುಹಕ್ಕಿಗಳನ್ನು (ಬ್ರಿಸ್ಲ್ಡ್‌ ಗ್ರಾಸ್‌ಬರ್ಡ್‌) ಕಂಡೆ. ಹದ್ದುಗಳು ನಗರಕ್ಕೆ ಹೊಸತಲ್ಲ. ಆದರೂ ಅವು ಬಾನಿನಲ್ಲಿ ಮುಕ್ತವಾಗಿ ನಡೆಸುವ ಕಸರತ್ತನ್ನು ನಮ್ಮ ಮನೆಯ ಟೆರೇಸ್‌ ಮೇಲೆಯೇ ನಿಂತು ಕಣ್ತುಂಬಿಕೊಳ್ಳುವಾಗ ಖುಷಿಯಾಗುತ್ತದೆ. ಲಾಕ್‌ಡೌನ್‌ ಬಳಿಕ ಹಕ್ಕಿಗಳ ಹಾರಾಟ ಹೆಚ್ಚಾಗಿದೆ’ ಎಂದು ಅವರು ಆತ್ಮವಿಶ್ವಾಸದಿಂದ ಹೇಳಿದರು.

ಬೆಂಗಳೂರು ನಗರ ಜಿಲ್ಲೆಯ ಗೌರವ ವನ್ಯಜೀವಿ ವಾರ್ಡನ್ ಪ್ರಸನ್ನ ಕುಮಾರ್‌, ‘ಹೆಬ್ಬಾಳ ಕೆರೆ, ಮಡಿವಾಳ ಕೆರೆ, ಮೈಲಸಂದ್ರ ಕೆರೆಗಳ ಬಳಿ ನಾನು ಈ ಹಿಂದೆಯೂ ಬಣ್ಣದ ಕೊಕ್ಕರೆಗಳನ್ನು ನೋಡಿದ್ದೇನೆ. ಆದರೆ, ಲಾಕ್‌ಡೌನ್ ಬಳಿಕ ನಗರದ ಬಾನಿನಲ್ಲಿ ಮಾಲಿನ್ಯ ಪ್ರಮಾಣ ಕಡಿಮೆಯಾಗಿರುವುದು ನಿಜ. ಸ್ವಚ್ಛವಾಗಿರುವ ಆಗಸದಲ್ಲಿ ಬಾನಾಡಿಗಳು ಸ್ವಚ್ಛಂದವಾಗಿ ಹಾರಾಡುತ್ತಿವೆ. ಸದ್ದಿನ ಮಾಲಿನ್ಯ ಇಲ್ಲದಿರುವುದರಿಂದ ನಿರಾತಂಕವಾಗಿ ಹಾರಾಡಲು ಅವುಗಳಿಗೆ ಅವಕಾಶ ಸಿಕ್ಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT