ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಪಡೆಯಲು ಸಾಲುಗಟ್ಟಿ ನಿಂತ ಜನ: ವಾರದಲ್ಲಿ ದುಪ್ಪಟ್ಟಾಯಿತು ಬೇಡಿಕೆ

ವಾರದಲ್ಲಿ ದುಪ್ಪಟ್ಟಾಯಿತು ಬೇಡಿಕೆ
Last Updated 1 ಡಿಸೆಂಬರ್ 2021, 18:36 IST
ಅಕ್ಷರ ಗಾತ್ರ

ಬೆಂಗಳೂರು: ಕೆಲವು ರಾಷ್ಟ್ರಗಳಲ್ಲಿ ಓಮೈಕ್ರಾನ್‌ ವೈರಾಣುವಿನಿಂದ ಕೊರೊನಾ ಸೋಂಕು ಹರಡುತ್ತಿದ್ದಂತೆಯೇ ನಗರದಲ್ಲಿ ಕೋವಿಡ್‌ ಲಸಿಕೆ ಪಡೆಯುವವರ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದಿದೆ. ವಾರದಿಂದ ಈಚೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಲಸಿಕೆ ಪಡೆದವರ ಪ್ರಮಾಣವೂ ದುಪ್ಪಟ್ಟಾಗಿದೆ.

ಲಸಿಕಾ ಕೇಂದ್ರಗಳಲ್ಲಿ ಜನ ಮತ್ತೆ ಸಾಲುಗಟ್ಟಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಇದುವರೆಗೆ ಒಂದು ಡೋಸ್‌ ಕೂಡಾ ಪಡೆಯದವರೂ ಲಸಿಕಾ ಕೇಂದ್ರಗಳಿಗೆ ಬರುತ್ತಿದ್ದಾರೆ. ಎರಡನೇ ಡೋಸ್‌ ಪಡೆಯುವುದಕ್ಕೆ ನಿಗದಿಪಡಿಸಿದ ಅವಧಿಯೊಳಗೆ ಲಸಿಕೆ ಪಡೆಯದವರೂ ಈಗ ಕೇಂದ್ರಗಳತ್ತ ಮುಖ ಮಾಡುತ್ತಿದ್ದಾರೆ.

‘ನಗರದಲ್ಲಿ ಕೋವಿಡ್‌ ಎರಡನೇ ಕಾಣಿಸಿಕೊಂಡಾಗ ಇದೇ ರೀತಿ ಜನ ಲಸಿಕಾ ಕೇಂದ್ರಗಳಿಗೆ ಮುಗಿಬಿದ್ದಿದ್ದರು’ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ.ಅರುಂಧತಿ ಚಂದ್ರಶೇಖರ್‌ ಹೇಳಿದರು.

‘ಕಳೆದ ವಾರದವರೆಗೂ ದಿನದಲ್ಲಿ 30 ಸಾವಿರದಿಂದ 40 ಸಾವಿರ ಮಂದಿ ಮಾತ್ರ ಕೋವಿಡ್‌ ಲಸಿಕೆ ಪಡೆಯುತ್ತಿದ್ದರು. 3–4 ದಿನಗಳಿಂದೀಚೆಗೆ ನಿತ್ಯ 80 ಸಾವಿರಕ್ಕೂ ಅಧಿಕ ಮಂದಿ ಲಸಿಕೆ ಪಡೆದಿದ್ದಾರೆ. ಬುಧವಾರವೂ 85 ಸಾವಿರ ಮಂದಿಗೆ ಲಸಿಕೆ ನೀಡಲಾಗಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ.ಕೆ.ವಿ.ತ್ರಿಲೋಕಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಪರೀಕ್ಷೆ ಪ್ರಮಾಣವೂ ಹೆಚ್ಚಳ: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ ಪರೀಕ್ಷೆಯ ಪ್ರಮಾಣವೂ ಹೆಚ್ಚಿದೆ.

‘ಕಳೆದ ವಾರ ನಿತ್ಯ 30 ಸಾವಿರದಷ್ಟು ಮಂದಿಯನ್ನು ಮಾತ್ರ ಕೋವಿಡ್‌ ಪರೀಕ್ಷೆಗೆ ಒಳಪಡಿಸುತ್ತಿದ್ದೆವು. ಈಗ 60 ಸಾವಿರಕ್ಕಿಂತಲೂ ಹೆಚ್ಚು ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ವಾರ್ಡ್‌ ಮಟ್ಟದಲ್ಲಿ ಮೂರು ತಂಡಗಳು ಎಂದಿನಂತೆ ಕೋವಿಡ್‌ ತಪಾಸಣೆಯಲ್ಲಿ ತೊಡಗಿವೆ. ಜೊತೆಗೆ ರೈಲ್ವೆ ನಿಲ್ದಾಣಗಳು, ಬಸ್‌ ನಿಲ್ದಾಣಗಳು, ಮಾಲ್‌ಗಳ ಬಳಿಯೂ ಕೋವಿಡ್‌ ಪರೀಕ್ಷೆ ನಡೆಸಲು ಕ್ರಮಕೈಗೊಂಡಿದ್ದೇವೆ’ ಎಂದು ತ್ರಿಲೋಕಚಂದ್ರ ತಿಳಿಸಿದರು.

‘ಶೀತ, ಜ್ವರ ಹಾಗೂ ಉಸಿರಾಟದ ತೊಂದರೆ ಹೊಂದಿರುವವರನ್ನು ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಬೇಕಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT